More

    ಅಪಾಯದಲ್ಲಿ ಹಳದಗದ್ದೆ ಕಾಲುಸಂಕ

    ವಿಜಯವಾಣಿ ಸುದ್ದಿಜಾಲ ಕುಂದಾಪುರ

    ವಂಡ್ಸೆ ಗ್ರಾಪಂ ವ್ಯಾಪ್ತಿಯ ಹಳದ ಗದ್ದೆ ಕಾಲುಸಂಕ ಅಪಾಯದ ಸ್ಥಿತಿಯಲ್ಲಿದೆ. ಮೂರು ದಶಕದ ಹಿಂದೆ ನಿರ್ಮಿಸಿರುವ ಈ ಕಾಲುಸಂಕದ ರಕ್ಷಣೆಗೆ ಜೋಡಿಸಿದ್ದ ಕಬ್ಬಿಣದ ಸರಳುಗಳು ಕಳಚಿಕೊಂಡಿದ್ದು, ಸಂಚರಿಸುವವರಿಗೆ ಅಪಾಯವಾಗುವ ಸಾಧ್ಯತೆ ಇದೆ.
    ಈ ಭಾಗದ ನಿವಾಸಿಗಳು, ಅಂಗನವಾಡಿ ಮಕ್ಕಳು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಪಾಲಿಗೆ ಈ ಕಾಲುಸಂಕವೇ ಸಂಚರಿಸಲು ಇರುವ ಹೆದ್ದಾರಿಯಂತಿದೆ.

    ಸಂಚಾರಕ್ಕೆ ತೊಂದರೆ

    ಕಾಲುಸಂಕದ ಮೇಲ್ಭಾಗದಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟೆಯ ಹಲಗೆಯನ್ನು ಕಾಲುಸಂಕವಿರುವ ಸಂಚಾರ ಮಾರ್ಗದಲ್ಲಿ ಬೇಕಾಬಿಟ್ಟಿ ಹಾಕಿದ್ದಾರೆ. ಇದರಿಂದ ಇಲ್ಲಿನ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ, ಹಲಗೆಗಳು ಮಳೆ ನೀರಿನಲ್ಲಿ ನೆನೆದು ಹಾಳಾಗುತ್ತಲಿದೆ. ಈ ಬಗ್ಗೆ ಗ್ರಾಪಂಗೆ ಮಾಹಿತಿ ನೀಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

    ಗಮನ ಸೆಳೆದ ಗ್ರಾಪಂ

    ಎಸ್‌ಎಲ್‌ಆರ್‌ಎಂ ಘಟಕದ ಮೂಲಕ ವಂಡ್ಸೆ ಗ್ರಾಪಂ ರಾಜ್ಯದ ಗಮನ ಸೆಳೆದಿದೆ. ಸ್ವಚ್ಛತೆ, ನಿರ್ವಹಣೆ, ಮಹಿಳಾ ಸಬಲೀಕರಣಕ್ಕಾಗಿ ತೆರೆದ ಹೊಲಿಗೆ ತರಬೇತಿ ಕೇಂದ್ರ ಮುಂತಾದ ಜನಪರ ಕಾಳಜಿ, ಅಭಿವೃದ್ಧಿ ಕೆಲಸದ ಮೂಲಕ ಜಿಲ್ಲೆಯ ವಿಶಿಷ್ಟ ಗ್ರಾಪಂ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವಂಡ್ಸೆ ಗ್ರಾಮದಲ್ಲಿ ಮಾಡಿರುವ ಸಾಧನೆಗಾಗಿ ಗಾಂಧಿ ಪುರಸ್ಕಾರವೂ ಲಭಿಸಿದೆ. ಎಸ್‌ಎಲ್‌ಆರ್‌ಎಂ ಘಟಕ ಅಧ್ಯಯನಕ್ಕಾಗಿ ಬೇರೆ ಬೇರೆ ಗ್ರಾಪಂನಿಂದ ವೀಕ್ಷಣೆಗೂ ಬರುತ್ತಿರುತ್ತಾರೆ. ಇಂತಹ ಖ್ಯಾತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಲುಸಂಕ ಸುಸ್ಥಿತಿಯಲ್ಲಿ ಇಲ್ಲದಿರುವುದು ಕಪ್ಪುಚುಕ್ಕೆಯಾಗಿದೆ ಎನ್ನುವುದು ಜನರ ಆರೋಪ.

    ಎಚ್ಚರಿಕೆ ಅಗತ್ಯ

    ಹಳದ ಗದ್ದೆ ಕಾಲುಸಂಕ ಸಂಚಾರಕ್ಕಷ್ಟೇ ಸೀಮಿತವಾಗಿಲ್ಲ. ಇದು ಕೃಷಿ ಚಟುವಟಿಕೆಗೂ ಪೂರಕ. ಇಲ್ಲಿನ ಲಕ್ಷ್ಮಣ ನಾಯ್ಕ ಅವರ ಮನೆ ಸಮೀಪ ಇರುವ ಕಾಲುಸಂಕದ ಕಬ್ಬಿಣದ ಎರಡು ಸರಳು ಪಟ್ಟಿ ಕಿತ್ತು ಹೋಗಿದೆ. ಒಂದು ಬದಿ ಹಿಡಿಕೆ ಕಿತ್ತು ಹೋಗಿದೆ. ಮುಂದೆ ಯಾವುದೇ ದುರಂತ ಸಂಭವಿಸಿ ಪಶ್ಚಾತಾಪ ಪಡುವ ಮೊದಲು ವಂಡ್ಸೆ ಗ್ರಾಪಂ ಎಚ್ಚೆತ್ತುಕೊಳ್ಳಬೇಕಿದೆ.

    broken bridge
    ಹಳದ ಗದ್ದೆ ಕಾಲುಸಂಕಕ್ಕೆ ಆಧಾರವಾಗಿದ್ದ ಕಬ್ಬಿಣದ ಪಟ್ಟಿ ಕಳಚಿಕೊಂಡಿರುವುದು.

    ಕಾಲುಸಂಕದ ಮೇಲ್ಭಾಗದಲ್ಲಿ ಕೃಷಿ ಉದ್ದೇಶಕ್ಕಾಗಿ ಚಿಕ್ಕ ಕಿಂಡಿಅಣೆಕಟ್ಟೆ ಕಟ್ಟಿದ್ದು, ಕಿಂಡಿಗಳಿಗೆ ಪೋಣಿಸುವ ಹಲಗೆಗಳನ್ನು ಕಾಲುಸಂಕದಲ್ಲಿ ಹಾಕಿದ್ದರಿಂದ ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿದೆ. ಬೆಲೆ ಬಾಳುವ ಹಲಗೆಯೂ ಹಾಳಾಗುವುದಲ್ಲದೆ, ತೋಡಲ್ಲಿ ನೀರು ಉಕ್ಕಿ ಹರಿದರೆ ಹಲಗೆ ಕೊಚ್ಚಿಹೋಗಬಹುದಾಗಿದೆ. ಹೀಗಾಗಿ ಹಲಗೆಗಳನ್ನೂ ರಕ್ಷಿಸದಿದ್ದರೆ ಕಿಂಡಿಅಣೆಕಟ್ಟೆಗೆ ಜೋಡಿಸಲು ಹಲಗೆಯೇ ಇಲ್ಲದಂತಾಗಬಹುದು. ತೋಡಿನ ಬದಿಯ ಸಂಚಾರಿ ಮಾರ್ಗದಲ್ಲಿ ಕಟ್ಟಿದ ರಿವಿಟ್ಮೆಂಟ್ ಕುಸಿದಿದೆ. ದುರಸ್ತಿ ಮಾಡದಿದ್ದರೆ ಮಳೆಯ ನೀರು ಕೃಷಿಗೆ ನುಗ್ಗುವುದಲ್ಲದೆ, ಪಾದಚಾರಿಗಳ ಪ್ರಾಣಕ್ಕೂ ಸಂಚಕಾರ ಉಂಟಾಗಬಹುದು ಎನ್ನುತ್ತಾರೆ ಸ್ಥಳೀಯರು.

    ಹಳದ ಗದ್ದೆ ಕಾಲುಸಂಕ ಅಪಾಯಕಾರಿಯಾಗಿದ್ದು, ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಹಾಲು ಡೇರಿಗೆ ಹಾಕುವ ತನಕ ಸಂಚಾರಕ್ಕೆ ಮೂಲವಾಗಿದೆ. ಭಾರಿ ಮಳೆ ಬಂದರೆ ತೋಡಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಸಂಕ ಕುಸಿದು ಅಪಾಯವಾದರೆ ಅದಕ್ಕೆ ಯಾರು ಹೊಣೆ? ವಂಡ್ಸೆ ಗ್ರಾಪಂ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ.
    -ರಕ್ಷಿತ ಕುಮಾರ ವಂಡ್ಸೆ
    ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್

    ಸಣ್ಣ ನೀರಾವರಿ ಮೂಲಕ ಲಕ್ಷ್ಮಣ ನಾಯ್ಕ ಅವರ ಮನೆ ಹತ್ತಿರ ಹಾಗೂ ಮೇಲ್ಭಾಗದಲ್ಲಿ ಕಿಂಡಿಅಣೆಕಟ್ಟೆ ನಿರ್ಮಿಸಿದ್ದು, ಅದರ ಕೆಳಭಾಗದಲ್ಲಿ ಕಾಲುಸಂಕ ಇದೆ. ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ತಂದು ತಕ್ಷಣ ಹಲಗೆ ಬಂದೋಬಸ್ತ್ ಮಾಡುವಂತೆ ತಿಳಿಸಲಾಗುವುದು. ಕಾಲುಸಂಕ ಕುಸಿಯದಂತೆ ಕೂಡಲೇ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ, ಮಳೆಗಾಲದ ನಂತರ ಎರಡೂ ಕಡೆ ಕಬ್ಬಿಣಿದ ಪಟ್ಟಿ ಅಳವಡಿಸುತ್ತೇವೆ.
    -ಉದಯಕುಮಾರ ಶೆಟ್ಟಿ ಅಡಕೆಕೊಡ್ಲು
    ಅಧ್ಯಕ್ಷ, ಗ್ರಾಪಂ ವಂಡ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts