More

  ತಡರಾತ್ರಿ ರಸ್ತೆಯಲ್ಲಿದ್ದ ಬಾಲಕಿಯ ರಕ್ಷಣೆ: ನಿದ್ರೆಯಲ್ಲಿ 50 ಮೀಟರ್ ದೂರ ನಡೆದು ಹೋಗಿದ್ದ 6 ವರ್ಷದ ಮಗು

  ವಿಜಯವಾಣಿ ಸುದ್ದಿಜಾಲ ಕುಂದಾಪುರ

  ನಿದ್ದೆಗಣ್ಣಿನಲ್ಲಿ ನಡೆಯುವ ಅಭ್ಯಾಸವಿದ್ದ 6 ವರ್ಷದ ಬಾಲಕಿ ತಡರಾತ್ರಿ ಮನೆಯಿಂದ ಸುಮಾರು 50 ಮೀಟರ್‌ನಷ್ಟು ದೂರ ರಸ್ತೆಯಲ್ಲಿ ಸಾಗಿದ್ದು, ದಾರಿಯಲ್ಲಿ ಹೋಗುತ್ತಿದ್ದ ಯುವಕರು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ್ದಾರೆ.

  ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ದಬ್ಬೆಕಟ್ಟೆ ಎಂಬಲ್ಲಿ ಬುಧವಾರ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಸಂಪೂರ್ಣ ನಿರ್ವಾಣ ಸ್ಥಿತಿಯಲ್ಲಿದ್ದ ಬಾಲಕಿ ಕೊರಗಜ್ಜ ಸನ್ನಿಧಾನಕ್ಕೆ ಹೋಗುವ ನಾಮಫಲಕದ ಬಳಿ ನಿಂತಿದ್ದು, ಚಾರುಕಟ್ಟೆ ಬಳಿಯ ಬಾರ್ ಸಿಬ್ಬಂದಿ ವಿಶ್ವನಾಥ ಪೂಜಾರಿ ಹಾಗೂ ಸ್ನೇಹಿತರು ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುವಾಗ ಗಮನಿಸಿ ರಕ್ಷಿಸಿದ್ದಾರೆ.

  ಹೆದರಿಕೊಂಡಿದ್ದ ಬಾಲಕಿಗೆ ಬಟ್ಟೆ ಹೊದೆಸಿದ ಬಳಿಕ ಸ್ಥಳೀಯರ ಸಹಕಾರದೊಂದಿಗೆ ಮನೆಯವರ ಮಾಹಿತಿ ಕಲೆ ಹಾಕಿದ್ದು, ಬಳಿಕ ಮನೆಗೆ ಮುಟ್ಟಿಸಲಾಯಿತು. ಯುವಕರು ಮನೆಗೆ ಬಂದು ಮಗುವನ್ನು ತಲುಪಿಸುವ ತನಕ ಮಗು ಇಲ್ಲದಿರುವುದು ಮನೆಯವರಿಗೆ ಗೊತ್ತೇ ಇರಲಿಲ್ಲ.

  ವೈದ್ಯರ ಅಭಿಪ್ರಾಯವೇನು?

  ನಿದ್ದೆಗಣ್ಣಲ್ಲಿ ಮಗು ಮನೆಯಿಂದ ಸ್ವಲ್ಪ ದೂರ ನಡೆದ ಬಳಿಕ ಪ್ರಜ್ಞಾವಸ್ಥೆಗೆ ಬಂದು ಕತ್ತಲು ಕಂಡು ದಿಕ್ಕೆಟ್ಟು ನಿಂತಿರುವ ಸಾಧ್ಯತೆ ಇದೆ. ಮಗು ಮನೆಯಿಂದ ಸ್ವಲ್ಪದೂರ ನಡೆದ ನಂತರ ಮಳೆ ಬಂದಿರಬಹುದು. ಮಳೆ ನೀರನ್ನು ಕಂಡು ಮಗು ನಿದ್ರೆಯಿಂದ ಪ್ರಜ್ಞಾವಸ್ಥೆಗೆ ಬಂದಿರುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

  ಕೊರಗಜ್ಜನ ಮಹಿಮೆ ಎಂದ ಜನ

  ಕೋಟೇಶ್ವರ -ಹಾಲಾಡಿ ರಾಜ್ಯ ಹೆದ್ದಾರಿ ಕೊರ್ಗಿ ಕೆದೂರಿಗೆ ಹೋಗುವಲ್ಲಿ ದಬ್ಬೆಕಟ್ಟೆ ಸಮೀಪ ಘಟನೆ ನಡೆದಿದ್ದು, ಕೆದೂರಿನ ಕೊರಗಜ್ಜನ ದೈವಸ್ಥಾನಕ್ಕೆ ಮಾರ್ಗ ಸೂಚಿಸುವ ನಾಮಫಲಕದ ಕಂಬದ ಬಳಿಯಲ್ಲಿ ಮುಂದೆ ಹೋಗಲಾಗದೆ ಮಗು ನಿಂತಿದೆ. ಬಾಲಕಿ ಕೊರಗಜ್ಜ ಸನ್ನಿಧಾನಕ್ಕೆ ಹೋಗುವ ನಾಮಫಲಕದ ಬಳಿ ದಿಕ್ಕೆಟ್ಟು ನಿಂತಿದ್ದರಿಂದ ಕೊರಗಜ್ಜನ ಪವಾಡ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕೊರಗಜ್ಜನೇ ಮಗುವನ್ನು ರಕ್ಷಿಸಿದ್ದಾನೆ ಎನ್ನುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts