More

    ಹೃನ್ಮನ ಸೆಳೆವ ಕೂಸಳ್ಳಿ ಫಾಲ್ಸ್

    ವಿಜಯವಾಣಿ ಸುದ್ದಿಜಾಲ ಕುಂದಾಪುರ

    ಹಸಿರು ವನಸಿರಿಯ ನಡುವೆ ಭೋರ್ಗರೆಯುವ ಸದ್ದು… ಕಾನನದ ಹಸಿರಿನ ಮಧ್ಯೆ ಕ್ಷೀರಸಾಗರವೇ ಧುಮ್ಮಿಕ್ಕುತ್ತಿರುವ ಭಾಸ… ದೂರದಿಂದ ನೋಡುವಾಗ ಬೆಳ್ನೊರೆಯ ಸಾಲು ಅಂಬರದಿಂದ ಭೂಮಿಗೆ ಜಿಗಿಯುತ್ತಿರುವಂತೆ ಗೋಚರ… ಆಹಾ… ಹೃನ್ಮನಗಳಿಗೆಲ್ಲ ಮುದ, ಸಂತಸ.

    ಇದು, ಕರಾವಳಿ ಪ್ರದೇಶದ ಮಿನಿ ಜೋಗ ಎಂದೇ ಗುರುತಿಸಿಕೊಂಡ ಕೂಸಳ್ಳಿ ಜಲಪಾತದ ವೈಭವ-ಸೊಬಗಿನ ಪರಿ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಸಮೀಪದ ಕೂಸಳ್ಳಿ ಫಾಲ್ಸ್‌ಗೆ ವರುಣದೇವ ಜೀವಕಳೆ ತಂದಿದ್ದಾನೆ. ನೂರಾರು ಅಡಿ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕುವ ಜಲಪಾತ ನೋಡುವುದೇ ಕಣ್ಣಿಗೆ ಹಬ್ಬ.

    ಪ್ರಕೃತಿಯ ಸೊಬಗು

    ಕೂಸಳ್ಳಿ ಜಲಪಾತದ ಬುಡದಿಂದ ಮೇಲ್ಭಾಗಕ್ಕೆ ಚಾರಣ ಮಾಡುವುದು ಬಲು ರೋಮಾಂಚನದ ಅನುಭವ ನೀಡುತ್ತದೆ. ಹಂತಹಂತವಾಗಿ ಇಲ್ಲಿ ನೀರು ಧುಮುಕುವುದರಿಂದ ಕೂಸಳ್ಳಿಯ ಈ ಫಾಲ್ಸ್‌ಗೆ ಅಬ್ಬಿ ಜಲಪಾತ ಎಂದೂ ಕರೆಯುತ್ತಾರೆ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹಚ್ಚ ಹಸಿರಿನ ಕಾಡು. ಜಲಪಾತಕ್ಕೆ ಹೋಗುವಾಗ ದಾರಿಯುದ್ದಕ್ಕೂ ಸಿಗುವ ತೊರೆ, ತಣ್ಣನೆಯ ಅನುಭವ ಮನಕ್ಕೆ ಮುದ ನೀಡುತ್ತದೆ. ಆಗಾಗ ಅಲ್ಲೊಂದು ಇಲ್ಲೊಂದು ಗೋಚರಿಸಿ ಮರೆಯಾಗುವ ಕಾಡು ಪ್ರಾಣಿಗಳೂ ಕಾಣಿಸುತ್ತದೆ.

    ಹೋಗುವುದು ಹೇಗೆ?

    ಬೈಂದೂರು ಎಂದರೆ ಮಾರಿಗೊಂದು ಹೆಜ್ಜೆಗೊಂದು ಪ್ರಕೃತಿ ನೀಡುವ ಕೊಡುಗೆ ಗೋಚರಿಸುತ್ತದೆ. ಉಡುಪಿಯಿಂದ 80 ಕಿ.ಮೀ. ದೂರದಲ್ಲಿ ಕೂಸಳ್ಳಿ ಜಲಪಾತ ಇದೆ. ಶಿರೂರು ತೂದಳ್ಳಿ ರಸ್ತೆಯಿಂದ 8 ಕಿ.ಮೀ. ಪೂರ್ವಾಭಿಮುಖವಾಗಿ ಸಾಗಿ ಬಳಿಕ 4 ಕಿ.ಮೀ. ಕಾಲ್ನಡಿಗೆಯಲ್ಲಿ ಕಾಡುದಾರಿಯಲ್ಲಿ ಸಾಗಬೇಕು. ಚಾರಣಪ್ರಿಯರಿಗಂತೂ ಈ ತಾಣ ಹೇಳಿ ಮಾಡಿಸಿದಂತಿದೆ.

    Koosalli falls 2
    ಧುಮ್ಮಿಕ್ಕಿ ಹರಿಯುವ ಕೂಸಳ್ಳಿ ಜಲಪಾತದ ಬೆಳ್ನೊರೆಗಳ ಹರಿವಿನ ಗಮ್ಮತ್ತು.

    ಕೃಷಿ ಭೂಮಿಗೂ ಆಸರೆ

    ಕೂಸಳ್ಳಿ ಜಲಪಾತ ಕೇವಲ ಕಣ್ಮನ ತಣಿಸೋದಿಲ್ಲ. ಕೃಷಿ ಭೂಮಿಯ ಒಡಲನ್ನೂ ತಂಪಾಗಿಡುತ್ತದೆ. ಸಾವಿರಾರು ಎಕರೆ ಕೃಷಿಭೂಮಿಗೆ ನೀರಣಿಸುತ್ತ, ಶಿರೂರು ಸಮೀಪ ಸಂಕದಗುಂಡಿ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ವರ್ಷಪೂರ್ತಿ ತನ್ನ ಸೊಬಗಿನಿಂದ ಜನರ ಸೆಳೆಯುವ ಈ ಜಲಪಾತ, ಮಳೆಗಾಲದಲ್ಲಂತೂ ಅತ್ಯಾಕರ್ಷಕ.

    ಪ್ರವಾಸಿಗರ ಅಸಡ್ಡೆ

    ಪ್ರಕೃತಿಯ ಸೊಬಗು ಸವಿಯಲು ಬರುವ ಕೆಲ ಪ್ರವಾಸಿಗರ ಅಸಡ್ಡೆ ವರ್ತನೆಯಿಂದ ಇಲ್ಲಿನ ಶುಭ್ರ ವಾತಾವರಣ ಮಲಿನಗೊಳ್ಳುತ್ತಿದೆ. ತಮ್ಮ ಜವಾಬ್ದಾರಿಯನ್ನೂ ಕಡೆಗಣಿಸಿ ತಿನ್ನಲು ತರುವ ಆಹಾರ ಪೊಟ್ಟಣಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲಿಯೇ ಎಸೆದು ವಿಕೃತಿ ಮೆರೆಯುತ್ತಾರೆ. ಸುಂದರ ಪರಿಸರದ ಸೊಬಗು ಸವಿಯುವುದನ್ನು ಬಿಟ್ಟು ಅಲ್ಲಿಯೇ ಬೀರು-ಬ್ರಾಂಡಿ, ಸಾರಾಯಿ ಕುಡಿದು ಖಾಲಿ ಬಾಟಲಿ ಎಸೆದು ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಪ್ರವಾಸಿಗರಿಗೆ ಜವಾಬ್ದಾರಿ ಇರಬೇಕು. ಪರಿಸರ ಹಾಳು ಮಾಡುವದಿದ್ದರೆ ಇಂತಹ ಸುಂದರ ತಾಣಗಳಿಗೆ ಬರಬೇಡಿ ಎನ್ನುತ್ತಾರೆ ಸ್ಥಳೀಯರು.

    ಪ್ರವಾಸೋದ್ಯಮ ಅಭಿವೃದ್ಧಿ ಮರೀಚಿಕೆ

    ಇತ್ತೀಚೆಗಿನ ಕೆಲ ವರ್ಷಗಳಿಂದ ಶಾಸಕರು, ಸಚಿವರು ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಅದೆಷ್ಟು ಅಭಿವೃದ್ಧಿಯಾಗಿದೆಯೋ ತಿಳಿದಿಲ್ಲ. ‘ದೀಪದ ಬುಡ ಕತ್ತಲು’ ಎನ್ನುವಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗಗಳಲ್ಲಿ ಪ್ರಕೃತಿದತ್ತ ನೂರಾರು ಜಲಪಾತಗಳಿವೆ. ಆದರೆ, ಎಷ್ಟು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಸೆಳೆದಿದ್ದೀರಿ ಎಂದು ಪ್ರಶ್ನಿಸಿದರೆ ಬರುವ ಉತ್ತರ ಮೌನವಷ್ಟೇ. ಪ್ರಕೃತಿ ಏನು ಕೊಟ್ಟರೇನು ಬಂತು? ಅದರ ಸದ್ವಿನಿಯೋಗ ಮಾಡಿಕೊಂಡು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಬದ್ಧತೆ ಸರ್ಕಾರಕ್ಕೆ ಬರುವುದೆಂದೋ?

    ಸುಂದರ ಜೋಗ ಜಲಪಾತದಷ್ಟೇ ಅದ್ಭುತವಾಗಿರುವ ಕೂಸಳ್ಳಿ ಫಾಲ್ಸ್‌ಅನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ. ಚಾರಣಪ್ರಿಯರಿಗೆ ಇದು ಸೂಕ್ತ ಪ್ರದೇಶ. ಮನಸ್ಸಿಗೆ ಬೇಸರವಾದಾಗ ಅಥವಾ ಹೊರಗಡೆ ತಿರುಗಾಡಿ ಬರಬೇಕೆಂಬ ಯೋಚನೆ ಬಂದಾಗ ಕೂಸಳ್ಳಿ ಫಾಲ್ಸ್ ಒಳ್ಳೆಯ ಆಯ್ಕೆಯಾಗಿದೆ. ಇದನ್ನು ಪ್ರೇಕ್ಷಣೀಯ ತಾಣವನ್ನಾಗಿಸಲು ಜನಪ್ರತಿನಿಧಿಗಳು ಬದ್ಧತೆ ತೋರಿದರೆ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಅಲ್ಪ ಕಾಣಿಕೆ ಕೊಟ್ಟಂತಾಗುತ್ತದೆ.
    -ನಿರಂಜನ್ ಶೆಟ್ಟಿ
    ಯುವ ಬ್ರಿಗೇಡ್ ಪ್ರಮುಖ, ತಲ್ಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts