More

    ಆರೋಗ್ಯ ವ್ಯವಸ್ಥೆಯ ಅಡಿಗಲ್ಲು ಕುಟುಂಬ ವೈದ್ಯ

    ಇಂದು ಕುಟುಂಬ ವೈದ್ಯ ಎಂಬ ಪರಿಕಲ್ಪನೆಯು ನಗರ ಪ್ರದೇಶಗಳಲ್ಲಿ ನಶಿಸಿಹೋಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಶಿಸುವ ಹಾದಿಯಲ್ಲಿದೆ. ಹಾಗಾಗಿ ಶ್ರೀಸಾಮಾನ್ಯನಿಗೆ ಕಡಿಮೆ ವೆಚ್ಚದಲ್ಲಿ ಸಮಗ್ರ ವೈದ್ಯಕೀಯ ಚಿಕಿತ್ಸೆ ಹಾಗೂ ಮಾರ್ಗದರ್ಶನ ದೊರೆಯುವ ಸಾಧ್ಯತೆ ದಿನೇ ದಿನೇ ಕ್ಷೀಣಿಸುತ್ತಿದೆ. ಹಾಗಾಗಿ ಕುಟುಂಬ ವೈದ್ಯನನ್ನು ಮರು ಅನ್ವೇಷಿಸಬೇಕಾದ ಅಗತ್ಯದ ಬಗ್ಗೆ ಇಲ್ಲಿದೆ ಒಂದು ಪಕ್ಷಿನೋಟ.

    ಕುಟುಂಬ ವೈದ್ಯ… ಹೆಸರೇ ಸೂಚಿಸುವ ಹಾಗೆ ಕುಟುಂಬದ ಓರ್ವ ಸದಸ್ಯನಂತಿದ್ದು, ಕೌಟುಂಬದಲ್ಲಿರುವ ಪ್ರತಿಯೊಬ್ಬರ ದೈಹಿಕ-ಮಾನಸಿಕ ಆರೋಗ್ಯಗಳ ಪರಿವೆಯಿದ್ದು, ಸಕಾಲಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನವನ್ನು ನೀಡುವ ಆಪ್ತಗೆಳೆಯ! ಕುಟುಂಬ ವೈದ್ಯ ಎನ್ನುವ ಪರಿಕಲ್ಪನೆಯು ಇಂದು ನಿನ್ನೆಯದಲ್ಲ, ಅನಾದಿ ಕಾಲದ್ದು! ಇದು ಭಾರತಕ್ಕೆ ಸೀಮಿತವಾಗಿಲ್ಲ; ವಿಶ್ವವ್ಯಾಪಿ. ಐತಿಹಾಸಿಕವಾಗಿ ಕುಟುಂಬ ವೈದ್ಯ ಎನ್ನುವವನು ಇಡೀ ವೈದ್ಯಕೀಯ ವ್ಯವಸ್ಥೆಯ ತಳಪಾಯ. ಅದು ಕುಸಿಯಲಾರಂಭಿಸಿದರೆ, ಇಡೀ ವೈದ್ಯಕೀಯ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗುತ್ತದೆ.

    ಒಂದು ಕುಟುಂಬದಲ್ಲಿರುವ ಎಲ್ಲ ಜನರಿಗೆ, ಎಲ್ಲ ವಯಸ್ಸಿನವರಿಗೆ, ಅವರಿಗೆ ಬರಬಹುದಾದ ಎಲ್ಲ ಕಾಯಿಲೆಗಳಿಗೆ, ಅವರಿಗೆ ಎಟುಕಬಹುದಾದ ಖರ್ಚಿನಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನವನ್ನು ಸದಾ ಕಾಲಕ್ಕೂ ನೀಡುತ್ತಾ, ಮನೆಯ ವಿಸ್ತರಿತ ಕುಟುಂಬದ ಸದಸ್ಯನಾಗಿ, ಅವರು ಕರೆದಾಗಲೆಲ್ಲ ಓಗೊಡುವ, ಅಧಿಕೃತ ವೈದ್ಯಕೀಯ ಪದವಿ ಪಡೆದ ತಜ್ಞ. ಇಂದು ಬಲಗಣ್ಣಿಗೆ ಒಬ್ಬ ಸ್ಪೆಶಲಿಸ್ಟ್, ಎಡಗಣ್ಣಿಗೆ ಒಬ್ಬ ಸ್ಪೆಶಲಿಸ್ಟ್​ಗಳಿರುವ ಕಾಲದಲ್ಲಿ ಕುಟುಂಬ ವೈದ್ಯನನ್ನು ಸರ್ವಜ್ಞ ಎಂದು ಕರೆದರೆ ತಪ್ಪಾಗಲಾರದು. ಮನುಷ್ಯನ ಇಡೀ ದೇಹದ ಸಮಗ್ರ ರಚನೆ, ಕಾರ್ಯವೈಖರಿ, ಬರುವ ರೋಗಗಳು, ಲಕ್ಷಣಗಳು, ತುರ್ತು ಸಂದರ್ಭಗಳ ನಿಭಾವಣೆ, ಕನಿಷ್ಠ ವೆಚ್ಚದಲ್ಲಿ ಉಪಶಮನ ನೀಡುವ ಮಾನವೀಯತೆಯ ಪ್ರತಿರೂಪ ಕುಟುಂಬ ವೈದ್ಯ. ಬಹುಶಃ ಶಸ್ತ್ರಚಿಕಿತ್ಸೆ ಬಿಟ್ಟು ಉಳಿದೆಲ್ಲ ಅನಾರೋಗ್ಯಗಳನ್ನು ಕುಟುಂಬ ವೈದ್ಯ ಸಂಭಾಳಿಸಬಲ್ಲ.

    ಮನೆಯಲ್ಲಿರುವ ಪ್ರತಿಯೊಬ್ಬರ ವೈದ್ಯಕೀಯ ಇತಿಹಾಸ ಅವನಿಗೆ ತಿಳಿದಿರುತ್ತದೆ. ಅವರ ಆರ್ಥಿಕ ಸಾಮರ್ಥ್ಯ, ನಂಬಿಕೆಗಳು, ಆಚರಣೆಗಳು, ಆಹಾರ ಪದ್ಧತಿ, ಒಟ್ಟಾರೆ ಜೀವನಶೈಲಿಯೂ ನಿಕಟವಾಗಿ ಗೊತ್ತಿರುತ್ತದೆ. ಹಾಗಾಗಿ ಅವರು ಸುಲಭವಾಗಿ ನಿಖರ ವೈದ್ಯಕೀಯ ಚಿಕಿತ್ಸೆಯನ್ನು ನೀಡಬಲ್ಲರು. ವೈಯುಕ್ತಿಕವಾಗಿ ಪರಿಚಿತರಾಗಿರುವ ಕಾರಣ, ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಬಗ್ಗೆ ಪರಿಣಾಮಕಾರಿಯಾಗಿ ಆಪ್ತಸಲಹೆಗಳನ್ನು ನೀಡಬಲ್ಲರು.

    ಭಾರತದಲ್ಲಿ ಸುಮಾರು ಶೇ. 70ರಷ್ಟು ಜನರು ಇನ್ನೂ ಗ್ರಾಮೀಣ ಪ್ರದೇಶಗಳಲ್ಲೇ ವಾಸಿಸುತ್ತಿರುವ ಕಾರಣ, ನಮಗೆ ಕುಟುಂಬ ವೈದ್ಯರ ಅಗತ್ಯ ಹಿಂದೆಗಿಂತ ಇಂದು ಹೆಚ್ಚು ಅಗತ್ಯವಾಗಿದೆ. ಸರ್ಕಾರ, ವೈದ್ಯಕೀಯ ವಿದ್ಯಾಲಯಗಳು ಹಾಗೂ ಸಮುದಾಯವು ಒಟ್ಟಿಗೆ ಸೇರಿ, ಅಳಿವಿನಂಚಿಗೆ ಬಂದಿರುವ ಕುಟುಂಬ ವೈದ್ಯರನ್ನು ಉಳಿಸಿಕೊಳ್ಳಬೇಕಿದೆ.

    ಆರೋಗ್ಯ ವ್ಯವಸ್ಥೆಯ ಅಡಿಗಲ್ಲು ಕುಟುಂಬ ವೈದ್ಯ

    ಫ್ಯಾಮಿಲಿ ಡಾಕ್ಟರ್ ಯಾಕೆ ಬೇಕು…?

    ಸಮಾಜಕ್ಕೆ ಕುಟುಂಬ ವೈದ್ಯ ಯಾಕೆ ಬೇಕು, ಅವನು ಹೇಗೆ ಉಪಯುಕ್ತ ಎನ್ನುವುದರ ಬಗ್ಗೆ ತುಸು ಗಮನಿಸೋಣ. ಸಮಗ್ರ ಆರೈಕೆ (ಹೋಲಿಸ್ಟಿಕ್ ಕೇರ್): ಕುಟುಂಬ ವೈದ್ಯರು ಮಾತ್ರ ಒಂದು ಕುಟುಂಬಕ್ಕೆ ಅಗತ್ಯವಾದ ಎಲ್ಲ ರೀತಿಯ ವೈದ್ಯಕೀಯ ಆರೋಗ್ಯವನ್ನು ಸಕಾಲದಲ್ಲಿ ಒದಗಿಸಬಲ್ಲರು. ಅವರು ಯಾವಾಗಲೂ ಕುಟುಂಬ ಸದಸ್ಯರ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಆಯಾಮಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಚಿಕಿತ್ಸೆ ನೀಡುವುದುಂಟು. ವೃಥಾ ಪರೀಕ್ಷೆ ಹಾಗೂ ತಪಾಸಣೆ ಮಾಡಿಸುವುದಿಲ್ಲ. ಕಡಿಮೆ ಬೆಲೆಯ ಪ್ರಮಾಣಬದ್ಧ ಔಷಧಗಳನ್ನೇ ಬರೆಯುವುದುಂಟು.

    ನಿರಂತರ ಆರೈಕೆ: ಕುಟುಂಬ ವೈದ್ಯರು ಸಮುದಾಯದ ನಡುವೆ ವಾಸ ಮಾಡುವುದುಂಟು. ಹಾಗಾಗಿ ಅವರು ತಮ್ಮ ಕ್ಲಿನಿಕ್ಕಿಗೆ ಹೋಗುವಾಗ ಬರುವಾಗ ದಾರಿಯಲ್ಲಿ ಅನೇಕ ಮನೆಗಳಿಗೆ ಭೇಟಿ ನೀಡಿ, ಅವರ ಪ್ರಗತಿ ಗಮನಿಸಿ, ಮಾರ್ಗದರ್ಶನ ನೀಡುವುದುಂಟು. ಚಿಕಿತ್ಸೆ ಪೂರ್ಣಗೊಳ್ಳುವವರಿಗೂ ವ್ಯಕ್ತಿಯ ಜವಾಬ್ದಾರಿ ತಮ್ಮದು ಎನ್ನುವ ನೈತಿಕ ಪ್ರಜ್ಞೆ ಅವರಿಗಿರುತ್ತದೆ.

    ಸುಲಭ ಲಭ್ಯತೆ (ಆಕ್ಸೆಸಬಿಲಿಟಿ): ಕುಟುಂಬ ವೈದ್ಯರು ಸಮುದಾಯದ ನಡುವೆ ವಾಸ ಮಾಡುವ ಕಾರಣ, ನಿಯಮಿತವಾಗಿ ತಮ್ಮ ಕ್ಲಿನಿಕ್ಕಿಗೆ ಬರುವ ಕಾರಣ ಹಾಗೂ ತುರ್ತು ಸಂದರ್ಭಗಳಲ್ಲಿ ಫೋನ್ ಮೂಲಕ ರೋಗಿಗಳಿಗೆ ಲಭ್ಯ. ಒಂದು ಕುಟುಂಬದ ಆರ್ಥಿಕ ಸ್ಥಿತಿಗತಿ ಗೊತ್ತಿರುವ ಕಾರಣ, ಚಿಕಿತ್ಸೆಯನ್ನು ಅವರ ಅಳವಿನಲ್ಲಿಯೇ ನೀಡುವುದುಂಟು.

    ಆರೋಗ್ಯ ಶಿಕ್ಷಣ ಮತ್ತು ಆಪ್ತಸಲಹೆ: ಕುಟುಂಬ ವೈದ್ಯರು ಕೇವಲ ಚಿಕಿತ್ಸೆ ನೀಡುವುದಿಲ್ಲ. ಜೊತೆಗೆ ಆರೋಗ್ಯ ಶಿಕ್ಷಣವನ್ನೂ ನೀಡುತ್ತಾರೆ. ಅನಾರೋಗ್ಯ ಮರುಕಳಿಸದಂತೆ ಎಚ್ಚರಿಕೆ ಕ್ರಮಗಳನ್ನು ಸೂಚಿಸುತ್ತಾರೆ. ಜನ ಕೇಳುವ ಎಲ್ಲ ಪ್ರಶ್ನೆಗಳಿಗೆ, ಅವರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ಒಂದಲ್ಲ ಎರಡು ಸಲ ವಿವರಿಸುತ್ತಾರೆ.

    ಮುಂಜಾಗ್ರತೆ ವೈದ್ಯಕೀಯ:ಕುಟುಂಬ ವೈದ್ಯರು ಉಗುರಿನಲ್ಲಿ ಚಿವುಟಿ ಹಾಕಬಹುದಾದದ್ದನ್ನು ಉಗುರಿನಲ್ಲಿಯೇ ಕಿತ್ತೆಸೆಯುತ್ತಾರೆಯೇ ಹೊರತು ಕೊಡಲಿಯನ್ನು ತೆಗೆದುಕೊಳ್ಳುವುದಿಲ್ಲ. ಪ್ರಿವೆನ್ಷನ್ ಈಸ್ ಬೆಟರ್ ದೆನ್ ಕ್ಯೂರ್ ಎಂಬ ತತ್ತ್ವದಲ್ಲಿ ನಂಬಿಕೆ. ಒಂದು ಕುಟುಂಬದ ಆರೋಗ್ಯವನ್ನು ಕಾಪಾಡಲು ಅಗತ್ಯವಾದ ಎಲ್ಲ ಮಾರ್ಗದರ್ಶನಗಳನ್ನು ಹಾಗೂ ಮುನ್ನೆಚ್ಚರಿಕೆಯ ಕ್ರಮ ಸೂಚಿಸುತ್ತಾರೆ.

    ಕಡಿಮೆಯಾಗಲು ಕಾರಣಗಳು ಏನು? : ಕುಟುಂಬ ವೈದ್ಯರ ಸಂತತಿ ದಿನೇದಿನೆ ಕಡಿಮೆಯಾಗುತ್ತಿದೆ, ಮಹಾನಗರದಲ್ಲಿ ಅಳಿದೇ ಹೋಗಿದೆ, ಇದಕ್ಕೆ ಕಾರಣಗಳೇನು ಎನ್ನುವುದನ್ನು ನಾವು ಹುಡುಕಬೇಕಾಗಿದೆ.

    ಖಾಸಗೀಕರಣ: ಒಂದು ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಹೋಗಬೇಕಾಗಿತ್ತು. ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯರಾಗುತ್ತಿದ್ದವರು ಸಾಮಾನ್ಯವಾಗಿ ಹಣದ ದುರಾಸೆಗೆ ಒಳಗಾಗುತ್ತಿದ್ದುದು ಅಪರೂಪ. ಇವರು ಕುಟುಂಬ ವೈದ್ಯರಾಗಿ ಇಲ್ಲವೇ ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರಾಗಿ ದುಡಿಯುತ್ತಿದ್ದರು. ಈಗ ಖಾಸಗಿ ವಿದ್ಯಾಲಯಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ. ಇಲ್ಲಿ ಶಿಕ್ಷಣ ಪಡೆಯಲು ಕೋಟಿ ಕೋಟಿ ರೂ. ಖರ್ಚು ಮಾಡಬೇಕು. ಹೆತ್ತವರು ಮಾಡಿರುವ ಹೂಡಿಕೆಗೆ ಸೂಕ್ತ ಪ್ರತಿ ಫಲ ನಿರೀಕ್ಷಿಸುವುದು ಸಹಜ. ಆ ಪ್ರತಿಫಲವು ಕುಟುಂಬ ವೈದ್ಯಕೀಯದಲ್ಲಿ ದೊರೆಯುವುದಿಲ್ಲ. ಹಾಗಾಗಿ ಅವರು ಕುಟುಂಬ ವೈದ್ಯರಾಗಿ ಕೆಲಸ ಮಾಡಲು ಇಚ್ಚಿಸುವುದಿಲ್ಲ. ಇವರೆಲ್ಲರೂ ಹೂಡಿರುವ ಅಸಲಿಗೆ ಚಕ್ರಬಡ್ಡಿ ಸಮೇತ ಲಾಭವನ್ನು ತಂದುಕೊಡುವ ಸ್ಪೆಶಲೈಜೇಶನ್ ಕಡೆಗೆ ಹೋಗುವುದು ಸಹಜ.

    ಕುಟುಂಬ ವೈದ್ಯರ ಒತ್ತಡಗಳು: ಕುಟುಂಬ ವೈದ್ಯರಿಗೆ ಬಿಡುವು ಎನ್ನುವುದು ಇರುವುದಿಲ್ಲ. ಬೆಳಿಗ್ಗೆಯಿಂದ ರಾತ್ರಿ 10-11ರವರೆಗೆ ಕೆಲಸ ಮಾಡುವುದುಂಟು. ಇವರಿಗೆ ಖಾಸಗಿ ಜೀವನ ಎನ್ನುವುದು ಇರುವುದಿಲ್ಲ. ಎಷ್ಟೋ ರೋಗಿಗಳು ಪಡೆದ ಚಿಕಿತ್ಸೆಗೆ ಹಣವನ್ನೇ ಕೊಡದೇ ಹೋಗುವುದು ಅಪರೂಪವಲ್ಲ. ಮತ್ತೆ ಕೆಲವರು ಕುಟುಂಬ ವೈದ್ಯರೊಡನೆ ಜಗಳವಾಡುವುದೂ ಉಂಟು. ಹಾಗಾಗಿ ಅನೇಕ ವೈದ್ಯರು ಕುಟುಂಬ ವೈದ್ಯರಾಗಲು ಮುಂದೆ ಬರುತ್ತಿಲ್ಲ.

    ಔದ್ಯಮೀಕರಣ: ವೈದ್ಯಕೀಯ ಒಂದು ಉದ್ಯಮ, ವ್ಯಾಪಾರ ಆಗಿದೆ. ಹಾಗಾಗಿ ಒಬ್ಬ ರೋಗಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ಹಣ ಕೀಳುವ ವ್ಯವಸ್ಥಿತ ಯೋಜನೆ ರೂಪುಗೊಂಡಿದೆ. ಇಂತಹವರಿಗಾಗಿಯೇ ಆರೋಗ್ಯ ವಿಮಾ ವ್ಯವಸ್ಥೆಯೂ ರೂಪುಗೊಂಡಿದೆ. ಹಾಗಾಗಿ ಈ ಪಂಚತಾರಾ ಆಸ್ಪತ್ರೆಗಳ ಒಳಗೆ ಕಾಲಿಡಲು ಆರೋಗ್ಯ ವಿಮೆಯ ಬೆಂಬಲವಿರಲೇಬೇಕು.

    ರೋಗಿಗಳ ನಿರೀಕ್ಷೆ: ವೈದ್ಯರು ಉದ್ದುದ್ದ ತಪಾಸಣೆ ಅಥವಾ ದುಬಾರಿ ಔಷಧ ಸೂಚಿಸದಿದ್ದರೆ ಇವರೆಂಥಾ ವೈದ್ಯರು ಎಂದು ಗೊಣಗುವುದು ಹೆಚ್ಚುತ್ತಿದೆ. ಇಂದಿನ ದಿನಗಳ ವೈದ್ಯರು ರೋಗನಿದಾನವನ್ನು (ಡಯಾಗ್ನೋಸಿಸ್) ತಮ್ಮ ಅನುಭವದ ಹಿನ್ನೆಲೆಯಲ್ಲಿ ಮಾಡುವ ಬದಲು ತಪಾಸಣೆಗಳನ್ನೇ ಅವಲಂಬಿಸುತ್ತಾರೆ. ಒಂದೂ ತಪಾಸಣೆ ಮಾಡಿಸದೆ, ಔಷಧ ಕೊಡುವ ಕುಟುಂಬ ವೈದ್ಯರ ಸಾಮರ್ಥ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿರುವುದು ಹೆಚ್ಚುತ್ತಿದೆ.

    ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ ವೀಕ್ಷಿಸಿದ ಸಿಎಂ ಸಿದ್ಧರಾಮಯ್ಯ, ನಟ ಶಿವರಾಜ್​ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts