More

    ತಿರುವು ರಸ್ತೆ… ಸವಾರರಿಗೆ ಅವಸ್ಥೆ

    -ಹರಿಪ್ರಸಾದ್ ನಂದಳಿಕೆ, ಕಾರ್ಕಳ

    ಮುಂಡ್ಕೂರು ಗ್ರಾಪಂ ವ್ಯಾಪ್ತಿಯ ಜೈನ ಪೇಟೆ ಬಳಿ ಹಾದು ಹೋಗಿರುವ ಬೆಳ್ಮಣ್ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಅಪಾಯಕಾರಿಯಾಗಿದೆ. ಭಾರಿ ತಿರುವು ಇರುವ ಈ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಅನೇಕ ಸವಾರರು ಕೈ-ಕಾಲು ಮುರಿದುಕೊಂಡಿದ್ದಾರೆ.

    ರಸ್ತೆ ತಿರುವು ಇರುವುದು ನಿತ್ಯವೂ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೆ ಈ ತಿರುವು ರಸ್ತೆಯಲ್ಲೇ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಕಲ್ಲು -ಮಣ್ಣು ರಾಶಿ ಬಿದ್ದಿದ್ದು, ಬೈಕ್ ಸವಾರರು ಬಿದ್ದು ಏಳುವುದು ಇಲ್ಲಿ ಮಾಮೂಲು ಎನ್ನುವಂತಾಗಿದೆ. ಅನೇಕ ಅಪಘಾತ ಸಂಭವಿಸಿ ಸವಾರರು ಸಮಸ್ಯೆ ಎದುರಿಸುತ್ತಿದ್ದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಇಕ್ಕಟಾದ ರಸ್ತೆ

    ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಸಾಹಸ ಮಾಡಬೇಕು. ಇದೀಗ ಬೆಳ್ಮಣ್‌ನಿಂದ ಸಂಕಲಕರಿ ವರೆಗೆ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಮುಂಡ್ಕೂರು ಜೈನ ಪೇಟೆವರೆಗೂ ರಸ್ತೆಯ ಕಾಮಗಾರಿ ನಡೆದಿದೆಯಾದರೂ ಅಪಾಯಕಾರಿ ತಿರುವು ಬಳಿ ಇನ್ನೂ ಕಾಮಗಾರಿ ನಡೆಸದ್ದರಿಂದ ರಸ್ತೆ ಇಕ್ಕಟಾಗಿದೆ. ಬೆಳ್ಮಣ್ ಭಾಗದಿಂದ ಬರುವ ವಾಹನ ಸವಾರರು ಅಗಲೀಕರಣಗೊಂಡ ರಸ್ತೆಯಲ್ಲಿ ವೇಗವಾಗಿ ಬಂದು ಜೈನ ಪೇಟೆ ಬಳಿಯ ಇಕ್ಕಟಾದ ರಸ್ತೆಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ. ಇಲ್ಲಿ ವಾಹನಗಳು ಎದುರು ಬದುರುಗೊಳ್ಳುವಾಗ ತುಂಬ ಸಮಸ್ಯೆ ಆಗುತ್ತಿದೆ.

    ಚರಂಡಿ ನಿರ್ಮಿಸಿ

    ತಿರುವು ರಸ್ತೆಯ ಪಕ್ಕದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಮಳೆ ನೀರಿನೊಂದಿಗೆ ಬರುವ ಕಲ್ಲು-ಮಣ್ಣುಗಳು ರಸ್ತೆಯ ಮೇಲೆ ಸಂಗ್ರಹವಾಗುತ್ತಿದ್ದು, ಸಣ್ಣ ವಾಹನಗಳ ಸವಾರರು ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ಸ್ಥಳೀಯ ಗ್ರಾಪಂನವರು ಚರಂಡಿ ವ್ಯವಸ್ಥೆ ಮಾಡಿ ರಸ್ತೆಯಲ್ಲಿ ಮಳೆ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಇಲ್ಲಿನ ತಿರುವು ರಸ್ತೆಯಲ್ಲಿ ಈಗಾಗಲೇ ಹಲವು ಅಪಘಾತ ಸಂಭವಿಸಿ ವಾಹನ ಸವಾರರು ಗಾಯಗೊಂಡಿದ್ದಾರೆ. ಅಪಾಯಕಾರಿ ತಿರುವಿನ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
    -ಸತೀಶ್‌ಕುಮಾರ, ಗ್ರಾಮಸ್ಥ

    ಅಪಾಯಕಾರಿ ತಿರುವು ಹಾಗೂ ರಸ್ತೆಯಲ್ಲೇ ಮಳೆ ನೀರು ಶೇಖರಣೆ ಆಗುವುದರಿಂದ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಸ್ಥಳೀಯಾಡಳಿತ ಈ ಭಾಗದ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸುವ ಅಗತ್ಯವಿದೆ.
    -ಪ್ರಭಾಕರ, ವಾಹನ ಸವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts