More

    ಸ್ವಾವಲಂಬಿ ಬದುಕಿಗೆ ಪಣತೊಟ್ಟ ಅಂಗವಿಕಲ ಯುವಕ

    ವಿಜಯವಾಣಿ ಸುದ್ದಿಜಾಲ ಕಡಬ

    ಅಂಗವಿಕಲತೆಯನ್ನು ಮೆಟ್ಟಿ ನಿಂತು ಇತರರಂತೆ ಬದುಕು ಕಟ್ಟಿಕೊಳ್ಳಬೇಕೆಂದು ಪಣತೊಟ್ಟಿರುವ ಯುವಕ ದೀಪದ ಬತ್ತಿಗಳ ತಯಾರಿಯಲ್ಲಿ ತೊಡಗಿಸಿ ಯಶ ಕಂಡುಕೊಂಡಿದ್ದಾರೆ.

    ರೆಂಜಿಲಾಡಿ ಗ್ರಾಮದ ಪಲ್ಲತ್ತಡ್ಕದ ಭಾಸ್ಕರ ಗೌಡ ಹಾಗೂ ರೇವತಿ ದಂಪತಿ ಪುತ್ರ ಮನೋಜ್, ಸೊಂಟ, ಕೈ, ದೇಹದಲ್ಲಿ ಸಮಸ್ಯೆ ಸಹಿತ ಶೇ.75 ಅಂಗವೈಕಲ್ಯ ಹೊಂದಿದ್ದಾರೆ. ಈಗಾಗಲೇ 9 ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಮನೋಜ್‌ಗೆ ಇದೀಗ 24 ವರ್ಷ. ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಮನೋಜ್ ಪಣತೊಟ್ಟು ಸ್ವಉದ್ಯೋಗದಲ್ಲಿ ಯಶಸ್ಸು ಕಂಡಿದ್ದಾರೆ.

    ಸ್ವಉದ್ಯೋಗ

    ಮನೋಜ್ ತಂದೆ ಕೂಲಿ ಕೆಲಸ ನಿರ್ವಹಿಸುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಮನೋಜ್ ಈ ಮೊದಲು ಮನೆಯಲ್ಲಿದ್ದ ಸಂದಭರ್ ಆಡು, ಕೋಳಿಸಾಕಣೆ ಆರಂಭಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಈಗಲೂ 4 ಆಡು ಸಾಕುತ್ತಿದ್ದು, ಕೋಳಿ ಸಾಕಣೆ ಮಾಡುತ್ತಿದ್ದಾರೆ.

    ದೀಪದ ಬತ್ತಿ ತಯಾರಿ

    ಆಡು, ಕೋಳಿ ಸಾಕಣೆ ಮಾಡುತ್ತಿರುವ ಮನೋಜ್ ಬೇರೇನಾದರೂ ವ್ಯವಹಾರ ಆರಂಭಿಸಬೇಕೆಂದು ಯೋಚಿಸಿ ಅಂಗವಿಕಲರ ಮಾಹಿತಿ ಕಾರ್ಯಕ್ರಮದಲ್ಲಿ ಸ್ವ ಉದ್ಯೋಗ ನಡೆಸಲು ಇರುವ ಅವಕಾಶಗಳ ಬಗ್ಗೆ ತಿಳಿದುಕೊಂಡು ದೀಪದ ಬತ್ತಿ ತಯಾರಿ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಂಡರು. ಅದರಂತೆ ಆಲಂಕಾರಿನ ದೀಪದ ಬತ್ತಿ ತಯಾರಿ ಘಟಕದಲ್ಲಿ ಬತ್ತಿ ತಯಾರಿ ಬಗ್ಗೆ ತರಬೇತಿ ಪಡೆದರು. ಬಳಿಕ ಪುತ್ತೂರಿನ ತುಡರ್ ಕಂಪನಿಯಲ್ಲಿ ತರಬೇತಿ ಪಡೆದು ಬತ್ತಿ ತಯಾರಿ ಮಷಿನ್ ಆಪರೇಟ್ ಮಾಡುವ ಬಗ್ಗೆ ತಿಳಿದುಕೊಂಡು, ಅಲ್ಲಿಂದಲೇ 90 ಸಾವಿರ ರೂ. ಮೌಲ್ಯದ ವಿದ್ಯುತ್ ಚಾಲಿತ ಮಷಿನ್ ಖರೀದಿಸಿದರು. ಇದೀಗ ಮನೆಯಲ್ಲಿ ದೀಪದ ಬತ್ತಿ ತಯಾರಿ ನಡೆಸುತ್ತಿದ್ದಾರೆ.

    handicap 2
    ದೀಪದ ಬತ್ತಿ ತಯಾರಿಸುತ್ತಿರುವ ಮನೋಜ್.

    ತುಡರ್ ಕಂಪನಿಯಿಂದ ಬತ್ತಿ ತಯಾರಿಸಲು ಹತ್ತಿ ಒದಗಿಸಲಾಗುತ್ತದೆ. ತಯಾರಿಸಲಾದ ಬತ್ತಿಯನ್ನು ಕಂಪನಿ ಅಥವಾ ಬೇಡಿಕೆ ಇರುವಲ್ಲಿಗೆ ಮಾರಾಟ ಮಾಡುತ್ತಿದ್ದಾರೆ. ಮನೋಜ್ ತಂದೆ ಹಾಗೂ ತಾಯಿ, ಅಜ್ಜಿ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ವಿವಿಧ ಕಡೆಗಳಿಂದ ಬೇಡಿಕೆ ಬರಲು ಆರಂಭಗೊಂಡಿದೆ ಎನ್ನುತ್ತಾರೆ ಮನೋಜ್.

    ಅಂಗವಿಕಲರಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ವಿವಿಧ ನೆರವು ಇದೆ. ಆದರೆ ಬತ್ತಿ ತಯಾರಿ ಯಂತ್ರ ಖರೀದಿಗೆ ಯಾವುದೇ ನೆರವು ನಮಗೆ ಸಿಕ್ಕಿಲ್ಲ. ಕೊನೆಗೆ ಸಾಲ ಮಾಡಿ ಮಗನ ಬಯಕೆಯಂತೆ ಮಷಿನ್ ಖರೀಸಿದ್ದೇವೆ ಎಂದು ಮನೋಜ್ ತಾಯಿ ರೇವತಿ ಬೇಸರ ತೋಡಿಕೊಳ್ಳುತ್ತಾರೆ.

    ಕಾರ್ಯಕ್ರಮವೊಂದರಲ್ಲಿ ಪಡೆದ ಮಾಹಿತಿಯಂತೆ ಬತ್ತಿ ತಯಾರಿ ಆರಂಭಿಸಲು ತೀರ್ಮಾನಿಸಿ ಇದೀಗ ಬತ್ತಿ ತಯಾರಿಕೆ ಆರಂಭಿಸಿದ್ದೇನೆ. ಮನೆಯವರು ಸಹಕಾರ ನೀಡುತ್ತಿದ್ದು, ಈಗಾಗಲೇ ವಿವಿಧ ಕಡೆಗಳಿಂದ ಬೇಡಿಕೆ ಬರುತ್ತಿದೆ.
    -ಮನೋಜ್ ಪಲ್ಲತ್ತಡ್ಕ, ಅಂಗವಿಕಲ ಯುವಕ

    ನನ್ನ ಪುತ್ರ ಮನೋಜ್ ಅಂಗವೈಕಲ್ಯ ಹೊಂದಿದ್ದು, ಆದರೂ ತಾನು ಬೇರೆಯವರನ್ನು ಅವಲಂಬಿಸದೆ ಸ್ವಾವಲಂಬಿ ಬದುಕು ನಡೆಸಬೇಕೆಂಬ ಬಯಕೆ ಆತನದ್ದು. ಕೋಳಿ, ಆಡು ಸಾಕಣೆ ನಡೆಸುತ್ತಿದ್ದ ಆತ ಇದೀಗ ದೀಪದ ಬತ್ತಿ ತಯಾರಿ ಆರಂಭಿಸಿದ್ದಾನೆ. ನಾವೆಲ್ಲ ಸಹಕಾರ ನೀಡುವ ಮೂಲಕ ಆತನ ಬಯಕೆಗೆ ಬೆಂಬಲ ನೀಡುತ್ತಿದ್ದೇವೆ.
    -ರೇವತಿ, ಮನೋಜ್ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts