ಕಿಂಡಿಅಣೆಕಟ್ಟೆ ತ್ಯಾಜ್ಯ ತೆರವು

sanooru dam
ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವ ಮರದ ದಿಮ್ಮಿ ಸಹಿತ ಇತರ ತ್ಯಾಜ್ಯ.
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಗಿಡಗಂಟಿ, ಕಸಗಳಿಂದ ಸರಾಗವಾಗಿ ನೀರು ಹರಿಯಲು ಸಮಸ್ಯೆಯಾಗುತ್ತಿದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಇವುಗಳನ್ನೆಲ್ಲ ಸ್ವಚ್ಛಗೊಳಿಸಿ ನದಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.

ಮಳೆಗಾಲದಲ್ಲಿ ನೀರಿನೊಂದಿಗೆ ಕೊಚ್ಚಿ ಬರುವ ಮರದ ದಿಮ್ಮಿ, ಗಿಡಗಂಟಿ ತ್ಯಾಜ್ಯ ಸೇತುವೆ ತಳಭಾಗದಲ್ಲಿ ಶೇಖರಣೆಯಾಗುವುದು ಮಾಮೂಲು. ಆದರೆ ಮಳೆ ಸುರಿದು ನದಿ ತುಂಬಿ ಹರಿಯುವ ಸಂದರ್ಭ ಗಿಡಗಂಟಿಗಳಿಂದ ಸರಾಗವಾಗಿ ನೀರು ಹರಿಯದೆ ಸಮೀಪದ ಕೃಷಿ ಭೂಮಿ ಕೃತಕ ನೆರೆಯಿಂದ ಜಲಾವೃತಗೊಳ್ಳುವುದು ಸಾಮಾನ್ಯ.

ಸಾಣೂರು ಗ್ರಾಪಂ ವ್ಯಾಪ್ತಿಯ ಕೇಪುಲು ಬಳಿ ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟೆಯಲ್ಲಿ ಬೃಹತ್ ಗಾತ್ರದ ಮರದ ದಿಮ್ಮಿ, ಗಿಡ, ಕಸ, ಪ್ಲಾಸ್ಟಿಕ್ ತ್ಯಾಜ್ಯ ಸಿಕ್ಕಿಹಾಕಿಕೊಂಡು ನದಿಯ ನೀರು ಸರಾಗವಾಗಿ ಹರಿಯಲು ತೊಡಕಾಗಿ ಹತ್ತಿರದ ಕೃಷಿ ಭೂಮಿ, ಅಡಿಕೆ ತೋಟ, ಮನೆಗಳು ನೆರೆಯ ನೀರಿನಿಂದ ಮುಳುಗುವ ಭೀತಿಯಲ್ಲಿದ್ದವು. ಇದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕದ ಸದಸ್ಯರು ತಪ್ಪಿಸಿದ್ದಾರೆ.

Shourya team
ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡ.

ಸಾಣೂರು ಗ್ರಾಪಂಗೆ ಪ್ರತಿ ವರ್ಷ ನದಿಯಲ್ಲಿ ಶೇಖರಣೆಗೊಳ್ಳುವ ತ್ಯಾಜ್ಯ ಸವಾಲಾಗಿತ್ತು. ಈ ಬಾರಿ ತಕ್ಷಣ ಗ್ರಾಪಂ ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಖಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಣೂರು ಒಕ್ಕೂಟದ ಸೇವಾ ಪ್ರತಿನಿಧಿ ಅರುಣಿಯವರಿಗೆ ಮಾಹಿತಿ ನೀಡಿದ್ದು ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.

ಸಾರ್ವಜನಿಕರಿಂದ ಮೆಚ್ಚುಗೆ

ಸಾಣೂರು ವಲಯದ ಶೌರ್ಯ ವಿಪತ್ತು ಘಟಕದ 25 ಸದಸ್ಯರು ಫಲಾಪೇಕ್ಷೆ ಇಲ್ಲದೆ ಶಾಂಭವಿ ನದಿಗೆ ಇಳಿದು ಸತತ ನಾಲ್ಕು ಗಂಟೆ ಶ್ರಮದಾನದಿಂದ ತ್ಯಾಜ್ಯ ವಿಲೇವಾರಿ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶೌರ್ಯ ತಂಡ ಇಂತಹದ್ದೇ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿದೆ. ಪ್ರತಿ ವಾರ ಒಂದು ದಿನ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಚತಾ ಕಾರ್ಯ, ಹಾಗೂ ಮುರತಂಗಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೈ ತೋಟದ ರಚನೆ ಮತ್ತು ಇತ್ತೀಚೆಗೆ ಸಾಣೂರು ಸೇತುವೆ ಬಳಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಸಮಸ್ಯೆಯಾದಾಗ ಮೆಸ್ಕಾಂ ಇಲಾಖೆ ಸಿಬ್ಬಂದಿ ಜತೆಯಲ್ಲಿ ಶೌರ್ಯ ವಿಪತ್ತು ಘಟಕದ ಸದಸ್ಯರು ಕೈ ಜೋಡಿಸಿದ್ದಾರೆ. ಅಣೆಕಟ್ಟೆ ತ್ಯಾಜ್ಯ ವಿಲೇವಾರಿಗೆ ಪಂಚಾಯಿತಿ ಸಿಬ್ಬಂದಿ ವಸಂತ, ಸ್ಥಳೀಯರಾದ ಅಶೋಕ್ ಪಿಂಟೊ ಮೊದಲಾದವರು ಸಹಕರಿಸಿದ್ದಾರೆ.

ಗ್ರಾಮದಲ್ಲಿ ಪ್ರತಿ ಭಾನುವಾರ ಸ್ವಚ್ಛತೆ, ಶಾಲೆಗಳಿಗೆ ಕೈತೋಟ ಹಾಗೂ ಗಾಳಿ ಮಳೆಯಿಂದ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದಾಗ ಅದನ್ನು ತೆರವುಗೊಳಿಸುವಂತಹ ಕಾರ್ಯದಲ್ಲಿ ನಮ್ಮ ವಲಯದ 25 ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ತೊಡಗಿಸಿಕೊಳ್ಳುತ್ತಿದ್ದಾರೆ. ಯಾವುದೇ ಸಂದರ್ಭ ಮಾಹಿತಿ ಬಂದ ಕೂಡಲೇ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇವೆ.-ಅರುಣಿ, ವಿಪತ್ತು ನಿರ್ವಹಣಾ ತಂಡದ ಸಂಯೋಜಕಿ

ಗ್ರಾಮದ ಜನರಿಗೆ ಸಮಸ್ಯೆಯಾಗುತ್ತಿದ್ದ ಅಣೆಕಟ್ಟೆಯ ಸಮಸ್ಯೆಗೆ ಕೂಡಲೇ ಸ್ಪಂದಿಸಿ ವಿಲೇವಾರಿ ಮಾಡುವ ಕೆಲಸ ಮಾಡಿದ ಸಾಣೂರು ವಲಯ ಶೌರ್ಯ ವಿಪತ್ತು ತಂಡದ ಕಾರ್ಯ ಗ್ರಾಮದ ಜನರು ನಿಜಕ್ಕೂ ಮೆಚ್ಚಿಕೊಂಡಿದ್ದಾರೆ.-ಪ್ರಸಾದ್ ಪೂಜಾರಿ, ಸಾಣೂರು ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net