More

    ಕಸದಿಂದ ಕಳೆಗುಂದಿದ ಕೆಳಬಾದ್ಲು

    -ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    ಸ್ವಚ್ಛ ಜಾಗವಾಗಿ ಕಂಗೊಳಿಸುತ್ತಿದ್ದ ಕೆಳಬಾದ್ಲು ಸೀತಾ ನದಿ ಸಮೀಪದ ಪ್ರದೇಶವೀಗ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಕಂಗೆಟ್ಟಿದೆ. ಸಾರ್ವಜನಿಕರು, ಈ ಭಾಗದಲ್ಲಿ ವಾಹನದಲ್ಲಿ ಪ್ರಯಾಣಿಸುವವರು ತಮ್ಮ ಮನೆಯ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ದಿನೇದಿನೆ ಪ್ಲಾಸ್ಟಿಕ್ ತ್ಯಾಜ್ಯ ಇಲ್ಲಿ ಹೆಚ್ಚುತ್ತಿದೆ.

    ವಿದ್ಯಾನಗರ ಚಾರ ಎಂಬಲ್ಲಿ ಸೀತಾ ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಹೀಗಾಗಿ ಹೆಬ್ರಿಯಿಂದ ಕುಂದಾಪುರ ಮಾರ್ಗವಾಗಿ ಹೋಗುವವರು, ಚಾರ ಬಸದಿ ರಸ್ತೆ ಮೂಲಕ ಪ್ರಯಾಣಿಸುವವರು ಪರ್ಯಾಯ ಮಾರ್ಗ ಬಳಸಿ ಅಲ್ಲಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಇಲ್ಲಿನ ಬಹುತೇಕ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಆವರಿಸಿದೆ.

    ಜಾನುವಾರುಗಳಿಗೂ ಆಪತ್ತು

    ಈ ಭಾಗದಲ್ಲಿ ಹುಲ್ಲು ಮೇಯಲು ಬರುವ ಹಸುಗಳು ಇಲ್ಲಿರುವ ತ್ಯಾಜ್ಯ ಸೇವಿಸುತ್ತಿವೆ. ಹಳಸಿದ ಹಾಗೂ ಉಳಿದ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಹಾಕಿ ಎಸೆದಿರುವುದನ್ನು ದನ-ಕರುಗಳು ತಿನ್ನುತ್ತಿವೆ. ಹೀಗಾಗಿ ಅವುಗಳ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತಿದೆ. ಇದೇ ಪ್ರದೇಶದಲ್ಲಿ ಚಾರ ಗ್ರಾಪಂ ಕೊಳವೆ ಬಾವಿ ತೆಗೆದಿದ್ದು ಅದರ ತ್ಯಾಜ್ಯಗಳನ್ನೂ ವಿಲೇವಾರಿ ಮಾಡದೆ ಅಲ್ಲಿಯೇ ಬಿಟ್ಟಿದ್ದಾರೆ.

    ಸ್ಥಳೀಯರಿಂದ ಕಾವಲು

    ಮದ್ಯಪಾನ ಮಾಡಿದವರು ರಾತ್ರಿ ವೇಳೆ ಬಾಟಲಿಗಳನ್ನು ತಂದು ಇಲ್ಲಿ ಎಸೆಯುತ್ತಿದ್ದಾರೆ. ಸೇತುವೆ ಮೇಲೆ ವಾಹನ ಹೋಗುತ್ತಿರುವಾಗ ಕೆಲ ಪ್ರಯಾಣಿಕರು ಮನೆಯ ತ್ಯಾಜ್ಯ, ಕೋಳಿ ತ್ಯಾಜ್ಯ, ಕಸ ಎಸೆಯುತ್ತಾರೆ. ದಿನದ ಸ್ವಲ್ಪ ಸಮಯ ಸೇತುವೆ ಬಳಿ ನಿಂತು ಕಸ ಹಾಕುವವರನ್ನು ಸ್ಥಳೀಯರಾದ ವಸಂತ ಶೆಟ್ಟಿ ಎಂಬುವರು ತಡೆದು ಕಸ ಹಾಕದಂತೆ ನೋಡಿಕೊಳ್ಳುತ್ತಾರೆ. ಆದರೆ,ಉಳಿದ ಸಮಯದಲ್ಲಿ ಕಸ ಎಸೆಯುವವರನ್ನು ನಿಯಂತ್ರಿಸಲು ಆಗುತ್ತಿಲ್ಲ. ಇಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿ, ಕಸ ಹಾಕುವವರನ್ನು ಪತ್ತೆ ಮಾಡಬೇಕು ಎನ್ನುವುದು ಅವರ ಅಭಿಪ್ರಾಯ.

    ಅಧಿಕಾರಿಗಳ ಮೌನವೇಕೆ?

    ವಿದ್ಯಾನಗರ ಚಾರ ಸೀತಾನದಿ ಸೇತುವೆ ಬಳಿ ವಿಪರೀತ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಇದೀಗ ಸೇತುವೆ ನಿರ್ಮಿಸುತ್ತಿರುವುದರಿಂದ ಸಾರ್ವಜನಿಕರು ಅಲ್ಲಿ ಹಾಕುತ್ತಿದ್ದ ಕಸವನ್ನು ಈಗ ಕೆಳಬಾದ್ಲು ಪ್ರದೇಶದಲ್ಲಿ ಸುರಿಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ವಿವಿಧ ಕಂಪನಿಗಳ ಚಿಪ್ಸ್ ಹಾಗೂ ವಾಷಿಂಗ್ ಪೌಡರ್‌ನ ಖಾಲಿ ಪ್ಯಾಕೆಟ್, ಪ್ಲಾಸ್ಟಿಕ್ ಬ್ಯಾಗ್, ಐಸ್‌ಕ್ರೀಂ ಡಬ್ಬಿ, ಮದ್ಯದ ಬಾಟಲಿ, ಅಂಗಡಿ ಮುಂಗಟ್ಟುಗಳ ಕಸವನ್ನೂ ವಾಹನಗಳಲ್ಲಿ ತಂದು ಎಸೆಯುತ್ತಿದ್ದಾರೆ. ಆದರೂ ಸಂಬಂಧಿತ ಅಧಿಕಾರಿಗಳು ಮೌನವಹಿಸಿರುವುದೇಕೆ ಎಂಬುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಪ್ಲಾಸ್ಟಿಕ್ ತ್ಯಾಜ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೀತಾ ನದಿ ಪರಿಸರದಲ್ಲಿ ಕಸ ಸಂಗ್ರಹಗೊಂಡ ಬಗ್ಗೆ ಹಾಗೂ ಮತ್ತೆ ಅಲ್ಲಿ ಕಸ ಚೆಲ್ಲದಂತೆ ತಡೆಯಲು ಶೀಘ್ರದಲ್ಲೇ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು. ಸೀತಾ ನದಿಗೆ ಕಸ ಎಸೆಯುವುದರಿಂದ ಜಲ ಮಾಲಿನ್ಯವಾಗುತ್ತದೆ. ಜನರು ಸಹಕರಿಸಬೇಕು.
    -ಶಶಿಧರ ಕೆ.ಜೆ.,ಇಒ, ಹೆಬ್ರಿ ತಾಲೂಕು

    ಅಜ್ಞಾನಿಗಳು ಸ್ವಚ್ಛಂದ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸುರಿಯುತ್ತಿದ್ದು ದನ-ಕರುಗಳ ಜೀವಕ್ಕೆ ಮಾರಕವಾಗುತ್ತಿದೆ. ನದಿಗೂ ಕಸ ಎಸಿಯುತ್ತಿರುವುದು ನಿಜಕ್ಕೂ ದುರಂತ. ದಯವಿಟ್ಟು ಸಾರ್ವಜನಿಕರು ಮನೆಯ ಕಸವನ್ನು ಇಲ್ಲಿ ತಂದು ಎಸೆದು ಸುಂದರ ಪರಿಸರ ಹಾಳು ಮಾಡಬಾರದು.
    -ವಸಂತ ಕುಮಾರ್ ಬಿ., ನಿವೃತ್ತ ಬ್ಯಾಂಕ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts