ಜೆಡಿಎಸ್​ನಿಂದ ಪ್ರಜ್ವಲ್ ರೇವಣ್ಣ​ ಉಚ್ಚಾಟನೆ; ದೇಶವ್ಯಾಪಿ ಸದ್ದು ಮಾಡುತ್ತಿದೆ ಲೈಂಗಿಕ ದೌರ್ಜನ್ಯ ಪ್ರಕರಣ

WhatsApp Image 2024-04-30 at 6.59.47 AM
Published on

ಬೆಂಗಳೂರು: ಹಾಸನ ಸಂಸದ, ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಇದೀಗ ರಾಜ್ಯವ್ಯಾಪಿ ಮಾತ್ರವಲ್ಲದೇ ರಾಷ್ಟ್ರಮಟ್ಟಕ್ಕೂ ತಲುಪಿದೆ. ಪ್ರಜ್ವಲ್​ಗೆ ಸಂಬಂಧಿಸಿದ ವಿಡಿಯೋವಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆದ ಹಿನ್ನೆಲೆ ಈಗ ವಿಡಿಯೋ ಪ್ರಕರಣ ದೇಶವ್ಯಾಪಿ ಭಾರೀ ಸಂಚಲನ ಹುಟ್ಟುಹಾಕಿದೆ. ಈ ವಿಷಯ ತೀವ್ರವಾಗುತ್ತಿದ್ದಂತೆ ಕಾಂಗ್ರೆಸ್​​ ನಾಯಕರು ಬಿಜೆಪಿ ಹಾಗೂ ಜೆಡಿಎಸ್​ ವಿರುದ್ಧ ಭಾರೀ ಖಂಡನೆ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಇದೀಗ ಜೆಡಿಎಸ್, ಹಾಸನ ಲೋಕಸಭಾ ಕ್ಷೇತ್ರದ ಸಂಸದ​ ಪ್ರಜ್ವಲ್​​ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ. ಈ ಬಗ್ಗೆ ಸ್ವತಃ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸಹ ಸ್ಪಷ್ಟಪಡಿಸಿದ್ದಾರೆ. ಇನ್ನೂ ಈ ವಿಚಾರ ರಾಷ್ಟ್ರಮಟ್ಟಕ್ಕೂ ತಲುಪಿದ್ದು, ದೇಶವ್ಯಾಪಿ ಪ್ರಜ್ವಲ್ ರೇವಣ್ಣ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದೆ.

ಈ ಪ್ರಕರಣದ ತನಿಖೆ ಆಗಬೇಕು ಎಂದು ನಿರ್ಧರಿಸಿದ ಸಿಎಂ ಸಿದ್ದರಾಮಯ್ಯ, ಈಗಾಗಲೇ ಎಸ್​ಐಟಿ ತಂಡಕ್ಕೆ ತನಿಖೆಗೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ತನಿಖಾ ದಳ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಎಲ್ಲಾ ಆಯಾಮದಲ್ಲಿಯೂ ವಿಚಾರಣೆ ನಡೆಸಿ,  ಹೆಚ್ಚಿನ ಮಾಹಿತಿ ಕಲೆಹಾಕುವಲ್ಲಿ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net