More

  ಲೆಕ್ಕಾಧಿಕಾರಿ ಕಚೇರಿಗೆ ಟಾರ್ಪಲ್ಲೇ ಗತಿ!

  -ರಾಘವೇಂದ್ರ ಪೈ ಗಂಗೊಳ್ಳಿ

  ಪ್ರಸಿದ್ಧ ಮೀನುಗಾರಿಕಾ ಬಂದರು ಪ್ರದೇಶವಾದ ಗಂಗೊಳ್ಳಿಯಲ್ಲಿಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಳೆ ಬಂತೆಂದರೆ ನೀರು ಕಚೇರಿಯೊಳಗೆ ಸೋರುತ್ತಿದ್ದು, ಇಲ್ಲಿನ ಸಿಬ್ಬಂದಿಗೆ ಕೆಲಸ ಮಾಡಲು ತೊಂದರೆಯಾಗುತ್ತಿದೆ.

  ಗಂಗೊಳ್ಳಿ ಗ್ರಾಪಂ ಅಧೀನದಲ್ಲಿರುವ ಕಟ್ಟಡದಲ್ಲಿ ಗಂಗೊಳ್ಳಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಇದೆ. ಈ ಹಿಂದೆ ಗಂಗೊಳ್ಳಿ ಗ್ರಾಪಂ ಕಾರ್ಯಾಲಯದ ಕಟ್ಟಡದಲ್ಲಿದ್ದ ಈ ಕಚೇರಿ ಗ್ರಾಮ ಪಂಚಾಯತ್ ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಜ್ಯೂನಿಯರ್ ಕಾಲೇಜ್ ರಸ್ತೆ ಮಾರ್ಗದಲ್ಲಿರುವ ಗ್ರಾಮ ಪಂಚಾಯತ್ ಕಾರ್ಯಾಲಯದ ಹಳೆಯ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.

  ದಾಖಲೆಗಳಿಗೆ ತೊಡಕು

  ಮಳೆಗಾಲದಲ್ಲಿ ನೀರು ಸೋರುತ್ತಿರುವುದರಿಂದ ಕಚೇರಿಯಲ್ಲಿರುವ ದಾಖಲೆಗಳು ನಾಶವಾಗುವ ಸಾಧ್ಯತೆ ಇದೆ. ಕಳೆದ ವರ್ಷವೂ ಮಳೆಗಾಲದಲ್ಲಿ ಮೇಲ್ಛಾವಣಿಗೆ ಟಾರ್ಪಲ್ ಹಾಸಲಾಗಿತ್ತು. ಬಳಕ ಮೇಲ್ಛಾವಣಿ ರಿಪೇರಿ ಮಾಡದ್ದರಿಂದ ಈ ವರ್ಷವೂ ಮಳೆಗಾಲದಲ್ಲಿ ಸೋರುತ್ತಿದೆ. ಹೀಗಾಗಿ ಮೇಲ್ಛಾವಣಿಗೆ ಮತ್ತೆ ಟಾರ್ಪಲ್ ಹಾಸಲಾಗಿದೆ. ಮೇಲ್ಛಾವಣಿ ಮತ್ತು ಕಟ್ಟಡ ಶಿಥಿಲಗೊಂಡಿದ್ದರಿಂದ ಕಚೇರಿ ಒಳಗೆ ಕಾರ್ಯನಿರ್ವಹಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜೀವ ಭಯವಾಗುತ್ತಿದೆ.

  ರಿಪೇರಿಗೆ ಹಿಂದೇಟು

  ಹಳೆಯ ಪಂಚಾಯತ್ ಕಾರ್ಯಾಲಯದ ಕಟ್ಟಡ ರಿಪೇರಿಗೆ ಗ್ರಾಪಂ ಅನುದಾನ ಮೀಸಲಿಟ್ಟಿದೆ. ಆದರೆ, ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಮೀಸಲಿಟ್ಟ ಅನುದಾನ ಸಾಕಾಗುತ್ತಿಲ್ಲ. ಹೀಗಾಗಿ ಈ ಕಟ್ಟಡದ ರಿಪೇರಿಗೆ ಗ್ರಾಪಂ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಹಳೆಯ ಕಟ್ಟಡ ತೆರವು ಮಾಡಿ ಹೊಸ ಕಟ್ಟಡ ನಿರ್ಮಿಸಲು ಈ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹೀಗಾಗಿ ಲೆಕ್ಕಾಧಿಕಾರಿ ಕಚೇರಿಗೆ ಮತ್ತೆ ಟಾರ್ಪಲ್ ಆಸರೆಯೇ ಗತಿಯಾಗಿದೆ.

  ಗ್ರಾಮ ಪಂಚಾಯಿತಿಯ ಹಿಂದಿನ ಕಾರ್ಯಾಲಯದ ಕಟ್ಟಡ ಮತ್ತು ಮೇಲ್ಛಾವಣಿ ಶಿಥಿಲಗೊಂಡಿದ್ದು, ರಿಪೇರಿಗೆ ಅನುದಾನ ಮೀಸಲಿಡಲಾಗಿದೆ. ಆದರೆ, ಕಟ್ಟಡ ಸಂಪೂರ್ಣ ರಿಪೇರಿ ಮಾಡಬೇಕಿರುವುದರಿಂದ ಇರುವ ಅನುದಾನ ಸಾಕಾಗುತ್ತಿಲ್ಲ. ಹೊಸ ಕಟ್ಟಡ ನಿರ್ಮಿಸಲು ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು.
  -ಉಮಾಶಂಕರ, ಪಿಡಿಒ,ಗಂಗೊಳ್ಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts