

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಳೆ ಆರಂಭಕ್ಕೂ ಮೊದಲು ಡಾಂಬರು ಹಾಕಿ ಪ್ಯಾಚ್ ವರ್ಕ್ ಮಾಡಿದ್ದರೂ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಿತ್ತು ಹೋಗಿದೆ. ಅಲ್ಲಲ್ಲಿ ಮತ್ತೆ ದೊಡ್ಡ ಹೊಂಡಗಳು ನಿರ್ಮಾಣಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಪಾಂಗಾಳ, ಕಟಪಾಡಿ, ಉದ್ಯಾವರ ಭಾಗಗಳಲ್ಲಿ ಪ್ರತಿವರ್ಷವೂ ಹೆದ್ದಾರಿಯಲ್ಲೇ ಮಳೆ ನೀರು ನಿಲ್ಲುವುದರಿಂದ ರಸ್ತೆಗೆ ಹಾಕಿರುವ ಡಾಂಬರು ಕಿತ್ತು ಹೋಗುತ್ತಿದೆ. ಆದರೂ ಈ ಭಾಗದಲ್ಲಿ ವೈಜ್ಞಾನಿಕ ಕ್ರಮ ಅನುಸರಿಸದೆ ಮೇ, ಜೂನ್ ತಿಂಗಳಲ್ಲಿ ಜಲ್ಲಿಪುಡಿ ಮಿಶ್ರಿತ ಡಾಂಬರು ಹಾಕಲಾಗಿದೆ. ಜುಲೈ ಮೊದಲ ವಾರದಲ್ಲಿ ಸುರಿದ ಮಳೆಗೆ ಅದೆಲ್ಲವೂ ಕೊಚ್ಚಿ ಹೋಗಿ, ಹೊಂಡಗಳು ನಿರ್ಮಾಣಗೊಂಡಿವೆ.
ಹೆದ್ದಾರಿಯಲ್ಲಿ ಹೊಂಡ ಬಿದ್ದಿರುವುದರಿಂದ ಕಾರು, ರಿಕ್ಷಾ ಹಾಗೂ ಬೈಕ್ ಸವಾರರಿಗೆ ಸಮಸ್ಯೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಸವಾರರಿಗೆ ರಸ್ತೆಯಲ್ಲಿರುವ ಹೊಂಡ ಕಾಣಿಸುತ್ತಿಲ್ಲ. ಲಾರಿ, ಬಸ್ ಸಹಿತ ಬೃಹತ್ ವಾಹನಗಳು ಸಾಗುವಾಗ ರಸ್ತೆಯಲ್ಲಿರುವ ನೀರು ಇನ್ನಿತರ ವಾಹನಗಳ ಮೇಲೆ ಹಾರಿ ಬೀಳತೊಡಗಿದೆ. ಸಣ್ಣ ವಾಹನಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಹೆದ್ದಾರಿಯಲ್ಲಿ ಅಲ್ಲಲ್ಲಿ ಅಪಘಾತವಾಗುತ್ತಿರುವ ಸುದ್ದಿ ಕೇಳಿಬರುತ್ತಲಿದೆ.
ರಾ.ಹೆ. 169ಎ ಕಾಮಗಾರಿ ನಡೆಯುತ್ತಿರುವುದರಿಂದ ಪರ್ಕಳದಿಂದ ಹಿರಿಯಡಕ ಮಾರ್ಗವಾಗಿ ಹೆಬ್ರಿವರೆಗೂ ವಾಹನ ಸವಾರರಿಗೆ ಪರದಾಟ ತಪ್ಪಿಲ್ಲ. ಈ ಮಾರ್ಗದಲ್ಲಿ ರಸ್ತೆ ಕೆಸರುಮಯವಾಗಿದ್ದು, ಮಳೆ ಸುರಿದಾಗಲೆಲ್ಲ ಕೆಸರಿನ ಪ್ರಮಾಣ ದ್ವಿಗುಣವಾಗುತ್ತಲಿದೆ. ಬೈಕ್ ಸವಾರರಂತೂ ಭಯದಲ್ಲೇ ವಾಹನ ಚಲಾಯಿಸುವಂತಾಗಿದೆ. ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿರುವುದನ್ನು ಅರಿತ ಜಿಲ್ಲಾಡಳಿತ, ಕೂಡಲೇ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದೆ.
ನವಯುಗ ಸಂಸ್ಥೆಯವರು ಕಳೆದ 1 ವಾರದಿಂದ ಮುಕ್ಕದಿಂದ ಕುಂದಾಪುರದವರೆಗೆ ತೇಪೆ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಅದರೆ, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾಕಿರುವ ಡಾಂಬರು ತೇಪೆ ಮತ್ತೆ ಕಿತ್ತುಹೋಗಿ ಹೊಂಡ ಬೀಳುತ್ತಿದೆ. ಈಗಾಗಲೇ 40 ಟನ್ ಕೋಲ್ಡ್ ಮಿಕ್ಸ್ ಡಾಂಬರು ಉಪಯೋಗಿಸಿ ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ. ಈಗ ಮತ್ತೆ 20 ಟನ್ ಡಾಂಬರಿಗೆ ಆರ್ಡರ್ ಮಾಡಲಾಗಿದೆ. ಮಳೆ ಬರುವುದರಿಂದ ಹಾಗೂ ನೀರು ನಿಂತು ಗುಳಿ ಬೀಳುತ್ತಿದೆ. 1 ದಿನ ಪೂರ್ತಿ ಬಿಸಿಲು ಇದ್ದರೆ 15 ದಿನ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.