More

    ಕ್ಷೀಣಿಸುತ್ತಿದೆ ಕಪ್ಪೆಚಿಪ್ಪು ಸಂತತಿ

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಒಂದೆಡೆ ನಿರಂತರ ಮರಳು ಗಣಿಗಾರಿಕೆ, ಅತಿಯಾಗುತ್ತಿರುವ ಜಲ ಮಾಲಿನ್ಯದಿಂದಾಗಿ ಅತ್ಯಂತ ವಿಶಿಷ್ಟವಾದ ಕಪ್ಪೆಚಿಪ್ಪು ಸಂತತಿ ಕ್ಷೀಣಿಸತೊಡಗಿದೆ. ಇನ್ನೊಂದೆಡೆ, ಕಪ್ಪೆಚಿಪ್ಪು ಆಯ್ದು ಬದುಕು ಕಟ್ಟಿಕೊಳ್ಳುತ್ತಿದ್ದ ಮಹಿಳೆಯರ ಆರ್ಥಿಕ ಗಳಿಕೆಗೂ ಸಂಚಕಾರ ಬಂದಿದೆ.

    ನದಿ ನೀರು ಅಥವಾ ಉಪ್ಪು ನೀರು ಸೇರಿರುವ ಜಲಾನಯನ ಭಾಗದಲ್ಲಿ ಕಪ್ಪೆಚಿಪ್ಪು ಇರುತ್ತದೆ. ಅಲ್ಲಿಯೇ ತನ್ನ ಸಂತಾನವನ್ನೂ ವೃದ್ಧಿಸಿಕೊಳ್ಳುತ್ತದೆ. ಚಿಪ್ಪಿನಿಂದ ಮಾಂಸ ತೆಗೆದು ಉಪ್ಪು, ಅರಿಶಿಣ ಹಾಕಿ ಒಣಗಿಸಿ ಆಹಾರ ಪದಾರ್ಥಕ್ಕೆ ಬಳಸಲಾಗುತ್ತದೆ. ಮೀನುಗಾರಿಕೆ ನಿಷೇಧ ಸಂದರ್ಭದಲ್ಲಿ ಕಪ್ಪೆಚಿಪ್ಪು ಒಣ ಮಾಂಸಕ್ಕೆ ಇನ್ನಿಲ್ಲದ ಬೇಡಿಕೆ ಇರುತ್ತದೆ.

    ಬೆನ್ನುಮೂಳೆಯಿಲ್ಲದ ಪ್ರಾಣಿ

    ಬೆನ್ನುಮೂಳೆಯಿಲ್ಲದೆ ಈ ಮೃದ್ವಂಗಿಗಳು ಅಕಶೇರುಕ ಪ್ರಾಣಿಯಾಗಿವೆ. ಮೃದುವಾದ ದೇಹ ಹೊಂದಿದ್ದು, ಶತ್ರುಗಳಿಂದ ರಕ್ಷಣೆಗೆ ಚಿಪ್ಪಿನ ರಕ್ಷಾಕವಚ ರಚಿಸಿಕೊಳ್ಳುತ್ತವೆ. ಕಪ್ಪೆಚಿಪ್ಪು ಆಹಾರಕ್ಕಾಗಿ ನೀರಿನಲ್ಲಿರುವ ಉಪ್ಪು ಮತ್ತು ರಾಸಾಯನಿಕ ಬಳಕೆ ಮಾಡಿಕೊಳ್ಳುತ್ತದೆ. ಆಹಾರ ಸಂಸ್ಕರಿಸಲು ಕ್ಯಾಲ್ಸಿಯಂ ಕಾರ್ಬೋನೇಟ್ ಸ್ರವಿಸುತ್ತವೆ. ಇದೇ ಕಪ್ಪೆಚಿಪ್ಪಿನ ಕವಚವಾಗಿ ರಚಿತವಾಗುತ್ತದೆ.

    ಮುತ್ತಿನ ಚಿಪ್ಪು

    ಕಪ್ಪೆಚಿಪ್ಪು ಒಣ ಮಾಂಸ ತುಂಬ ರುಚಿಕರ. ಗೋವಾ, ಮಹಾರಾಷ್ಟ್ರವಲ್ಲದೆ ರಾಜ್ಯದ ನಾನಾ ಭಾಗಗಳಿಗೆ ರವಾನೆಯಾಗುತ್ತದೆ. ಕಪ್ಪೆಚಿಪ್ಪಿನ ಮಾಂಸದಲ್ಲಿ ಪೋಷಕಾಂಶ ಅತ್ಯಂತ ಹೆಚ್ಚು ಇರುವುದರಿಂದ ಬಲು ಬೇಡಿಕೆ ಇದೆ. ಕಪ್ಪೆಚಿಪ್ಪಿನ ಮಾಂಸಕ್ಕೆ ಬೆಲೆಯೂ ಹೆಚ್ಚಿದೆ. ಕಪ್ಪೆಚಿಪ್ಪು ಕೇವಲ ಮಾಂಸಕ್ಕಷ್ಟೇ ಅಲ್ಲದೆ ಮುತ್ತು ತಯಾರಿಸುವುದರಿಂದಲೂ ಮೌಲ್ಯ ಉಳ್ಳದ್ದಾಗಿದೆ. ಹೊರಕುಳಿ ಸುತ್ತುವರಿದಿರುವ ಕ್ಯಾಲ್ಸಿಯಂ ಕಾರ್ರ‌್ಬೋನೇಟ್ ಕವರ್ ಗಟ್ಟಿಯಾಗಿ ಮುತ್ತುಗಳಾಗಿ ಮಾರ್ಪಾಡುಗೊಳ್ಳುತ್ತವೆ. ಪಿಂಕ್ಟಡ್ ವುಲ್ಗರಿಸ್, ಪಿಂಕ್ಟಡ್ ಗರಿಟಿಪೆರಾ, ಪಿಂಕ್ಟಡ್ ಕೆಮ್ನಿಟ್ಜಿ ಮುತ್ತುಕೊಡುವ ಚಿಪ್ಪುಗಳಾಗಿವೆ.

    ಸಂರಕ್ಷಣೆ ಅಗತ್ಯ

    ಈಗಾಲೇ ಬೆಲೆಕಟ್ಟಲಾಗದ ನೂರಾರು ಸೂಕ್ಷ್ಮ ಜಲಚರಗಳು ಮಾನವನ ಸ್ವಯಂಕೃತ ಅಪರಾಧದಿಂದ ನಶಿಸಿಹೋಗಿವೆ. ಇದೀಗ ಅದೇ ಸಾಲಿಗೆ ಕಪ್ಪೆಚಿಪ್ಪು ಸೇರಿದರೂ ಅಚ್ಚರಿಯಿಲ್ಲ. ಇದರಿಂದ ಜೀವಸಂಕುಲದ ಕೊಂಡಿಗೆ ಧಕ್ಕೆಯಾಗಲಿದೆ. ಹೀಗಾಗಿ ನೈಸರ್ಗಿಕವಾಗಿ ಹರಿಯುವ ನದಿ-ತೊರೆಗಳ ನೀರು ಶುದ್ಧೀಕರಿಸುವ ಅಪರೂಪದ ಕಪ್ಪೆಚಿಪ್ಪು ಸಂತತಿ ಉಳಿಸಿಕೊಳ್ಳಬೇಕಾದ ದೊಡ್ಡ ಹೊಣೆಗಾರಿಕೆ ಎಲ್ಲರ ಮೇಲಿದೆ.

    ನೂರಾರು ಕುಟುಂಬಗಳಿಗೆ ಆಸರೆ

    ಅನೇಕ ಕಡೆ ನದಿಗಳಿಗೆ ಕಿಂಡಿಅಣೆಕಟ್ಟೆ ಕಟ್ಟಲಾಗಿದ್ದು, ಹಲಗೆ ತೆಗೆದ ನಂತರ ಕಪ್ಪೆಚಿಪ್ಪು ಹೆಕ್ಕಲು ನೂರಾರು ಮಹಿಳೆಯರು ನದಿಗೆ ಇಳಿಯುತ್ತಾರೆ. ಚೀಲಗಟ್ಟಲೆ ಕಪ್ಪೆಚಿಪ್ಪು ಹೆಕ್ಕಿ ತಂದು ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಹಕ್ಲಾಡಿ, ತೊಪ್ಲು, ಬಟ್ಟೆಕುದ್ರು, ಬಂಟ್ವಾಡಿ, ತಲ್ಲೂರು, ಉಪ್ಪಿನಕುದ್ರು ಮಹಿಳೆಯರು ಚಕ್ರಾ, ಸೌಪರ್ಣಿಕಾ, ರಾಜಾಡಿ, ಅರಾಟೆ ಬಳಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರು. ಆದರೆ, ಈ ಭಾಗದಲ್ಲಿ ಅವ್ಯಾಹತ ಮರಳು ಗಣಿಗಾರಿಕೆಯಿಂದಾಗಿ ಕಪ್ಪೆಚಿಪ್ಪು ಸಂತತಿ ನಾಶವಾಗುತ್ತಿದೆ. ಕಿಂಡಿ ಅಣೆಕಟ್ಟು ಹಿನ್ನೀರಿನಲ್ಲೂ ಕಪ್ಪೆಚಿಪ್ಪು ತೆಗೆಯುವುದಕ್ಕೆ ನಿರ್ಬಂಧ ಹೇರಿದೆ. ಇದರಿಂದ ಕಪ್ಪೆಚಿಪ್ಪು ಮಾರಾಟದಿಂದಲೇ ಬದುಕು ಸಾಗಿಸುವ ಕುಟುಂಬಗಳಿಗೂ ತೊಂದರೆ ಉಂಟಾಗಿದೆ.

    ಕಪ್ಪೆಚಿಪ್ಪು ಮೃದ್ವಂಗಿಗಳಾಗಿದ್ದು, ಫೈಲಮ್ ವೆನರೊಯ್ಡ ಕುಟುಂಬಕ್ಕೆ ಸೇರಿವೆ. ಮೆರಿಟ್ರಿಕ್ಸ್, ಮೆರಿಟ್ರಿಕ್ಸ್ ಕಾಸ್ಟಾ, ಕಟೆಲಿಶಿಯಾ ಓಪಿಮಾ, ಪಾಫಿಯಾ ಮಲಬಾರಿಕಾ, ವಿಲ್ಲೊರಿಟಾ ಸಿಪ್ರಿನೋಯ್ಡ್ಸಿಹೀಗೆ ಅನೇಕ ಪ್ರಕಾರದ ಜಾತಿಗಳಿವೆ. ಕಪ್ಪೆಚಿಪ್ಪು ನೀರಿನಲ್ಲಿರುವ ಮಾಲಿನ್ಯವನ್ನು ಶುದ್ಧಗೊಳಿಸುತ್ತವೆ. ಹೀಗಾಗಿ ಚಿಪ್ಪು ಸಂತತಿ ನಾಶವಾದರೆ ನೀರು ಕಲುಷಿತವಾಗಿ ಮನುಷ್ಯರಿಗೇ ತೊಂದರೆಯಾಗುತ್ತದೆ.
    -ಸಮಲತಾ, ಸಹಾಯಕ ನಿರ್ದೇಶಕಿ, ಮೀನುಗಾರಿಕಾ ಇಲಾಖೆ, ಕುಂದಾಪುರ

    ಹಕ್ಲಾಡಿ ಗ್ರಾಮವೊಂದರಲ್ಲೇ ನೂರಾರು ಮಹಿಳೆಯರು ಬಹಳ ವರ್ಷಗಳಿಂದ ಕಪ್ಪೆಚಿಪ್ಪು ಸಂಗ್ರಹಿಸಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಒಂದು ತಾಸಿನಲ್ಲಿ ಗೋಣಿಚೀಲದಲ್ಲಿ ಕಪ್ಪೆಚಿಪ್ಪು ಹೆಕ್ಕಿ ಬರುತ್ತಿದ್ದೆವು. ಆದರೆ ಗಣಿ, ಅಣೆಕಟ್ಟು ಕಟ್ಟಿದಾಗಿನಿಂದ ಕಪ್ಪೆಚಿಪ್ಪು ಸಂತತಿ ನಾಶವಾಗುತ್ತಿದೆ. ಇದನ್ನೇ ನಂಬಿಕೊಂಡಿದ್ದ ನಮ್ಮಂತಹ ನೂರಾರು ಮಹಿಳೆಯರಿಗೆ ಕುಟುಂಬ ನಿರ್ವಹಣೆಗೂ ತೊಡಕಾಗುತ್ತಿದೆ.
    -ಕಪ್ಪೆಚಿಪ್ಪು ಮಾರಾಟ ಮಾಡುವ ಮಹಿಳೆ, ಹಕ್ಲಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts