More

    ಬಂದರಿಗೆ ಬೇಕು ಸಿಸಿಟಿವಿ ಕಣ್ಗಾವಲು

    ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕೆ ಬಂದರು ಪ್ರದೇಶಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.ಸುಮಾರು 32 ಎಕರೆ ವಿಸ್ತೀರ್ಣ ಹೊಂದಿರುವ ದೊಡ್ಡ ಮತ್ತು ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಬಂದರು ಕಳೆದ ಕೆಲವು ವರ್ಷಗಳಿಂದ ಜೆಟ್ಟಿ ವಿಚಾರದಲ್ಲಿ ಬಹಳಷ್ಟು ಸುದ್ದಿಯಲ್ಲಿದೆ.

    ಪ್ರತಿನಿತ್ಯ ಸಾವಿರಾರು ಮೀನುಗಾರರು, ಮೀನು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ದೈನಂದಿನ ಕೆಲಸ ಕಾರ್ಯಗಳಿಗೆ ಗಂಗೊಳ್ಳಿ ಬಂದರಿಗೆ ಭೇಟಿ ನೀಡುತ್ತಿದ್ದಾರೆ. ಆಘಾತಕಾರಿ ವಿಚಾರವೆಂದರೆ ಬಂದರಿಗೆ ಈವರೆಗೆ ಯಾವುದೇ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದಿರುವುದು.

    ಭದ್ರತಾ ಸಿಬ್ಬಂದಿಯೂ ಇಲ್ಲ

    ಬಂದರಿಗೆ ಪ್ರವೇಶಿಸುವ ದ್ವಾರದಲ್ಲಿ ಗೇಟ್ ಅಳವಡಿಸಲಾಗಿದ್ದು, ಬಂದರು ನಿರ್ವಹಣೆಯ ಸಿಬ್ಬಂದಿ ಬಿಟ್ಟರೆ ಇಲಾಖೆಯಿಂದ ಭದ್ರತಾ ಸಿಬ್ಬಂದಿ ನಿಯೋಜನೆಯಾಗಿಲ್ಲ. ಬಂದರಿನ ಸುತ್ತಲೂ ಇನ್ನೂ ಆವರಣ ಗೋಡೆ ನಿರ್ಮಾಣವಾಗಿಲ್ಲ. ಹೀಗಾಗಿ ಯಾರೂ ಎಲ್ಲಿಂದ ಬೇಕಾದರೂ ಬಂದರು ಪ್ರವೇಶಿಸಬಹುದು. ಬಂದರಿನ ಚಲನವಲನಗಳ ಬಗ್ಗೆ ನಿಗಾ ಇರಿಸಲು ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಬಂದರಿಗೆ ಪ್ರವೇಶಿಸುವ ಮತ್ತು ಹೊರ ಹೋಗುವ ವಾಹನಗಳ ಮತ್ತು ಜನರ ಚಲನವಲನಗಳ ಬಗ್ಗೆ ನಿಗಾ ಇರಿಸಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಬಂದರಿನ ಭದ್ರತೆ ದೃಷ್ಟಿಯಿಂದ ಈವರೆಗೆ ಯಾವುದೇ ಕ್ರಮಕೈಗೊಳ್ಳದಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.

    ಬಂದರಿನಲ್ಲಿ ರಾತ್ರಿ ಹೊತ್ತು ಗೇಟಿನಲ್ಲಿ ಸಿಬ್ಬಂದಿ ಇಲ್ಲದಿರುವುದು, ಸುತ್ತಲೂ ಆವರಣ ಗೋಡೆ ಇಲ್ಲದಿರುವುದು ಹಾಗೂ ಸಿಸಿ ಕ್ಯಾಮರಾ ಇಲ್ಲದಿರುವುದು ಪುಂಡ ಪೋಕರಿಗಳಿಗೆ ವರದಾನವಾಗಿ ಪರಿಣಮಿಸಿದೆ. ರಾತ್ರಿ ಹೊತ್ತು ಮೀನಿಗೆ ಗಾಳ ಹಾಕಲು ಅನೇಕ ಜನರು ಬಂದರಿಗೆ ಬರುತ್ತಿದ್ದಾರೆ. ಬಂದರಿನ ಸೀವಾಕ್ ಪ್ರದೇಶದಲ್ಲಿ ಕುಡಿದು ಹರಟೆ ಹೊಡೆಯುವ ಅದೆಷ್ಟೂ ಮಂದಿ ಪ್ರತಿನಿತ್ಯ ನೋಡಲು ಸಿಗುತ್ತಾರೆ. ಬಂದರಿನ ಭದ್ರತಾ ವೈಪಲ್ಯಗಳ ಲಾಭ ಮಾಡಿಕೊಂಡಿರುವ ಕೆಲವರು ಬಂದರಿನಲ್ಲಿ ಕಳ್ಳತನದಂತಹ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಮುಂಬೈ ಬಂದರಿಗೆ ಸಮುದ್ರ ಮಾರ್ಗದ ಮೂಲಕ ಉಗ್ರರು ನುಸುಳಿರುವುದು ನಮ್ಮ ಕಣ್ಮುಂದೆ ಇನ್ನೂ ಇದೆ. ಇಂತಹ ಕೃತ್ಯ ಗಂಗೊಳ್ಳಿಯಲ್ಲೂ ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

    ಮೀನು ಬಾಕ್ಸ್ ಕಳ್ಳತನ

    ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ಇದೆ. ಆದರೂ ಬಂದರಿನಲ್ಲಿ ಕಳವು ಪ್ರಕರಣಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ಬಂದರಿನಲ್ಲಿ ಇಟ್ಟಿರುವ ಮೀನು ಬಾಕ್ಸ್‌ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಬಂದರು ವಠಾರದಲ್ಲಿ ತಂಗುತ್ತಿದ್ದ ಜಾನುವಾರು ಒಂದೊಂದಾಗಿ ಕಳವಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಕೆಲ ವರ್ಷಗಳ ಹಿಂದೆ ಮೀನಿನ ಬಲೆ ಮತ್ತಿತರ ಸಲಕರಣೆಗಳು ಕಳವಾದ ಘಟನೆ ನಡೆದಿತ್ತು.

    ಇಷ್ಟಿದ್ದರೂ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡದಿರುವುದು ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗಬಹುದು. ಆದ್ದರಿಂದ ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ಅವಘಡ ಸಂಭವಿಸುವ ಮೊದಲೇ ಬಂದರಿನಲ್ಲಿ ಆಗತ್ಯವಾಗಿ ಆಗಬೇಕಾಗಿರುವ ಭದ್ರತಾ ವ್ಯವಸ್ಥೆಗಳ ಮಾಡಬೇಕಿದೆ.

    ರಾತ್ರಿ ವೇಳೆ ಬಂದರಿಗೆ ಬರುವ ಜನರನ್ನು ವಿಚಾರಣೆ ನಡೆಸಲಾಗುವುದು. ಪ್ರವೇಶ ದ್ವಾರದಲ್ಲಿರುವ ಗೇಟಿನಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಆವರಣ ಗೋಡೆ ನಿರ್ಮಾಣ ಸಹಿತ ಅಗತ್ಯ ಭದ್ರತೆ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.
    -ನಂಜಪ್ಪ ಎನ್., ಪೊಲೀಸ್ ಇನ್‌ಸ್ಪೆಕ್ಟರ್, ಕರಾವಳಿ ಕಾವಲು ಪೊಲೀಸ್ ಠಾಣೆ, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts