More

    ಕುಂಡ್ಯೊಳಂಡ ಹಾಕಿ ಕಾರ್ನಿವಲ್ ಸಮಾರೋಪ

    ನಾಪೋಕ್ಲು
    ಕ್ರೀಡೆಯನ್ನು ಉತ್ತೇಜಿಸಲು ರಾಜಕೀಯವಾಗಿ, ಆರ್ಥಿಕವಾಗಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ನಾಪೋಕ್ಲು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಒಂದು ತಿಂಗಳ ಕಾಲ ನಡೆದ ಕುಂಡ್ಯೊಳಂಡ ಹಾಕಿ ಕಾರ್ನಿವಲ್ ಸಮಾರೋಪ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.

    ಕ್ರೀಡೆ ಇಲ್ಲದ ಕೊಡಗು ಇಲ್ಲ. ಯಾವುದೇ ಕ್ರೀಡೆ ಆದರೂ ಪ್ರೋತ್ಸಾಹ ಅಗತ್ಯ. ಕೊಡವ ಹಾಕಿ ಅಕಾಡೆಮಿಗೆ ವಿರಾಜಪೇಟೆ ತಾಲೂಕು ತೋರದಲ್ಲಿ ಐದು ಎಕರೆ ಜಾಗ ನೀಡುವ ವ್ಯವಸ್ಥೆ ಆಗುತ್ತಿದೆ. ಮಕ್ಕಳ ಪ್ರತಿಭೆಗೆ ಅವಕಾಶ ಸಿಗುವಂತಾಗಬೇಕು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೌಟುಂಬಿಕ ಹಾಕಿ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳಬೇಕು. ಈ ಬಾರಿ ಕುಂಡ್ಯೋಳಂಡ ಕುಟುಂಬಸ್ಥರು ವೈವಿಧ್ಯಮಯವಾಗಿ ಕ್ರೀಡಾಕೂಟ ಸಂಘಟಿಸುವ ಮೂಲಕ ಮುಂದೆ ಕೌಟುಂಬಿಕ ಹಾಕಿ ಪಂದ್ಯಾವಳಿಯ ಆತಿಥ್ಯ ವಹಿಸುವ ಕುಟುಂಬದ ಬಗ್ಗೆ ದೊಡ್ಡ ನಿರೀಕ್ಷೆ ಮೂಡುವಂತೆ ಮಾಡಿದೆ ಎಂದರು.

    ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ ೩೨ ಮಹಿಳಾ ಆಟಗಾರರು ಸೇರಿದಂತೆ ಐದು ವರ್ಷದ ಬಾಲಕ ೯೦ ವರ್ಷದ ಹಿರಿಯ ಕೌಟುಂಬಿಕ ಹಾಕಿಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷ ೨೫ನೇ ಕೌಟುಂಬಿಕ ಹಾಕಿ ಉತ್ಸವ ಬೆಳ್ಳಿ ಹಬ್ಬ ಮುದ್ದಂಡ ಕುಟುಂಬಸ್ಥರ ನೇತೃತ್ವದಲ್ಲಿ ಮಡಿಕೇರಿ ನಡೆಯಲಿದೆ. ಇದು ಮತ್ತಷ್ಟು ವೈಭವಪೂರ್ಣವಾಗಿ ನಡೆಯಬೇಕು ಎಂದು ಆಶಿಸಿದರು.

    ಐ ಆರ್ ಎಸ್ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಡಾ.ಕೊಟ್ಟಂಗಡ ಪೆಮ್ಮಯ್ಯ ಮಾತನಾಡಿ ಕೊಡವರ ಒಗ್ಗಟು ಪರಿಶ್ರಮದ ಫಲ ಈ ಕ್ರೀಡಾಕೂಟ. ಕೊಡವ ಜನಾಂಗದವರ ಆರೋಗ್ಯ ದೈಹಿಕ ಕ್ಷಮತೆ ಕ್ಷೀಣಿಸುತ್ತಿದ್ದು ಪ್ರತಿಯೊಬ್ಬರು ಆರೋಗ್ಯ ವೃದ್ಧಿಯತ್ತ ಗಮನಹರಿಸಬೇಕು ಎಂದರು.
    ಹಾಕಿ ಪಂದ್ಯಾವಳಿಯ ಸಂಚಾಲಕ ದಿನೇಶ್ ಕಾರ್ಯಪ್ಪ ಮಾತನಾಡಿ ಕ್ರೀಡಾಕುಟವನ್ನು ಕ್ಯಾರಿಯರ್ ಗೈಡೆನ್ಸ್, ಫುಡ್ ಫೆಸ್ಟಿವಲ್, ಉಚಿತ ಆರೋಗ್ಯ ಕ್ಯಾಂಪ್, ಫ್ಯಾಮಿಲಿ ಮೆರಥಾನ್, ಬೊಳಕಾಟ್ ತರಬೇತಿ, ಸಾಧಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದರು.

    ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ. ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೈದರಾಬಾದ್ ವಿದೇಶಿ ತನಿಖಾ ಘಟಕದ ಉಪ ನಿರ್ದೇಶಕ ಮುಕ್ಕಾಟಿರ ಪುನೀತ್ ಕುಟ್ಟಯ್ಯ ,ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ಪುಚ್ಚಿ ಮಾಡ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟರಾಜ ಇದ್ದರು.

    ೨೩ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ೫ ಲಕ್ಷ ರೂ.ಗಳ ಚೆಕ್ ಅನ್ನು ಇದೇ ಕಾರ್ಯಕ್ರಮದಲ್ಲಿ ಹಾಕಿ ಅಕಾಡೆಮಿಗೆ ಹಸ್ತಾಂತರಿಸಿದರು. ಲೇಖಕ ಅಲ್ಲಾರಂಡ ವಿಠಲ್ ನಂಜಪ್ಪ ಕುಂಡ್ಯೋಳಂಡ ಕುಟುಂಬದ ಕುರಿತು ಬರೆದ ಪುಸ್ತಕವನ್ನು ಈ ಸಂದರ್ಭ ಲೋಕಾರ್ಪಣೆಗೊಳಿಸಲಾಯಿತು. ಕೊಡವ ಹಾಕಿ ಅಕಾಡೆಮಿಗೆ ೫ ಎಕರೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಹಾಗೂ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕುಂಡ್ಯೋಳಂಡ ಕುಟುಂಬಸ್ಥರಿಗೆ ಒಡಿಕತ್ತಿಯನ್ನು ನೀಡುವುದರ ಮೂಲಕ ಹಾಕಿ ಅಕಾಡೆಮಿಯಿಂದ ಗೌರವ ಸಲ್ಲಿಸಲಾಯಿತು.
    ಕ್ರೀಡಾಕೂಟದ ಸಂದರ್ಭ ಮಹಿಳೆಯರಿಗಾಗಿ ಏರ್ಪಡಿಸಿದ್ದ ಉದ್ದ ಜಡೆ ಮತ್ತು ಪುರುಷರಿಗೆ ಏರ್ಪಡಿಸಿದ್ದ ದಪ್ಪ ಮೀಸೆ ಸ್ಪರ್ಧೆ ಗಮನ ಸೆಳೆಯಿತು. ಉದ್ದ ಜಡೆಯ ಬಾಲಕಿಯರ ವಿಭಾಗದಲ್ಲಿ ಬಿದ್ದಾಟಂಡ ದೀಕ್ಷಾ ಪೂಣಚ್ಚ ಪ್ರಥಮ, ಮಂಡೇಡ ಸಿಂಚನ ಮುತ್ತಪ್ಪ ದ್ವಿತೀಯ ಹಾಗೂ ಬಿಟ್ಟಿರ ನಿಮಿಷ ಭೋಜಮ್ಮ ತೃತೀಯ ಸ್ಥಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ಚಾಮೇರ ಮಾನಸ ಪ್ರಥಮ, ಬಾಚಿನಾಡಂಡ ಶೀತಲ್ ಪೊನ್ನಪ್ಪ ದ್ವಿತೀಯ ಹಾಗೂ ಕಾಳೆಯಂಡ ಅನಿತಾ ತೃತೀಯ ಸ್ಥಾನ ಗಳಿಸಿದರು. ದಪ್ಪ ಮೀಸೆಯ ಸ್ಪರ್ಧೆಯಲ್ಲಿ ಚೆಪ್ಪುಡಿರ ರವಿ ಕರಂಬಯ್ಯ ಪ್ರಥಮ, ಕಾಳಚಂಡ ರವಿ ತಮ್ಮಯ್ಯ ದ್ವಿತೀಯ ಹಾಗೂ ಬೊಟೋಳಂಡ ನಂದ ಕಾರ್ಯಪ್ಪ ತೃತಿಯ ಸ್ಥಾನ ಗಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts