More

    ಸಂಪಾದಕೀಯ: ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ

    ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ವೃತ್ತಿಪರ ಶಿಕ್ಷಣ ಕೋರ್ಸ್​ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಈ ವರ್ಷ ಗೊಂದಲದ ಗೂಡಾಗಿ, ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದ್ದು ಅಕ್ಷಮ್ಯ. ಏ. 18 ಮತ್ತು 19ರಂದು ನಡೆದ ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಕ್ರಮಕ್ಕೆ ಹೊರತಾದ ಸುಮಾರು ಐವತ್ತು ಪ್ರಶ್ನೆಗಳು ಇದ್ದದ್ದು ಈ ಎಲ್ಲ ಸಮಸ್ಯೆಗೆ ಮೂಲ. ಮೊದಲ ದಿನವೇ ಮಾಧ್ಯಮಗಳಲ್ಲಿ ಈ ಕುರಿತು ವಿಸõತವಾಗಿ ವರದಿಗಳು ಪ್ರಕಟವಾದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೂಡಲೇ ಎಚ್ಚೆತ್ತುಕೊಳ್ಳಲಿಲ್ಲ. ಸಾಲದೆಂಬಂತೆ ಮರುದಿನದ ಪ್ರಶ್ನೆ ಪತ್ರಿಕೆಯಲ್ಲೂ ಪಠ್ಯಕ್ರಮಕ್ಕೆ ಹೊರತಾದ ಹಲವು ಪ್ರಶ್ನೆಗಳಿದ್ದವು. ಇದನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರು ನಿರಂತರವಾಗಿ ಪ್ರಶ್ನಿಸತೊಡಗಿದ ನಂತರ ಕೆಇಎ ಅಧಿಕಾರಿಗಳು ಎಚ್ಚೆತ್ತುಕೊಂಡರು. ತಪ್ಪಾಗಿರುವುದನ್ನು ತಡವಾಗಿಯಾದರೂ ಒಪ್ಪಿಕೊಂಡರು. ಆದರೆ ಆಗಿದ್ದ ಪ್ರಮಾದಕ್ಕೆ ಯಾವುದೇ ಪರಿಹಾರ ಕಂಡುಕೊಳ್ಳಲು ಮುಂದಾಗಲಿಲ್ಲ. ಒತ್ತಡ ಹೆಚ್ಚಾದ ಬಳಿಕ, ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಬಂಧ ತಜ್ಞರ ಸಮಿತಿಯನ್ನು ರಚಿಸಿದರು. ಆ ಸಮಿತಿ ಇದೀಗ ತನ್ನ ವರದಿಯನ್ನು ಸಲ್ಲಿಸಿ, ಗೊಂದಲಕ್ಕೆ ತೆರೆ ಎಳೆದಿದೆ. ಇಷ್ಟೆಲ್ಲ ಆಗುವ ಹೊತ್ತಿಗೆ ವಿದ್ಯಾರ್ಥಿಗಳು ಮತ್ತು ಪಾಲಕರ ಮನಸ್ಥಿತಿ ಏನಾಗಿರುತ್ತದೆ ಎಂಬುದರ ಬಗ್ಗೆ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಎಳ್ಳಷ್ಟೂ ಯೋಚನೆ ಮಾಡದೇ ಇದ್ದದ್ದು ದುರದೃಷ್ಟಕರ.

    ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನದಿಂದಲೇ ಕೈಬಿಡಬೇಕು, ತಪ್ಪಾದ ಎರಡು ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು, ತೆಗೆದುಹಾಕಲಾದ ಪ್ರಶ್ನೆಗಳನ್ನು ಮತ್ತು ಕೀ ಉತ್ತರಗಳನ್ನು ಕೆಇಎ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸುಗಳನ್ನು ಪಾಲಿಸುವಂತೆ ಕೆಇಎಗೆ ಸರ್ಕಾರ ಸೂಚನೆಯನ್ನೂ ನೀಡಿದೆ. ಕೆಇಎ ತಕ್ಷಣ ಕಾರ್ಯಪ್ರವೃತ್ತವಾಗಿ, ಆದಷ್ಟು ಬೇಗ ಕೀ ಉತ್ತರಗಳನ್ನು ಪ್ರಕಟಿಸಬೇಕು. ವಿದ್ಯಾರ್ಥಿಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು. ಮೌಲ್ಯಮಾಪನವನ್ನೂ ಶೀಘ್ರವೇ ಪೂರ್ಣಗೊಳಿಸಿ, ಫಲಿತಾಂಶವನ್ನು ಪ್ರಕಟಿಸಬೇಕು. ಪ್ರಶ್ನೆ ಪತ್ರಿಕೆ ರೂಪಿಸುವ ವಿಷಯ ತಜ್ಞರಿಗೆ ಸಿಲೆಬಸ್ ಕೊಡುವಾಗ ಕೆಇಎಯ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಧಿಸೂಚನೆ ಹೊರಡಿಸುವುದಕ್ಕೆ ಮೊದಲೇ, ಪಿಯು ಇಲಾಖೆಯ ಜತೆ ಸಮಾಲೋಚಿಸಿ ಸಿಲೆಬಸ್ ಖಚಿತಪಡಿಸಿಕೊಳ್ಳಬೇಕು. ಸಿಲೆಬಸ್​ಗೆ ಸಂಬಂಧಿಸಿದಂತೆ ಪಿಯು ಇಲಾಖೆ ಮತ್ತು ಕೆಇಎ ಸಮನ್ವಯ ಸರಿಯಾಗಿದ್ದರೆ ಈ ರೀತಿಯ ಸಮಸ್ಯೆ ಪುನರಾವರ್ತನೆ ಆಗುವುದನ್ನು ತಪ್ಪಿಸಬಹುದು. ಸಿಇಟಿ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯೇನಲ್ಲ. ಈ ವರ್ಷ ಸುಮಾರು ಮೂರೂವರೆ ಲಕ್ಷ ಮಕ್ಕಳು ಈ ಪರೀಕ್ಷೆ ಬರೆದಿದ್ದಾರೆ. ಅದಲ್ಲದೇ, ಈ ವಿದ್ಯಾರ್ಥಿಗಳಿಗೆ ಇದು ಜೀವನದ ಭವಿಷ್ಯವನ್ನು ರೂಪಿಸುವ ಪರೀಕ್ಷೆ. ಹಾಗಾಗಿ, ಈ ಬಾರಿ ಆದಂತಹ ಗೊಂದಲ ಮುಂದೆಂದೂ ಪುನರಾವರ್ತನೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸುವುದು ಅಗತ್ಯ.

    ಲೋಕಸಭೆ ಚುನಾವಣೆ: ಸಿಎ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಿರಾಕರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts