More

    ಪರಪಾಡಿ ಸೇತುವೆ ಪಡಿಪಾಟಲು

    -ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರೂ ಸೇತುವೆ ಸಮೀಪ ಎರಡೂ ಬದಿಯಲ್ಲಿ ಇನ್ನೂ ರಸ್ತೆ ಸರಿಪಡಿಸದ್ದರಿಂದ ನಿಟ್ಟೆ ಪರಪಾಡಿ ಸೇತುವೆ ಮೂಲಕ ಸಾಗುವ ವಾಹನ ಸವಾರರ ಸಂಚಾರಕ್ಕೆ ತೊಡಕುಂಟಾಗಿದೆ.

    ನಿಟ್ಟೆ ಗ್ರಾಮದ ಪರಪಾಡಿಯಿಂದ ಬಾರಾಡಿ ಚಿಲಿಂಬಿ (ಅಕ್ಷರಾಪುರ) ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ 2020ರಲ್ಲಿ ಸುಮಾರು 500 ಲಕ್ಷ ರೂ. ವೆಚ್ಚದಲ್ಲಿ 4.20 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಸೇತುವೆ ಬಳಿ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸಮಸ್ಯೆ ಎದುರಾಗಿದೆ.

    ಇಳಿಜಾರಿನಲ್ಲಿ ಹೊಂಡ-ಗುಂಡಿ

    ಮತ್ತೊಂದು ಬದಿಯಲ್ಲಿ ಪರಪಾಡಿ ಸೇತುವೆ ಸಮೀಪದ ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಪರಪಾಡಿ ಸೇತುವೆ ಸಂಪರ್ಕಿಸುವ ಎರಡೂ ಬದಿಯಲ್ಲೂ ಸುಮಾರು ನೂರು ಮೀಟರ್ ಉದ್ದದ ರಸ್ತೆ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡದೆ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ವಾಹನ ಸಂಚಾರದ ಜತೆಗೆ ದಾರಿಹೋಕರಿಗೂ ಸಮಸ್ಯೆ ಎದುರಾಗಿದೆ. ನಿಟ್ಟೆ ಪರಪಾಡಿಯಿಂದ ಸಾಗುವಾಗ ಸೇತುವೆ ಬಳಿ ಇಳಿಜಾರಿನಿಂದ ಕೂಡಿದ್ದು, ಹೊಂಡ-ಗುಂಡಿಗಳಿಂದ ಕೂಡಿದೆ. ಇಲ್ಲಿ ಸಾಗುವ ಬೈಕ್ ಸವಾರರು ಬಿದ್ದು ಗಾಯಗೊಳ್ಳುವಂತಾಗಿದೆ.

    parapadi road
    ಪರಪಾಡಿ ಸೇತುವೆಯ ಬಳಿಯಲ್ಲಿ ಅರ್ಧಕ್ಕೆ ನಿಂತ ರಸ್ತೆಯ ಕಾಮಗಾರಿ.

    ಶಿಥಿಲಗೊಂಡ ಸೇತುವೆ

    ಈ ಭಾಗದ ಚಿಲಿಂಬಿ, ಬಾರಾಡಿ, ಪೆಲತಕಟ್ಟೆ ಹೀಗೆ ಅನೇಕ ಗ್ರಾಮೀಣ ಭಾಗದ ಜನ ನಿತ್ಯ ಈ ಸೇತುವೆ ಮೂಲಕವೇ ಸಾಗುತ್ತಾರೆ. ಹಲವು ದಶಕದ ಹಿಂದೆ ನಿರ್ಮಾಣಗೊಂಡ ಈ ಸೇತುವೆ ಇದೀಗ ಶಿಥಿಲಗೊಂಡಿದೆ. ಸೇತುವೆ ತಳ ಹಾಗೂ ಮೇಲ್ಭಾಗದಲ್ಲಿ ಅಲ್ಲಲ್ಲಿ ಸಿಮೆಂಟ್ ಸ್ಲ್ಯಾಬ್ ಎದ್ದು ಕಬ್ಬಿಣದ ರಾಡ್ ಗೋಚರಿಸುತ್ತಿದೆ. ಸೇತುವೆಯುದ್ದಕ್ಕೂ ಅಲ್ಲಲ್ಲಿ ಗುಂಡಿ ನಿರ್ಮಾಣವಾಗಿದೆ. ತಡೆಗೋಡೆಯೂ ವಾಹನದ ಆರ್ಭಟಕ್ಕೆ ಅಲ್ಲಲ್ಲಿ ಕಿತ್ತು ಹೋಗುತ್ತಿದೆ.

    ಭಾರದ ವಾಹನ ಸಂಚಾರ

    ಈ ಭಾಗದಲ್ಲಿ ಬಹುತೇಕ ಕಲ್ಲು ಕೋರೆಗಳು ಹಾಗೂ ಕ್ರಷರ್ ಕಾರ್ಯಾಚರಿಸುತ್ತಿದ್ದು, ಪರಪಾಡಿ ಸೇತುವೆ ಮೇಲೆ ನಿತ್ಯ ನೂರಾರು ಸಂಖ್ಯೆಯಲ್ಲಿ ಭಾರದ ವಾಹನಗಳು ಸಾಗುತ್ತಿವೆ. ಹೀಗಾಗಿ ಶಿಥಿಲಗೊಂಡಿರುವ ಸೇತುವೆ ಕುಸಿಯಬಹುದು. ಅಪಾಯಕಾರಿಯಾಗುತ್ತಿರುವ ಈ ಸೇತುವೆ ದುರಸ್ತಿ ಕಾರ್ಯ ಆಗಬೇಕಿದೆ. ಎರಡೂ ಬದಿಯಲ್ಲಿ ರಸ್ತೆ ಕಾಮಗಾರಿ ನಡೆಸಿ ಸುಮಾರು ನೂರು ಮೀಟರ್‌ನಷ್ಟು ಮಾತ್ರ ಬಾಕಿ ಇದೆ. ಈ ಕಾಮಗಾರಿ ಪೂರ್ಣ ಆಗೋದು ಯಾವಾಗ? ಜನಪ್ರತಿನಿಧಿಯಾಗಲೀ, ಸಂಬಂಧಪಟ್ಟ ಅಧಿಕಾರಿಗಳಾಗಲೀ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎನ್ನುವುದು ಗ್ರಾಮಸ್ಥರ ಪ್ರಶ್ನೆ.

    ಸೇತುವೆಯ ಎರಡೂ ಬದಿಯಲ್ಲಿ ರಸ್ತೆ ಕಾಮಗಾರಿ ನಡೆದಿಲ್ಲ. ಹೀಗಾಗಿ ಬೈಕ್ ಸವಾರರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು.
    -ಸುಪ್ರಿತಾ, ಗ್ರಾಮಸ್ಥೆ

    ರಸ್ತೆಯೊಂದಿಗೆ ಸೇತುವೆ ರಿಪೇರಿ ಕೆಲಸವೂ ಆಗಬೇಕಾಗಿದೆ. ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
    -ಸಂದೀಪ್‌ಕುಮಾರ, ಗ್ರಾಮಸ್ಥ

    ನಮ್ಮ ಗ್ರಾಮ ನಮ್ಮರಸ್ತೆ ಯೋಜನೆಯಡಿ ಕಾಮಗಾರಿ ನಡೆದಿದ್ದು 5 ವರ್ಷ ರಸ್ತೆ ನಿರ್ವಹಣೆ ಹೊಣೆ ಗುತ್ತಿಗೆದಾರರದ್ದಾಗಿರುತ್ತದೆ. ಸೇತುವೆ ನಿರ್ಮಾಣ ಆಗಬೇಕಾಗಿದ್ದು ಅನುದಾನ ಮಂಜೂರುಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದೆ.
    -ಮಿಥುನ್, ಇಂಜಿನಿಯರ್, ಲೋಕೋಪಯೋಗಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts