More

    ಬರಿಗಣ್ಣಿಗೆ ಗೋಚರಿಸುತ್ತಿದೆ ಸೌರಕಲೆ

    ಉಡುಪಿ: ಸೂರ್ಯನ ಮೇಲ್ಮೈಯಲ್ಲಿ ಗುರುತಿಸಲಾಗಿರುವ ‘ಸೌರಕಲೆ-3363’ಯನ್ನು ಯಾವುದೇ ದೂರದರ್ಶಕಗಳ ಸಹಾಯವಿಲ್ಲದೆ ವೀಕ್ಷಿಸಬಹುದಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ತಿಳಿಸಿದ್ದಾರೆ.

    ಸೌರಕಲೆ ಎಂಬುದು ಸೂರ್ಯನ ಮೇಲ್ಮೈಯಲ್ಲಿರುವ ಒಂದು ಪ್ರದೇಶವಾಗಿದೆ. ಅಲ್ಲಿ ತಾಪಮಾನವು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಕಡಿಮೆ ಇರುತ್ತದೆ. ಸೂರ್ಯನ ಮೇಲ್ಮೈ 5000 ಡಿಗ್ರಿ ಬಿಸಿಯಾಗಿರುತ್ತದೆ. ಆದರೆ ಈ ಪ್ರದೇಶವು 4500 ಡಿಗ್ರಿಗಳಲ್ಲಿದೆ. ಈ ಭಾಗ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ನಡುವೆ 500 ಡಿಗ್ರಿ ತಾಪಮಾನದ ವ್ಯತ್ಯಾಸವಿದೆ. ಹಾಗಾಗಿ ಅದು ಕಪ್ಪಾಗಿ ಕಾಣುತ್ತದೆ. ಕಳೆದ ಕೆಲವು ದಿನಗಳಲ್ಲಿ ಸೌರಕಲೆ 3363 ಅನ್ನು ಗಮನಿಸಲಾಗಿದ್ದು, ಅದರ ಗಾತ್ರ ಹೆಚ್ಚಾಗುತ್ತಿದೆ. ಗಾತ್ರದ ಈ ಹೆಚ್ಚಳ ಯಾವುದೇ ದೂರದರ್ಶಕಗಳು ಅಥವಾ ಬೈನಾಕ್ಯುಲರ್‌ಗಳಿಲ್ಲದೆ ಸೌರಶೋಧಕದ ಸಹಾಯದಿಂದ ಬರಿಗಣ್ಣಿಗೆ ಸೌರಕಲೆ ಗೋಚರಿಸುವಂತೆ ಮಾಡಿದೆ.

    ಸೌರಕಲೆ 3363ರ ಗಾತ್ರ ಪ್ರಸ್ತುತ ಭೂಮಿಗಿಂತ ದೊಡ್ಡದಾಗಿದೆ ಎಂದು ಸೂಚಿಸುತ್ತದೆ. ಸೌರಕಲೆಗಳು ಗಾತ್ರದಲ್ಲಿ 16 ಕಿ.ಮೀ.ನಿಂದ 1,60,000 ಕಿ.ಮೀ.ವರೆಗೆ ಬದಲಾಗಬಹುದು. ಭೂಮಿಯ ವ್ಯಾಸವು 12,742 ಕಿ.ಮೀ. ಆದ ಕಾರಣ, ಸೌರಕಲೆಯು ಭೂಮಿಗಿಂತ ದೊಡ್ಡದಾಗಿರುವುದು ಸಹಜ. ಆದಾಗ್ಯೂ ಸೌರಕಲೆಗಳ ಗಾತ್ರ ಮತ್ತು ನೋಟವು ಏಕರೂಪವಾಗಿರುವುದಿಲ್ಲ. ಸೌರಕಲೆಗಳ ನೋಟವು ಸೌರ ಚಕ್ರ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದು 11 ವರ್ಷ ಅವಧಿಯಾಗಿದ್ದು, ಮೊದಲು ಸೂರ್ಯನ ಮೇಲ್ಮೈಯ ಚಟುವಟಿಕೆಯು ಹೆಚ್ಚಾಗುತ್ತದೆ, ನಂತರ ಕಡಿಮೆಯಾಗುತ್ತದೆ. ಹೀಗೆ ಇದರ ಪುನರಾವರ್ತನೆಯಾಗುತ್ತದೆ. 2019ರಲ್ಲಿ ಈ ಸೌರ ಚಕ್ರವು ಪ್ರಾರಂಭವಾಯಿತು. 2025ರಲ್ಲಿ ಗರಿಷ್ಠ ಚಟುವಟಿಕೆಯನ್ನು ತೋರಿಸುತ್ತದೆ ಎಂಬುದಾಗಿ ಅಂದಾಜಿಸಲಾಗಿದೆ. ಸೌರಕಲೆಯು ಸೂರ್ಯನ ಸಂಕೀರ್ಣ ಕಾಂತೀಯ ಕ್ಷೇತ್ರಗಳ ಪರಿಣಾಮವಾಗಿದೆ. ಸೌರಕಲೆ 3363 ಸ್ಫೋಟಗೊಳ್ಳುವುದಿಲ್ಲ. ಭೂಮಿಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

    ಕಣ್ಣಿನ ದೃಷ್ಟಿಗೆ ಅಪಾಯ

    ಒಂದು ಸೌರಕಲೆಯನ್ನು ಯಾವ ಸ್ಥಳದಿಂದಾದರೂ ಕೆಲವು ದಿನ ಅಥವಾ ಗಂಟೆಗಳವರೆಗೆ ಸೂರ್ಯನ ಮೇಲ್ಮೈಯಲ್ಲಿ ಗುರುತಿಸಬಹುದು. ಸೂರ್ಯನು ಚಲನೆಗೆ ತಕ್ಕಂತೆ ಸೂರ್ಯನ ಮೇಲ್ಮೈಯಲ್ಲಿರುವ ಸ್ಥಿರವಾದ ಹಾಗೂ ದೊಡ್ಡದಾದ ಸೌರಕಲೆಗಳು ಕೆಲ ದಿನಗಳವರೆಗೆ ಗೋಚರಿಸುತ್ತವೆ. ಸೂರ್ಯನನ್ನು ವೀಕ್ಷಿಸುವ ವೇಳೆ ನಾವು ಫಿಲ್ಟರ್‌ನ ಬಳಕೆಯಂತಹ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂರ್ಯನನ್ನು ನೇರವಾಗಿ ನೋಡುವುದಾಗಲಿ, ದಿನನಿತ್ಯದ ಚಟುವಟಿಕೆಯಲ್ಲಿ ಬಳಸುವ ಎಕ್ಸ್‌ರೇ ಹಾಳೆ, ಕನ್ನಡಕಗಳನ್ನು ಬಳಸಬಾರದು. ಸೂರ್ಯನನ್ನು ಯಾವಾಗಲೂ ಪ್ರಮಾಣೀಕರಿಸಿದ ಸೋಲಾರ್ ಫಿಲ್ಟರ್‌ನ ಮೂಲಕವೇ ನೋಡಬೇಕು. ಈ ವಸ್ತುವಿನ ಹೊರತಾಗಿ ಬೇರೆ ವಸ್ತುಗಳ ಮೂಲಕ ಸೂರ್ಯನನ್ನು ನೋಡಿದರೆ ಕಣ್ಣಿನ ದೃಷ್ಟಿಗೆ ಅಪಾಯವಾಗುತ್ತದೆ.

    ಈ ಸೌರಕಲೆಯ ಬೆಳವಣಿಗೆಯ ಹಂತಗಳನ್ನು ನಾಸಾ ಲೈವ್‌ನಲ್ಲಿ ಸೂರ್ಯನ ದೃಶ್ಯವನ್ನು ತೋರಿಸಿದಂತೆ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಮಾಡಲಾಗುತ್ತಿದೆ. ಆಸಕ್ತಿಯುಳ್ಳವರು ನೋಡಬಹುದು.

    -ಅತುಲ್ ಭಟ್, ಭೌತ ಶಾಸ್ತ್ರ ಉಪನ್ಯಾಸಕ, ಪಿಪಿಸಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts