

ಹೇಮನಾಥ್ ಪಡುಬಿದ್ರಿ
ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ರೈಲ್ವೆ ಸೇತುವೆ ಹೊಂಡಗಳಿಗೆ ನಾಲ್ಕೈದು ವರ್ಷದಿಂದ ತೇಪೆ ಮೇಲೆ ತೇಪೆ ಹಚ್ಚುತ್ತಿದ್ದಾರೆಯೇ ವಿನಹ ಹೊಸದಾಗಿ ರಸ್ತೆ ಮಾಡುತ್ತಿಲ್ಲ. ಹೀಗಾಗಿ ಈ ರಸ್ತೆ ಹೊಂಡಗಳಿಂದಲೇ ಕೂಡಿರುವಂತಾಗಿದೆ.
ಪ್ರತಿವರ್ಷ ಮಳೆಗಾಲದಲ್ಲಿ ಹೊಂಡ ನಿರ್ಮಾಣವಾಗುವುದು ಈ ರಸ್ತೆಯ ವಿಶೇಷತೆ. ಕಳೆದ ವರ್ಷ 6 ಸಲ ತೇಪೆ ಹಾಕಿದ್ದರೂ ಈ ಬಾರಿ ಮಳೆಗಾಲದಲ್ಲಿ ಮತ್ತೆ ಹೊಂಡ ಬಿದ್ದಿದ್ದು, ಶಾಶ್ವತ ಪರಿಹಾರ ಮರೀಚಿಕೆಯಾಗಿದೆ.
ಯುಪಿಸಿಎಲ್, ನಂದಿಕೂರು ಕೈಗಾರಿಕಾ ಪ್ರದೇಶ ಸೇರಿದಂತೆ ಕಾರ್ಕಳ ಕಡೆ ದಿನನಿತ್ಯ ಭಾರಿ ವಾಹನಗಳ ಸಹಿತ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಅದೆಷ್ಟೋ ಇಂಜಿನಿಯರ್‌ಗಳು ಕರ್ತವ್ಯ ನಿರ್ವಹಿಸಿದ್ದರೂ ಈ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನಗಳು ತೆವಳಿಕೊಂಡು ಸಂಚರಿಸುವಂತಾಗಿದೆ.
ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಈ ಮಾರ್ಗವೆಂದರೆ ನುಂಗಲಾರದ ತುತ್ತಿನಂತಾಗುತ್ತದೆ. ಇಲ್ಲಿ ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ಕಳೆದ ವರ್ಷ ಹೊಂಡದ ಸಮಸ್ಯೆಯಿಂದ ರೋಸಿ ಹೋಗಿದ ಸ್ಥಳೀಯರು, ರಸ್ತೆಯ ಹೊಂಡದಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ತೇಪೆ ಹಾಕುವ ಕಾರ್ಯ ನಡೆದಿತ್ತಾದರೂ ಮತ್ತದೇ ಕಥೆ.
ಕುದುರೆಮುಖ ಸಂಪರ್ಕಿಸುವ ಈ ಹೆದ್ದಾರಿ ದ್ವಿಪಥಗೊಂಡಿದ್ದರೂ ಸಮರ್ಪಕ ಚರಂಡಿ ನಿರ್ಮಾಣ ಮಾಡಿಲ್ಲ. ಹೀಗಾಗಿ ಹೆದ್ದಾರಿಯಲ್ಲಿಯೇ ಮಳೆ ನೀರು ನಿಂತು ಸಮಸ್ಯೆಗೆ ಕಾರಣವಾಗುತ್ತಿದೆ. ಸುಜ್ಲಾನ್ ಯೋಜನಾ ಪ್ರದೇಶದ ಮುಂಭಾಗದ ಚರಂಡಿ ಮುಚ್ಚಿಹೋಗಿ ನೀರು ರಸ್ತೆಯಲ್ಲಿಯೇ ಸಂಗ್ರಹವಾಗುತ್ತಿದ್ದು, ಕೆರೆಯಂತಾಗಿರುತ್ತದೆ. ದೊಡ್ಡ ವಾಹನಗಳ ವೇಗದ ಸಂಚಾರದಿಂದ ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ನೀರು ಸಿಂಚನವಾಗುತ್ತದೆ.
ಈ ಸೇತುವೆಯಿಂದ ಸ್ವಲ್ಪ ಮುಂದಕ್ಕೆ ಖಾಸಗಿ ವಾಣಿಜ್ಯ ಮಳಿಗೆಗಳ ನಿರ್ಮಾಣದಿಂದ ಚರಂಡಿ ಮುಚ್ಚಿ ಹೋಗಿದ್ದು, ನೀರು ಹೆದ್ದಾರಿಯಲ್ಲಿಯೇ ಹರಿಯುತ್ತವೆ. ನಂದಿಕೂರು ಕೈಗಾರಿಕಾ ಪ್ರದೇಶದ ಮುಂಭಾಗ, ಅಡ್ವೆ ಬೈಲು ಬಳಿ ಹೆದ್ದಾರಿಯಲ್ಲಿ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸದ್ದರಿಂದ ತೊಂದರೆಯಾಗುತ್ತಿದೆ. ಅಡ್ವೆ ಬೈಲು ಬಳಿ ನಿರ್ಮಿಸಿರುವ ಕಿರು ಸೇತುವೆಯ ರಸ್ತೆಗೂ ತೇಪೆ ಹಾಕಿದ್ದರೂ ಮತ್ತೆ ಹೊಂಡ ನಿರ್ಮಾಣವಾಗಿದೆ.
ಕೆಳಭಾಗದಲ್ಲಿ ಕೊಂಕಣ ರೈಲು ಮಾರ್ಗ ಹೊಂದಿರುವ ಈ ಸೇತುವೆ ರೈಲ್ವೆ ಇಲಾಖೆ ಅಧೀನದಲ್ಲಿದೆ. ಸೇತುವೆಯ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಿ ಕಾಂಕ್ರೀಟ್ ಹಾಕಿದ್ದರಿಂದ ಸೇತುವೆಯ ರಂಧ್ರಗಳು ಮುಚ್ಚಿಹೋಗಿ ಮಳೆನೀರು ಸಮರ್ಪಕವಾಗಿ ಹರಿಯದೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಈ ಬಗ್ಗೆ ಸ್ಥಳೀಯರು ರೈಲ್ವೆ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ವರ್ಷದ ಹಿಂದೆ ಈ ಹೆದ್ದಾರಿಯನ್ನು ದ್ವಿಪಥವಾಗಿ ಅಭಿವೃದ್ಧಿ ಮಾಡಿದ್ದರೂ ಸೇತುವೆ ಅಗಲ ಮಾಡಲು ಕೊಂಕಣ ರೈಲ್ವೆ ಇಲಾಖೆಯಿಂದಲೇ ತೊಡಕಾಗಿತ್ತು. ಹೀಗಾಗಿ ಕಿರಿದಾದ ಸೇತುವೆಯಲ್ಲಿ ದಿನನಿತ್ಯ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಸೇತುವೆಯಲ್ಲಿರುವ ದೊಡ್ಡ ದೊಡ್ಡ ಹೊಂಡಗಳಿಂದಾಗಿ ನಿತ್ಯವೂ ಅವಘಡವಾಗುತ್ತಿದೆ. ಪ್ರತಿವರ್ಷ ಇದೇ ಸಮಸ್ಯೆ ಪುನಾರಾವರ್ತನೆಯಾಗುತ್ತದೆ. ಇಲಾಖೆ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗುತ್ತಿಗೆದಾರರತ್ತ ಕೈತೋರಿಸಿ ಸುಮ್ಮನಾಗುತ್ತಾರೆ.-ಲಕ್ಷ್ಮಣ ಎಲ್. ಶೆಟ್ಟಿವಾಲ್ಅರಂತಡೆ ನಿವಾಸಿ
ಇಲಾಖೆಯಲ್ಲಿ ತುಂಡು ಕಾಮಗಾರಿ ನಡೆಸಲು ಪ್ರಸ್ತುತ ಸಂದರ್ಭದಲ್ಲಿ ಅವಕಾಶವಿಲ್ಲ. ಹೀಗಾಗಿ ತೊಡಕಾಗಿದೆ. ಸಮಸ್ಯೆಯ ಗಂಭೀರತೆಯನ್ನು ಇಲಾಖೆಯ ಹಿರಿಯ ಇಂಜಿನಿಯರ್ ಗಮನಕ್ಕೆ ತರಲಾಗುವುದು.-ಗಿರೀಶ, ಪ್ರಭಾರ ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಡುಪಿ ವಿಭಾಗ