More

    ಟಿ20 ವಿಶ್ವಕಪ್​ಗೆ ರಿಷಭ್​ ಪಂತ್​ ಉಪನಾಯಕ? ಟೀಮ್​ ಇಂಡಿಯಾದಲ್ಲಿ ಹಾರ್ದಿಕ್​ ಪಾಂಡ್ಯ ಹುದ್ದೆ ಕಸಿಯಲಿದ್ದಾರೆ ವಿಕೆಟ್​ ಕೀಪರ್-ಬ್ಯಾಟರ್​​?

    ನವದೆಹಲಿ: ಒಂದೂವರೆ ತಿಂಗಳ ಹಿಂದೆ ಐಪಿಎಲ್​ನಲ್ಲಿ ಆಡುವ ಬಗ್ಗೆಯೇ ಅನುಮಾನದಲ್ಲಿದ್ದ ವಿಕೆಟ್​ ಕೀಪರ್​&ಬ್ಯಾಟರ್​ ರಿಷಭ್​ ಪಂತ್​ ಇದೀಗ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಉಪನಾಯಕರಾಗಿ ಮರಳಿ ಕಣಕ್ಕಿಳಿಯುವ ಸಾಧ್ಯತೆ ಕಾಣಿಸಿದೆ. ಐಪಿಎಲ್​ನಲ್ಲಿ ತೋರುತ್ತಿರುವ ಭರ್ಜರಿ ನಿರ್ವಹಣೆಯಿಂದ ರಿಷಭ್​ ಪಂತ್​, ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಬದಿಗೊತ್ತಿ ಉಪನಾಯಕನ ಸ್ಥಾನಕ್ಕೆ ಮರಳುವ ಪ್ರಮುಖ ಆಕಾಂ ಎನಿಸಿದ್ದಾರೆ.

    2022ರ ಅಂತ್ಯದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿದ್ದ ಪಂತ್​, ಹಾಲಿ ಐಪಿಎಲ್​ನಲ್ಲೇ ಮೊದಲ ಬಾರಿ ಮರಳಿ ಕಣಕ್ಕಿಳಿದಿದ್ದಾರೆ. ಆರಂಭಿಕ ಕೆಲ ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಪರದಾಡಿದ ಬಳಿಕ ಪಂತ್​ ಈಗ ಒಂದು ವರ್ಷ ಕಾಲ ಕ್ರಿಕೆಟ್​ ಮೈದಾನದಿಂದ ಹೊರಗಿದ್ದೆ ಎಂಬುದನ್ನು ಮರೆತವರಂತೆ ಹಳೆಯ ಲಯದಲ್ಲೇ ಬಿರುಸಿನಾಟವಾಡುತ್ತಿದ್ದಾರೆ.

    ಭೀಕರ ರಸ್ತೆ ಅಪಘಾತಕ್ಕೀಡಾಗುವುದಕ್ಕೆ ಮುನ್ನ ಪಂತ್​ ಭಾರತ ಟಿ20 ತಂಡದ ಉಪನಾಯಕರೇ ಆಗಿದ್ದರು. 2022ರ ಜೂನ್​ನಲ್ಲಿ ಪ್ರವಾಸಿ ದ. ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅವರು ಹಂಗಾಮಿ ನಾಯಕರೂ ಆಗಿದ್ದರು. ಹೀಗಾಗಿ ಈಗ ತಂಡಕ್ಕೆ ಮರಳುತ್ತಿರುವಾಗ ಅವರಿಗೆ ಹಳೆಯ ಜವಾಬ್ದಾರಿಯನ್ನೂ ಮರಳಿ ಒಪ್ಪಿಸಲು ಆಯ್ಕೆಗಾರರು ಬಯಸಿದ್ದಾರೆ ಎನ್ನಲಾಗಿದೆ.

    ಹಾರ್ದಿಕ್​ ಪಾಂಡ್ಯ ಹಾಲಿ ಐಪಿಎಲ್​ನಲ್ಲಿ ನಿರೀಕ್ಷಿತ ನಿರ್ವಹಣೆ ತೋರದಿರುವುದು ಪಂತ್​ ಉಪನಾಯಕನ ಸ್ಥಾನಕ್ಕೆ ಮರಳುವ ಹಾದಿಯನ್ನು ಸುಗಮಗೊಳಿಸಿದೆ ಎನ್ನಲಾಗುತ್ತಿದೆ. 2022ರಲ್ಲಿ ಗುಜರಾತ್​ ಟೈಟಾನ್ಸ್​ಗೆ ಚೊಚ್ಚಲ ಯತ್ನದಲ್ಲೇ ಐಪಿಎಲ್​ ಪ್ರಶಸ್ತಿ ಗೆದ್ದುಕೊಟ್ಟ ನಂತರದಲ್ಲಿ ಹಾರ್ದಿಕ್​ ಭಾರತ ತಂಡವನ್ನು ಟಿ20 ಕ್ರಿಕೆಟ್​ನಲ್ಲಿ ಮುನ್ನಡೆಸಿದ್ದಲ್ಲದೆ, ಟಿ20 ವಿಶ್ವಕಪ್​ನಲ್ಲೂ ನಾಯಕತ್ವ ವಹಿಸುವ ನೆಚ್ಚಿನ ಅಭ್ಯರ್ಥಿ ಎನಿಸಿದ್ದರು. ಆದರೆ ರೋಹಿತ್​ ಶರ್ಮಗೆ ಪಟ್ಟ ಖಚಿತಗೊಂಡ ಬಳಿಕ ಹಾರ್ದಿಕ್​ಗೆ ಉಪನಾಯಕನ ಸ್ಥಾನವನ್ನೇ ಬಾಕಿ ಉಳಿದಿತ್ತು. ಹಾಲಿ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ನಾಯಕರಾಗಿ ಮಾತ್ರವಲ್ಲದೆ, ಬ್ಯಾಟಿಂಗ್​-ಬೌಲಿಂಗ್​ನಲ್ಲೂ ವೈಫಲ್ಯ ಅನುಭವಿಸಿರುವುದು ಈಗ ಅವರ ಈ ಹುದ್ದೆಗೂ ಕುತ್ತು ತರುವಂತೆ ಮಾಡಿದೆ. ಆದರೆ ಸದ್ಯ ಫಾರ್ಮ್​ನಲ್ಲಿಲ್ಲದಿದ್ದರೂ, ಅವರನ್ನು ಟಿ20 ವಿಶ್ವಕಪ್​ ತಂಡದಿಂದ ಹೊರಗಿಡುವ ರಿಸ್ಕ್​ಅನ್ನು ಆಯ್ಕೆಗಾರರು ತೆಗೆದುಕೊಳ್ಳಲಾರರು ಎನ್ನಲಾಗಿದೆ.

    ಅಹದಾಬಾದ್​ನಲ್ಲಿ ಇಂದು ಆಯ್ಕೆ ಸಮಿತಿಯ ಸಭೆ
    ಅಜಿತ್​ ಅಗರ್ಕರ್​ ಸಾರಥ್ಯದ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಅಹಮದಾಬಾದ್​ನಲ್ಲಿ ಮಂಗಳವಾರ ಸಭೆ ನಡೆಸಿ ಟಿ20 ವಿಶ್ವಕಪ್​ಗೆ ಭಾರತದ 15 ಆಟಗಾರರ ತಂಡವನ್ನು ಅಂತಿಮಗೊಳಿಸಲಿದ್ದಾರೆ. ಒಂದು ದಿನದ ಬಳಿಕ ಅಂದರೆ ಬುಧವಾರ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸದ್ಯ ಗುಜರಾತ್​ನ ರಾಜಕೀಯ ಚಟುವಟಿಕೆಯಲ್ಲೂ ಬಿಜಿಯಾಗಿರುವ ಜಯ್​ ಷಾ, ಇದರ ನಡುವೆಯೂ ಮಂಡಳಿಯ ಕಾರ್ಯದರ್ಶಿಯಾಗಿ ಎಂದಿನಂತೆ ಆಯ್ಕೆ ಸಮಿತಿಯ ಸಭೆಯ ಸಂಚಾಲಕ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    ಆರ್ಚರಿ ವಿಶ್ವಕಪ್​ನಲ್ಲಿ ಐತಿಹಾಸಿಕ ಪದಕ ಸಾಧನೆ ಮೆರೆದ ಭಾರತದ ಬಿಲ್ಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts