More

    ಅಡಕೆ ಸಿಪ್ಪೆ ತರುತ್ತಿದೆ ಆಪತ್ತು

    ಹಾನಗಲ್ಲ: ಅಡಕೆ ಸಿಪ್ಪೆಗೆ ಹಚ್ಚುತ್ತಿರುವ ಬೆಂಕಿ ರೈತರ ತೋಟ ಹಾಗೂ ಹೊಲಗಳಿಗೆ ಆವರಿಸಿ ಗೋವಿನಜೋಳ, ಸೋಯಾಬೀನ್ ಬೆಳೆ ಹಾಗೂ ಅಡಕೆ ಗಿಡಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

    ತಾಲೂಕಿನ ನರೇಗಲ್ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡಕೆ ವ್ಯಾಪಾರಸ್ಥರಿದ್ದಾರೆ. ತಾಲೂಕಿನ ತೋಟಗಳಿಂದ ಅಡಕೆ ಖರೀದಿಸಿ ತರುವ ಅವರು, ಅವುಗಳನ್ನು ಸುಲಿದು ಸಿಪ್ಪೆಯನ್ನು ರಸ್ತೆ ಬದಿ ಸುರಿಯುತ್ತಾರೆ. ಅಲ್ಲದೆ, ರಾತ್ರೋರಾತ್ರಿ ಬೆಂಕಿ ಹಚ್ಚುತ್ತಾರೆ. ಈ ಬೆಂಕಿ ಗಾಳಿಗೆ ವ್ಯಾಪಿಸಿಕೊಂಡು ಅನಾಹುತ ಸೃಷ್ಟಿಸುತ್ತಿದೆ. ಮೂರ‌್ನಾಲ್ಕು ದಿನಗಳ ಹಿಂದೆ ನರೇಗಲ್ ಗ್ರಾಮದ ಕರಬಸಪ್ಪ ನಂದಿಕೊಪ್ಪ ಎಂಬುವವರ ಹೊಲದಲ್ಲಿನ 300ಕ್ಕೂ ಹೆಚ್ಚು ಅಡಕೆ ಗಿಡಗಳು ಹಾಗೂ ಗೋವಿನಜೋಳದ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಇಂಥ ಘಟನೆಗಳು ಈ ಭಾಗದಲ್ಲಿ ಮರುಕಳಿಸುತ್ತಿರುವುದು ರೈತರನ್ನು ಕಂಗೆಡಿಸಿದೆ.

    ಸಿಪ್ಪೆ ಸುಡುವಾಗ ರಸ್ತೆಯುದ್ದಕ್ಕೂ ದಟ್ಟವಾದ ಹೊಗೆ ಆವರಿಸುವುದರಿಂದ ವಾಹನ ಸವಾರರಿಗೆ ಕಷ್ಟವಾಗುತ್ತಿದೆ. ಪ್ರತಿವರ್ಷವೂ ಎದುರಾಗುವ ಸಮಸ್ಯೆಯಾಗಿದ್ದರೂ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಪರಿಹಾರ ರೂಪಿಸುತ್ತಿಲ್ಲ. ಗ್ರಾಮದಲ್ಲಿ ಗಣಪತಿ ಹಬ್ಬದಿಂದ ಆರಂಭಗೊಳ್ಳುವ ಅಡಕೆ ಕೊಯ್ಲು ಜನವರಿ ಅಂತ್ಯದವರೆಗೆ ನಿರಂತರವಾಗಿರುತ್ತದೆ. ಪ್ರತಿದಿನ ರಾತ್ರಿ ರಾಶಿಗಟ್ಟಲೇ ಅಡಕೆ ಸಿಪ್ಪೆಯನ್ನು ರಸ್ತೆಗೆ ಸುರಿದು ಹೋಗುತ್ತಾರೆ. ಈ ಹಿಂದಿನ ಮೂರು ವರ್ಷಗಳಲ್ಲಿ ರೈತರ ಬೆಳೆಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಲೇ ಬಂದಿವೆ. ಎರಡು ವರ್ಷದ ಹಿಂದೆ ರಸ್ತೆ ಬದಿಗೆ ಅಡಕೆ ಸಿಪ್ಪೆಗೆ ಹಾಕಿದ್ದ ಬೆಂಕಿಗೆ ಎತ್ತೊಂದು ಮೈ ಸುಟ್ಟುಕೊಂಡಿತ್ತು. ಕಳೆದ ವರ್ಷ ರೈತರು ಹಾಕಿದ್ದ ಸೋಯಾಬೀನ್ ಬಣವೆಗೆ ಬೆಂಕಿ ಹೊತ್ತಿಕೊಂಡಿತ್ತು.

    ನಿವೇಶನ ಬಳಕೆಗೆ ಹಿಂದೇಟು: ನರೇಗಲ್ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ ಪರಿಣಾಮವಾಗಿ ಮೂರ್ನಾಲ್ಕು ವರ್ಷದ ಹಿಂದೆ ಗ್ರಾಪಂ ವ್ಯಾಪ್ತಿಯ ನೆಲ್ಲಿಬೀಡ ಗ್ರಾಮದ ಹೊರವಲಯದಲ್ಲಿ ಅಡಕೆ ಸಿಪ್ಪೆ ವಿಲೇವಾರಿಗಾಗಿ ಒಂದು ಎಕರೆ ನೀಡಲಾಗಿದೆ. ಆದರೆ, ಈ ಜಾಗಕ್ಕೆ ಯಾರೊಬ್ಬರೂ ಅಡಕೆ ಸಿಪ್ಪೆಗಳನ್ನು ಕೊಂಡೊಯ್ದು ಹಾಕುತ್ತಿಲ್ಲ.

    ಬಹುಮಾನ ಘೋಷಣೆ: ಎಲ್ಲೆಂದರಲ್ಲಿ ಅಡಕೆ ಸಿಪ್ಪೆ ಎಸೆಯುವವರಿಗೆ 10 ಸಾವಿರ ರೂ. ದಂಡ ಹಾಕುವುದಾಗಿ ಗ್ರಾಪಂ ಠರಾವು ಮಾಡಿದೆ. ಸಿಪ್ಪೆಯನ್ನು ರಸ್ತೆಗೆ ಸುರಿಯುವವರ ಕುರಿತು ಮಾಹಿತಿ ನೀಡಿದವರಿಗೆ ಎರಡು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ದಂಡಕ್ಕೆ ಹೆದರಿ ರಸ್ತೆಗೆ ಸುರಿಯುವುದು ನಿಂತಿಲ್ಲ. ಹೀಗಾದರೆ ಇದನ್ನು ತಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಅಧಿಕಾರಿಗಳನ್ನೂ ಮತ್ತು ಗ್ರಾಮದ ರೈತರನ್ನು ಕಾಡುತ್ತಿದೆ.

    ಅಡಕೆ ವ್ಯಾಪಾರಸ್ಥರ ಬೇಜವಾಬ್ದಾರಿಯಿಂದ ರೈತರ ಬೆಳೆ ಹಾಗೂ ಫಸಲುಗಳು ಬೆಂಕಿಗೆ ಆಹುತಿಯಾಗುತ್ತಿವೆ. ಈ ಕುರಿತಂತೆ ಹಾನಿಗೊಳಗಾದ ರೈತರಿಗೆ ಸರ್ಕಾರದಿಂದ ಪರಿಹಾರ ಒದಗಿಸುವಂತೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿವರ್ಷ ದುರ್ಘಟನೆ ಸಂಭವಿಸುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ.
    ಭುವನೇಶ್ವರ ಶಿಡ್ಲಾಪುರ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ


    ರಸ್ತೆ ಬದಿ ಅಡಕೆ ತ್ಯಾಜ್ಯ ಎಸೆಯುವುದನ್ನು ತಡೆಯಲು ವ್ಯಾಪಾರಸ್ಥರ ಮನೆಗಳಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಸ್ವತಃ ಭೇಟಿ ನೀಡಿ ನೋಟೀಸ್ ನೀಡಿದ್ದರು. ಹೀಗಾಗಿ ವ್ಯಾಪಾರಸ್ಥರು ಗ್ರಾಮದ ಹೊರಭಾಗದ ಪಿಡಬ್ಲುೃಡಿ ರಸ್ತೆ ಪಕ್ಕ ಸುರಿದು ಬೆಂಕಿ ಇಡುತ್ತಿದ್ದಾರೆ. ಇದರಿಂದ ವಾಯುಮಾಲಿನ್ಯ ಸಮಸ್ಯೆಯಾಗುತ್ತಿದೆ. ರಸ್ತೆ ಬದಿಯ ಸಿಪ್ಪೆ ರಾಶಿಯನ್ನು ಗ್ರಾಪಂ ಸಿಬ್ಬಂದಿಯಿಂದ ತೆರವುಗೊಳಿಸಲಾಗುತ್ತಿದೆ. ಜ. 2ರಂದು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಗ್ರಾಮದ ರೈತರು, ವ್ಯಾಪಾರಸ್ಥರು ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿದೆ. ಚರ್ಚೆಯ ನಂತರ ಸೂಕ್ತ ಕ್ರಮ ವಹಿಸಲಾಗುವುದು.
    ಪಿ.ಎಸ್. ಹಿರೇಮಠ, ಪಿಡಿಒ ನರೇಗಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts