More

    ಶತಮಾನ ಕಂಡ ತಪಸ್ವಿ ಶ್ರೀ ವಿದ್ಯಾಮಾನ್ಯ ತೀರ್ಥರು

    | ವ್ಯಾಸರಾಜ ಸಂತೆಕೆಲ್ಲೂರ, ಕಲಬುರಗಿ

    ಶ್ರೀ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳಲ್ಲೊಂದು ‘ಮಹಾಭಾರತ ತಾತ್ಪರ್ಯ ನಿರ್ಣಯ’. ಇದು ಹೆಸರು ಹೇಳುವಂತೆ ಕೇವಲ ಮಹಾಭಾರತದ ನಿರ್ಣಯವನ್ನು ನೀಡುವುದಲ್ಲ, ರಾಮಾಯಣವನ್ನೂ ಸೇರಿಸಿ ಸಮಸ್ತ ಶಾಸ್ತ್ರಗಳ ನಿರ್ಣಯವನ್ನು ನೀಡುವ ಗ್ರಂಥ. ಸರ್ವಮೂಲಗ್ರಂಥಗಳ ಉಪದೇಶ ವಿಷ್ಣು ಸವೋತ್ತಮತ್ವವೇ. ಅದನ್ನು ಬಗೆಬಗೆಯಾಗಿ ನಿರೂಪಿಸಿದ ಸಮರ್ಥರು ಶ್ರೀಮಧ್ವಾಚಾರ್ಯರು. ಅವರು ಬೇರೆಯಲ್ಲ, ಅವರ ಗ್ರಂಥಗಳು ಬೇರೆಯಲ್ಲ. ಅವುಗಳು ನಮ್ಮ ಮನೆಯಲ್ಲಿ, ಮನದಲ್ಲಿ ಇದ್ದರೆ, ಸ್ವತಃ ಆಚಾರ್ಯರೇ ನಮ್ಮ ಮನೆ-ಮನಗಳಲ್ಲಿದ್ದಂತೆ. ಈ ಅನುಸಂಧಾನ ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಇಲ್ಲ. ಇರುವುದಿಲ್ಲ. ಆದರೆ ಇದಕ್ಕೆ ಹೊರತಾದವರು ಶ್ರೀ ವಿದ್ಯಾಮಾನ್ಯತೀರ್ಥರು.

    ವಿದ್ಯಾಮಾನ್ಯ ತೀರ್ಥರು 1913ರಂದು ಉಡುಪಿಯ ಎರ್ವಳು ಗ್ರಾಮದಲ್ಲಿ ಜನಿಸಿದರು. ತಂದೆ ಕುಪ್ಪಣ್ಣ ತಂತ್ರಿ, ತಾಯಿ ರಾಧಮ್ಮ. ವಿದ್ಯಾಮಾನ್ಯ ತೀರ್ಥರು ಏನನ್ನೇ ಆರಂಭಿಸಿದರೂ ಅದಕ್ಕೆ ಮುಂಚೆ ವಿಚಾರ ಮಾಡುತ್ತಿದ್ದರು. ಎಣಿಸಿದ ಕಾರ್ಯ ಸಫಲವೇ, ಸಾಧ್ಯವೇ ಎಂದು ವಿಮಶಿಸುತ್ತಿದ್ದರು. ಆ ವಿಮರ್ಶೆಯ ಕ್ರಮ ವಿಲಕ್ಷಣವಾಗಿತ್ತು. ವಿಮರ್ಶೆಯ ಫಲಕ್ಕಾಗಿ ಮಧ್ವಾಂತರ್ಗತ ಭಗವಂತನನ್ನು ಪ್ರಾರ್ಥಿಸುತ್ತಿದ್ದರು. ಪ್ರಾರ್ಥಿಸಿ ತಾತ್ಪರ್ಯ ನಿರ್ಣಯವನ್ನು ತೆರೆಯುತ್ತಿದ್ದರು. ತೆರೆದಾಕ್ಷಣ ಅವರ ಕಣ್ಣಿಗೆ ಮೊದಲು ತೋರುವ ಪುಟ, ಆ ಪುಟದಲ್ಲಿ ಮೊದಲ ಶ್ಲೋಕವು ಯಾವ ಸನ್ನಿವೇಶವನ್ನು ಸೂಚಿಸುತ್ತದೆಯೊ ಅದು ಅವರಿಗೆ ಆದೇಶ. ಶುಭ ಸನ್ನಿವೇಶವು ‘ಅಸ್ತು’ ಎನ್ನುವ ಸೂಚನೆಯಾದರೆ, ಅಶುಭ ಸನ್ನಿವೇಶವು ‘ನಿಷೇಧ’ದ ಸೂಚನೆಯಾಗಿತ್ತು. ಆ ಸೂಚನೆ ಹೇಗೆ ಬಂದರೂ ಅದಕ್ಕೆ ಬದ್ಧರಾಗಿರುತ್ತಿದ್ದರು.

    1958ರ ಸಮಯ. ಆಗ ಕೊಲ್ಕತ್ತಾದಲ್ಲಿ ವಿದ್ಯಾಮಾನ್ಯರ ಚಾತರ್ವಸ್ಯ. ಆಗ ಶ್ರೀಪಾದರ ಮನದಲ್ಲಿ ಒಂದು ಆಲೋಚನೆ ಮೂಡಿತು, ಶ್ರೀಗಳವರು ಸ್ಥಾಪಿಸಿದ ಶ್ರೀ ಮಧ್ವ ರಾದ್ಧಾಂತ ಸಂವರ್ಧಕ ಸಭೆಗಾಗಿ ಶಾಶ್ವತ ಮೂಲ ನಿಧಿ ಸಂಗ್ರಹದ ಕುರಿತಾಗಿ. ಆದರೆ ಸಂಗ್ರಹವು ಸಫಲವೇ ಎಂಬ ಶಂಕೆ ಬಂದಿತು. ಶ್ರೀಪಾದರು ಶ್ರೀಮಧ್ವಾಚಾರ್ಯರನ್ನೇ ಕೇಳಿದರು. ಕೇಳಿದ ಬಗೆ ಹೀಗೆ: ಕೈಯಲ್ಲಿ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥ ಹಿಡಿದು ಕಣ್ಣು ಮುಚ್ಚಿದರು. ಕಣ್ಣಿನೊಳಗಿಂದ ಆಚಾರ್ಯ ಮಧ್ವರನ್ನೂ ಶ್ರೀಹರಿಯನ್ನೂ ಚಿಂತಿಸಿದರು. ಈ ಕೋರಿಕೆಯನ್ನು ಅವರೀರ್ವರ ಎದುರಿಟ್ಟರು. ಕಣ್ತೆರೆದು ಪುಸ್ತಕವನ್ನು ತೆರೆದಿಟ್ಟರು. ಓದಿದರು, ಬಲು ಸಂತುಷ್ಟರಾದರು. ಕಾರಣ ಅವರಿಗೆ ಆಚಾರ್ಯರು ನಿಧಿಸಂಗ್ರಹ ಆರಂಭಕ್ಕೆ ಒಪ್ಪಿಗೆಯನ್ನಿತ್ತಿದ್ದರು. ಹೇಗಿದು ತಿಳಿಯಿತು? ತಾತ್ಪರ್ಯ ನಿರ್ಣಯದ 20ನೇ ಅಧ್ಯಾಯದ 110ನೇ ಶ್ಲೋಕವು ಶ್ರೀಪಾದರ ಕಣ್ಣಿಗೆ ಮೊದಲು ಗೋಚರವಾಯಿತು. ಈ ಶ್ಲೋಕವು ನರಕಾಸುರನನ್ನು ಸಂಹರಿಸಿದ ಶ್ರೀಕೃಷ್ಣನು, ನರಕಾಸುರನಿಂದ ಅಪಹರಿಸಲ್ಪಟ್ಟ 16,100 ರಾಜ ಕನ್ನಿಕೆಯರನ್ನು ಕರುಣಾರಸಪೂರಿತ ಕಣ್ಣುಗಳಿಂದ ಕಂಡನು ಎಂಬ ವೃತ್ತಾಂತವನ್ನು ಅರುಹಿತು. ಆಚಾರ್ಯರ ಸೂಚನೆಯನ್ನು ಅನುಸರಿಸಿದ ಶ್ರೀಪಾದರು ಮರುದಿನದ ಉಪನ್ಯಾಸದಲ್ಲಿ ನಿಧಿ ಸಂಗ್ರಹ ಕಾರ್ಯವನ್ನು ಭಕ್ತರ ಮುಂದೆ ತಿಳಿಸಿದರು. ಅಂದಿನಿಂದ ನಿಧಿ ಸಂಗ್ರಹ ಆರಂಭವಾಗಿ ಚಾತುರ್ವಸ್ಯ ಮುಗಿಯುವ ಹೊತ್ತಿಗೆ ಸರಿಯಾಗಿ 16,100 ರೂಪಾಯಿ ಸಂಗ್ರಹವಾಯಿತು. ಶ್ರೀಕೃಷ್ಣನ ಕರುಣಾದೃಷ್ಟಿಗೆ ವಿಷಯರಾದ 16,100 ಕನ್ನಿಕೆಯರ ವೃತ್ತಾಂತವನ್ನು ತೋರಿಸುವ ಮೂಲಕ, ಆಚಾರ್ಯರ ಪ್ರತೀಕವಾದ ಈ ಗ್ರಂಥವು ಸರಿಯಾಗಿ 16,100 ರೂಪಾಯಿಗಳನ್ನು ಶ್ರೀಗಳವರ ನಿಧಿಸಂಗ್ರಹಕ್ಕೆ ಜಮೆಯಾಗುವಂತೆ ಮಾಡಿತು.

    ಮೇಲಿನದು ಒಂದು ಉದಾಹರಣೆ ಮಾತ್ರ. ಉತ್ತರಾದಿ ಮಠದ ಶ್ರೀ ಸತ್ಯಧ್ಯಾನ ತೀರ್ಥರಲ್ಲಿ ಅಧ್ಯಯನ ಪೂರೈಸಿ ತಮ್ಮ ಕ್ಷೇತ್ರಕ್ಕೆ ಹೊರಟು ನಿಂತ ವಿದ್ಯಾಮಾನ್ಯರನ್ನು ಬೀಳ್ಕೊಡುವಾಗ ಸತ್ಯಧ್ಯಾನ ತೀರ್ಥರಿಗೆ ಹೃದಯ ತುಂಬಿ ಬಂತು. ಕೆಲ ಕ್ಷಣಗಳ ನಂತರ ಸತ್ಯಧ್ಯಾನ ತೀರ್ಥರು ‘ನೀವೂ ಒಂದು ಸಭೆಯನ್ನು ಸ್ಥಾಪಿಸಿ ತನ್ಮೂಲಕ ಸಿದ್ಧಾಂತದ ಪ್ರಚಾರವನ್ನು ಮಾಡಿರಿ’ ಎಂದು ನುಡಿದರು.

    ಭಂಡಾರಕೇರಿ ಮತ್ತು ಪಲಿಮಾರು ಉಭಯ ಮಠಗಳ ಪೀಠಾಧಿಪತಿಗಳಾಗಿ ಸಾತ್ವಿಕ ಜೀವನ ನಡೆಸಿದ ಹಿರಿಯ ಚೇತನ ಶ್ರೀವಿದ್ಯಾಮಾನ್ಯತೀರ್ಥರು.ಈ ಶತಮಾನ ಕಂಡ ಇನ್ನೋರ್ವ ಮಹಾ ಸಾಧಕ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಇವರ ವಿದ್ಯಾಶಿಷ್ಯರು. ಶ್ರೀ ವಿದ್ಯಾಧೀಶ ತೀರ್ಥರನ್ನು ಪಲಿಮಾರು ಮಠಕ್ಕೆ, ಶ್ರೀ ವಿದ್ಯೇಶ ತೀರ್ಥರನ್ನು ಭಂಡಾರಕೇರಿ ಮಠಕ್ಕೆ ನೇಮಿಸುವದರ ಮೂಲಕ ಎರಡೂ ಪೀಠಕ್ಕೆ ಯೋಗ್ಯ ಉತ್ತರಾಧಿಕಾರಿಗಳನ್ನು ನೀಡಿದ ಮಹಾನುಭಾವ ವಿದ್ಯಾಮಾನ್ಯತೀರ್ಥರಾಗಿದ್ದಾರೆ. ಮಾಧ್ವ ಸಿದ್ದಾಂತಕ್ಕೆ ಬಹಳ ಕೊಡುಗೆ ನೀಡಿದ ವಿದ್ಯಾಮಾನ್ಯ ತೀರ್ಥರು 2000ರ ಮೇ 14ರ ವೈಶಾಖ ಶುದ್ಧ ಏಕಾದಶಿಯಂದು ಪಲಿಮಾರಿನಲ್ಲಿ ಹರಿಪಾದವನ್ನು ಸೇರಿದರು.

     

    ಚುನಾವಣಾ ಆಯೋಗದಿಂದ ದೇಶಾದ್ಯಂತ ಈವರೆಗೆ 9,000 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts