

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಆ ನಂತರ ಈವರೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಗದು, ಮಾದಕದ್ರವ್ಯ, ಬೆಲೆಹಾಳುವ ಲೋಹ ಮತ್ತು ಉಡುಗೊರೆಗಳು ಸೇರಿದಂತೆ ಇದುವರೆಗೂ ಒಟ್ಟು 9000 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.
75 ವರ್ಷಗಳ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ನಗದು ಜಪ್ತಿಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ದೇಶಾದ್ಯಂತ ಮತದಾನ ಆರಂಭಕ್ಕೂ ಮುನ್ನವೇ 4,650 ಕೋಟಿ ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಶಪಡಿಸಿಕೊಂಡ ವಸ್ಯಗಳ ಮೊತ್ತದಲ್ಲಿ ಮಾದಕ ದ್ರವ್ಯದ ಪಾಲು ಶೇ.45 ರಷ್ಟು ( 3959 ) ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಗುಜರಾತ್ ಎಟಿಎಸ್ ಮತ್ತು ಕರಾವಳಿ ಕಾವಲು ಪಡೆ ಇತ್ತಿಚೆಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂರು ದಿನಗಳ ಅವಧಿಯಲ್ಲಿ 892 ಕೋಟಿ ಮೊತ್ತದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಹೇಳಿಕೆಯಲ್ಲಿ ಮಾಹಿತಿ ನೀಡಿದ ಆಯೋಗವು, ದೇಶಾದ್ಯಂತ ಮಾದರಿ ನೀತಿ ಸಂಹಿತಿ ಉಲ್ಲಂಘಟನೆ ಸಂಬಂಧ ಒಟ್ಟು 4.24 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 4,23,908 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, 409 ದೂರುಗಳು ಪ್ರಗತಿಯಲ್ಲಿವೆ. ಸ್ವೀಕರಿಸಲಾದ ಒಟ್ಟು ದೂರಿನಲ್ಲಿ ಶೇ.89 ದೂರುಗಳಿಗೆ 100 ನಿಮಿಷಗಳ ಕಾಲಮಿತಿಯಲ್ಲೇ ಪರಿಹಾರ ಒದಗಿಸಲಾಗಿದೆ ಎಂದು ಆಯೋಗ ವಿವರಿಸಿದೆ.
ಇಸಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಗುಜರಾತ್‌ನಲ್ಲಿ ಅತಿ ಹೆಚ್ಚು ಡ್ರಗ್ಸ್ (1,187.80 ಕೋಟಿ ರೂ), ಪಂಜಾಬ್ (665.67 ಕೋಟಿ ರೂ.), ದೆಹಲಿ (358.42 ಕೋಟಿ ರೂ.) ಮತ್ತು ತಮಿಳುನಾಡು (330.91 ಕೋಟಿ ರೂ.) ನಂತರದ ಸ್ಥಾನದಲ್ಲಿವೆ.
2019ಕ್ಕಿಂತ ದುಪ್ಪಟ್ಟು ಹಣ ವಶ: ಪ್ರಸ್ತುತ ಜಪ್ತಿ ಮಾಡಿರುವ ಅಕ್ರಮ ಹಣ 2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದಕ್ಕಿಂತ ಹೆಚ್ಚು. ಏಳು ಹಂತಗಳಲ್ಲಿ ಮತದಾನದ ನಡಯುವುದರಿಂದ ಈ ಜಪ್ತಿಗಳ ಮಟ್ಟವು ನಿರೀಕ್ಷೆಗಳನ್ನು ಮೀರಿದೆ ಎಂದು ಇಸಿ ಹೇಳಿದೆ. ಲೋಕಸಭೆ ಚುನಾವಣೆಯ 75 ವರ್ಷಗಳ ಇತಿಹಾಸದಲ್ಲಿ ಚುನಾವಣಾ ಆಯೋಗ ಹಿಂದೆಂದೂ ಇಷ್ಟು ದೊಡ್ಡ ಮೊತ್ತವನ್ನ ವಶಪಡಿಸಿಕೊಂಡಿರಲಿಲ್ಲ. ಇದು ಚುನಾವಣೆಯಲ್ಲಿ ಹಣದ ಹೊಳೆ ಯಾವ ಮಟ್ಟದಲ್ಲಿ ಹರಿಯುತ್ತಿದೆ ಎಂಬುದಕ್ಕೆ ಸಾಕ್ಷಿ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯಪಟ್ಟಿದ್ದಾರೆ.