More

    ಒಣಗಿದ ಚಾರ್ಮಾಡಿ, ಇರಲಿ ಎಚ್ಚರ

    -ಮನೋಹರ್ ಬಳಂಜ ಬೆಳ್ತಂಗಡಿ

    ಬಿರು ಬಿಸಿಲ ಬೇಗೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು ಚಾರ್ಮಾಡಿ ಅರಣ್ಯ ಪ್ರದೇಶದ ಗಿಡಮರ ಹಾಗೂ ಪರಿಸರದ ವಾತಾವರಣ ಒಣಗಿದ ಸ್ಥಿತಿ ತಲುಪುತ್ತಿದೆ.

    ಚಾರ್ಮಾಡಿ ಘಾಟಿ ಪರಿಸರದಲ್ಲಿ ಹಸಿರು ಹೊದ್ದ ವಾತಾವರಣದಲ್ಲಿ ಪ್ರಯಾಣಿಸುವುದು ಹಾಗೂ ಪ್ರಯಾಣದ ಸಮಯ ಸುತ್ತಲ ಪರಿಸರವನ್ನು ವೀಕ್ಷಿಸುತ್ತಾ ಸಾಗುವುದು ಕಣ್ಣಿಗೆ ಹಬ್ಬವಾದರೆ ಮನಸ್ಸಿಗೆ ಮುದ ನೀಡುತ್ತದೆ. ಪ್ರಸ್ತುತ ಚಾರ್ಮಾಡಿ ಘಾಟಿ ಪರಿಸರದ ಅರಣ್ಯ ಸಂಪೂರ್ಣ, ತನ್ನ ಸ್ವರೂಪ ಬದಲಾಯಿಸಿಕೊಂಡಿದೆ. ಇಲ್ಲಿನ ಬಂಡೆಗಳಲ್ಲಿ ಜನವರಿ ತನಕವೂ ಬೀಳುವ ನೀರಿನ ಜರಿಗಳು ತಮ್ಮ ಇರುವಿಕೆಯನ್ನು ಕಳೆದುಕೊಂಡಿವೆ. ಕಲ್ಲು, ಬಂಡೆ ಹಾಗೂ ಅವುಗಳ ಸುತ್ತಮುತ್ತ ಆಳೆತ್ತರದ ಒಣ ಹುಲ್ಲು ಬೆಳೆದಿದೆ. ಘಾಟಿಯ ಕಂದಕ ಭಾಗಗಳಲ್ಲೂ ಒಣ ಹುಲ್ಲು, ಒಣಗಿದ ಗಿಡಗಂಟಿಗಳು ಎಲ್ಲೆಲ್ಲೂ ಕಂಡು ಬರುತ್ತಿವೆ.

    ಬಂಡೆಕಲ್ಲುಗಳಿಗೆ ಬೀಳುವ ಬಿಸಿಲು ಮತ್ತಷ್ಟು ಪ್ರಖರತೆ ಹೆಚ್ಚಿಸಿದೆ. ರಸ್ತೆಯು ಬಿಸಿಯಾಗುವುದರ ಜತೆ ವಾಹನ ಸಂಚಾರ ಸಮಯ ವಾಹನಗಳು ಉಗುಳುವ ಹೊಗೆ ಬಿಸಿಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.ಇಷ್ಟಿದ್ದರೂ ಇಲ್ಲಿನ ವ್ಯೆ ಪಾಯಿಂಟ್ ಗಳಲ್ಲಿ ಈಗಲೂ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸುವುದು, ಧೂಮಪಾನ, ಮದ್ಯಪಾನ ಮೊದಲಾದ ಚಟುವಟಿಕೆ ನಡೆಸುವುದು ಕಂಡುಬರುತ್ತಿದೆ.

    Charmadi Forest 2

    ಇರಲಿ ಎಚ್ಚರ

    ಚಾರ್ಮಾಡಿ ಘಾಟಿಯ ಸುತ್ತಲ ಅರಣ್ಯ ಒಣಗಿದ ಸ್ಥಿತಿಯಲ್ಲಿರುವ ಕಾರಣ ಇಲ್ಲಿ ಒಂದು ಕಿಡಿ ಬೆಂಕಿ ಬಿದ್ದರೂ ಅದು ಕಾಡ್ಗಿಚ್ಚಾಗಿ ಮಾರ್ಪಡುವ ಸಾಧ್ಯತೆ ಇದೆ. ಇಲ್ಲಿನ ಪರಿಸರದಲ್ಲಿ ಪ್ರವಾಸಿಗರು ಧೂಮಪಾನ ಮಾಡುವುದು ಮತ್ತಷ್ಟು ಅಪಾಯಕಾರಿ. ಒಣಗಿರುವ ಹುಲ್ಲಿಗೆ ಬೆಂಕಿ ತಗುಲಿದರೆ ಅದು ಕಾಡನ್ನು ಆವರಿಸುವ ಸಾಧ್ಯತೆ ಇದೆ. ಕಳೆದ ವಷರ್ ಚಾರ್ಮಾಡಿ ಘಾಟಿ ಪರಿಸರದಲ್ಲಿ ಅನೇಕ ಬಾರಿ ಬೆಂಕಿ ಕಂಡುಬಂದಿತ್ತು ಹಾಗೂ ಇಲಾಖೆ ಇದನ್ನು ಹತೋಟಿಗೆ ತರಲು ಹರಸಾಹಸ ನಡೆಸಿತ್ತು. ಈ ಬಾರಿಯೂ ಬೆಂಕಿ ರೇಖೆಯನ್ನು ಇಲಾಖೆ ವತಿಯಿಂದ ರಚಿಸಲಾಗಿದೆ ಆದರೆ ಪ್ರಸ್ತುತ ಬೆಂಕಿ ರೇಖೆ ರಚಿಸಿದ ಭಾಗಗಳಲ್ಲಿ ಸಾಕಷ್ಟು ಒಣಹುಲ್ಲು ತರಗೆಲೆಗಳು ಕಂಡು ಬರುತ್ತಿವೆ. ಘಾಟಿ ಮೂಲಕ ಪ್ರಯಾಣಿಸುವ ಪ್ರವಾಸಿಗರು ಬೆಂಕಿಯ ಉಪಯೋಗ ಮಾಡದಂತೆ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

    ವನ್ಯಜೀವಿಗಳ ತಾಣ

    ಚಾರ್ಮಾಡಿ ಅರಣ್ಯ ಸೇರಿದಂತೆ ಚಾರ್ಮಾಡಿ ಘಾಟಿ ರಸ್ತೆಯ ಇಕ್ಕೆಲಗಳಲ್ಲಿರುವ ಅರಣ್ಯ ವನ್ಯಜೀವಿಗಳ ತಾಣವಾಗಿದೆ. ನೀರು ಹಾಗೂ ತಂಪು ಪ್ರದೇಶವನ್ನು ಅರಸುತ್ತಾ ತಿರುಗಾಟ ನಡೆಸುವ ಇವು ಕೆಲವೊಮ್ಮೆ ರಸ್ತೆ ದಾಟುತ್ತವೆ. ಈ ಕಾರಣದಿಂದ ಘಾಟಿ ಪ್ರದೇಶದ ಪ್ರಯಾಣ ಸಂದರ್ಭ ಹೆಚ್ಚಿನ ಎಚ್ಚರಿಕೆ ಮತ್ತು ವನ್ಯಜೀವಿಗಳಿಗೆ, ಪರಿಸರಕ್ಕೆ ತೊಂದರೆಯಾಗದಂತೆ ಸಾಗುವುದು ಅಗತ್ಯ.

    ಘಾಟಿ ಪರಿಸರದಲ್ಲಿ ಒಣಗಿದ ಸ್ಥಿತಿ ಇದೆ. ಪರಿಸರದ ರಸ್ತೆಬದಿ ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯವು ಕಂಡು ಬರುತ್ತಿದೆ. ಇದು ಕೂಡ ಅಪಾಯಕಾರಿ. 20ದಿನಗಳ ಹಿಂದೆ ಬರುವಾಗ ಅರಣ್ಯ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಪುನಃ ಘಾಟಿ ಪ್ರದೇಶದಲ್ಲಿ ತ್ಯಾಜ್ಯ ತುಂಬಿರುವುದು ವಿಷಾದನೀಯ.
    -ಚೇತನ್ ಹೆಬ್ಬಾರ್, ಪ್ರವಾಸಿಗ
    ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts