More

    ಕಂಬಳದ ಗದ್ದೆಯಂತಾದ ರಸ್ತೆ!

    ಗಂಗೊಳ್ಳಿ: ಬೈಂದೂರು ತಾಲೂಕಿನ ನಾಡ ಗ್ರಾಪಂ ವ್ಯಾಪ್ತಿಯ ನಾಡದಿಂದ ಕೋಣ್ಕಿ ಮೂಲಕ ಕಡಿಕೆ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಂಬಳದ ಗದ್ದೆಯಂತಾಗಿದೆ.

    ನಾಡದಿಂದ ಕೋಣ್ಕಿ ಮೂಲಕ ಕಡಿಕೆ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ನಿರ್ಮಾಣಗೊಂಡು 15-20 ವರ್ಷ ಕಳೆದರೂ ಈ ರಸ್ತೆಗೆ ಇನ್ನೂ ಡಾಂಬರು ಅಥವಾ ಕಾಂಕ್ರೀಟ್ ಭಾಗ್ಯ ಒಲಿದು ಬಂದಿಲ್ಲ.

    ನರಕ ಯಾತನೆ

    ಇದು ಮಣ್ಣಿನ ರಸ್ತೆಯಾಗಿದ್ದು, ಪ್ರತಿ ವರ್ಷದ ಮಳೆಗಾಲದಲ್ಲಿ ಕಂಬಳದ ಗದ್ದೆಯಂತಾಗುತ್ತದೆ. ಇಲ್ಲಿನ ವಾಹನ ಸವಾರರು, ಶಾಲೆಗೆ ನಡೆದುಕೊಂಡು ಹೋಗುವ ಮಕ್ಕಳು, ಊರಿನಿಂದ ಹೊರ ಹೋಗವ ಜನರು ನಿತ್ಯವೂ ಅನುಭವಿಸುತ್ತಿರುವ ಪಡಿಪಾಟಲು ಹೇಳತೀರದು. ಈ ಭಾಗದಲ್ಲಿ ಸುಮಾರು 40ಕ್ಕೂ ಅಧಿಕ ಮನೆಗಳಿದ್ದು, ನೂರಾರು ಮಂದಿ ಪ್ರತಿನಿತ್ಯ ಪೇಟೆ, ಪಂಚಾಯಿತಿ ಕಡೆಗೆ ಸಂಚರಿಸಲು ಇದೇ ಮಾರ್ಗ ಬಳಸುತ್ತಾರೆ. ಇದೀಗ ಮಳೆಯಿಂದಾಗಿ ರಾಡಿಯೆದ್ದು, ಸಂಪೂರ್ಣ ಕೆಸರುಮಯಗೊಂಡಿದೆ.

    ಮುಖ್ಯ ರಸ್ತೆಯಲ್ಲಿ ಕೆಸರು

    ಇಲ್ಲಿನ ಕಡಿಕೆ ಸರ್ಕಾರಿ ಹಿ.ಪ್ರಾ. ಶಾಲೆಗೆ ತೆರಳಲು ಈ ಭಾಗದ ಮಕ್ಕಳಿಗೆ ಇದೊಂದೇ ಮುಖ್ಯ ರಸ್ತೆಯಾಗಿದೆ. ಕೆಸರಿನ ಮಧ್ಯೆ ನಡೆದುಕೊಂಡು ಹೋಗಲು ಮಕ್ಕಳಿಗೆ ತೊಂದರೆಯಾಗುತ್ತಿದೆ. ಶಾಲೆಗೆ ಹೋಗುವ ವೇಳೆ ಮಕ್ಕಳ ಕಾಲು, ಚಪ್ಪಲಿ, ಬಟ್ಟೆಗೆಲ್ಲ ಕೆಸರು ಮೆತ್ತಿಕೊಂಡಿರುತ್ತದೆ. ಇನ್ನು ಅನೇಕ ಮಂದಿ ನಡೆದುಕೊಂಡು ಹೋಗುವವರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

    ಕೋಣ್ಕಿಯದ್ದೂ ಇದೇ ಪಾಡು

    ಕಡಿಕೆ ಸಂಪರ್ಕ ರಸ್ತೆ ಮಾತ್ರವಲ್ಲ, ನಾಡ ಗ್ರಾಪಂ ವ್ಯಾಪ್ತಿಯ ಕೋಣ್ಕಿ – ದರ್ಲೆಗುಡ್ಡೆ ಕಡೆಗೆ ಸಂಚರಿಸುವ ರಸ್ತೆಯ ಸ್ಥಿತಿಯೂ ಹೀಗೆಯೆ ಇದೆ. ಸುಮಾರು 2 ಕಿ.ಮೀ. ದೂರದ ಮಣ್ಣಿನ ರಸ್ತೆಯಲ್ಲಿ ಮಳೆ ನೀರಿನಿಂದಾಗಿ ರಾಡಿಯೆದ್ದಿದೆ. ವಾಹನ ಸವಾರರು ಕಷ್ಟಪಟ್ಟು ಸಂಚರಿಸುವಂತಾಗಿದೆ. ಈ ಮಾರ್ಗದಲ್ಲಿಯೂ ನಿತ್ಯ ನೂರಾರು ವಾಹನಗಳು, ಶಾಲಾ ಮಕ್ಕಳ ಬಸ್, ಇನ್ನಿತರ ವಾಹನಗಳು ಸಂಚರಿಸುತ್ತಿದ್ದು, ಕೆಸರಿನಿಂದಾಗಿ ತೋಮದರೆ ಅನುಭವಿಸುತ್ತಿದ್ದಾರೆ.

    ಕಡಿಕೆ ಭಾಗದ ಜನ ಹಲವಾರು ವರ್ಷಗಳಿಂದ ಈ ರಸ್ತೆಯ ಅಭಿವೃದ್ಧಿಗೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ, ಮಣ್ಣಿನ ರಸ್ತೆಗೆ ಡಾಂಬರೀಕರಣವಾಗುವ ಕಾಲ ಇನ್ನೂ ಕೂಡಿ ಬಂದಿಲ್ಲ.

    ಕೋಣ್ಕಿ – ದರ್ಲೆಗುಡ್ಡೆ, ನಾಡ- ಕಡಿಕೆ ರಸ್ತೆಗಳದ್ದು ಪ್ರತಿವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ. ಎಲ್ಲ ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದರೂ ಈ ರಸ್ತೆಗಳಿಗೆ ಇನ್ನೂ ಭಾಗ್ಯ ಬಂದಿಲ್ಲ. ಇನ್ನೆಷ್ಟು ಕಾಲ ಈ ಭಾಗದ ಜನರು ಈ ರೀತಿ ಕಷ್ಟ ಅನುಭವಿಸಬೇಕೋ ಏನೋ?
    -ಸುಧೀರ ಕೋಣ್ಕಿ, ಸ್ಥಳೀಯ ನಿವಾಸಿ

    ಕಡಿಕೆ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಈ ಬಗ್ಗೆ ಪಂಚಾಯಿತಿಯಿಂದ ಮತ್ತೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಈಗ ತುರ್ತು ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು.
    -ಹರೀಶ, ಪಿಡಿಒ, ನಾಡ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts