More

    ಬಂಟ್ವಾಳದಲ್ಲಿ ಶಾಂತಿಯುತ ಮತದಾನ

    ವಿಜಯವಾಣಿ ಸುದ್ದಿಜಾಲ ಬಂಟ್ವಾಳ

    ಲೋಕಸಮರಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಜನ ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಸರತಿಯಲ್ಲಿ ನಿಂತು ಹಕ್ಕು ಚಲಾಯಿಸಿ ಶಾಂತಿಯುತ ಮತದಾನಕ್ಕೆ ಸಹಕರಿಸಿದರು.

    ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ, ಮಾಜಿ ಸಚಿವ ಬಿ.ರಮಾನಾಥ ರೈ ಕಳ್ಳಿಗೆ ಗ್ರಾಮದ ತೊಡಂಬಿಲ ಸೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ಎ.ರುಕ್ಮಯ ಪೂಜಾರಿ ತಮ್ಮ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು.

    ಬಿಸಿಲಿನ ತೀವ್ರತೆ ಹೆಚ್ಚಾಗಿದ್ದರಿಂದ ಮತಗಟ್ಟೆಗಳಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಕೆಲವೊಂದು ಮತಗಟ್ಟೆಗಳಲ್ಲಿ ಮೊಬೈಲ್ ಇಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ವೃದ್ಧರು ಹಾಗೂ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಬಂದ ಮತದಾರರಿಗೆ ನೇರವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಕೆಲವೆಡೆ ಹಿರಿಯರನ್ನು ಕರೆತಂದ ಯುವಕರೂ ಜತೆಗೆ ಹೋಗಿ ಮತ ಚಲಾಯಿಸಿದ್ದರಿಂದ ಸರತಿಯಲ್ಲಿ ನಿಂತ ಇತರ ಮತದಾರರ ಜತೆ ಮಾತಿನ ಚಕಮಕಿಗೆ ಕಾರಣವಾಯಿತು.

    ಹಕ್ಕು ವಂಚಿತ ವಲಸೆ ಕಾರ್ಮಿಕರು

    ಪಾಣೆಮಂಗಳೂರಿನ ಅಕ್ಕರಂಗಡಿ ಬಳಿ ದೂರದ ಊರುಗಳಿಂದ ಕೂಲಿ ಕೆಲಸಕ್ಕೆ ಬರುವ ವಲಸೆ ಕಾರ್ಮಿಕರು ಎಂದಿನಂತೆ ತಮ್ಮ ಕರ್ತವ್ಯಕ್ಕೆ ತೆರಳಲು ಸನ್ನದ್ಧರಾಗಿದ್ದರು. ಮತ ಚಲಾಯಿಸಲು ಊರಿಗೆ ತೆರಳದೆ ನೂರಾರು ಕಾರ್ಮಿಕರು ಪಾಣೆಮಂಗಳೂರು ಹಳೇ ಸೇತುವೆ ಬಳಿ ಕೆಲಸಕ್ಕೆ ತೆರಳಲು ಕಾಯುತ್ತಿದ್ದರು.

    ನವವಧು ಮತದಾನ

    ಮಜಿ ವೀರಕಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 203ರಲ್ಲಿ ನವವಧು ವಿನುತಾ ಮತದಾನ ಮಾಡಿ ಗಮನ ಸೆಳೆದರು. ವೀರಕಂಬ ಗ್ರಾಮದ ಗಣೇಶ ನಿಲಯದ ಕಮಲಾಕ್ಷ ಪೂಜಾರಿಯವರ ಪುತ್ರಿಯಾದ ಈಕೆ ಹಸೆಮಣೆ ಏರುವ ಮೊದಲು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿ ಬಳಿಕ ಮದುವೆ ಸಭಾಂಗಣದತ್ತ ಹೆಜ್ಜೆ ಹಾಕಿದರು.

    ಗಮನ ಸೆಳೆದ ವಿಶೇಷ ಮತಕೇಂದ್ರಗಳು

    ಸಾಂಪ್ರದಾಯಿಕ ಮತಗಟ್ಟೆ(ಯಕ್ಷಗಾನ) ಮಂಚಿ ಕುಕ್ಕಾಜೆ ಗ್ರಾಪಂ ಕಚೇರಿ, ಅಂಗವಿಕಲರ ನಿರ್ವಹಣೆಯ ಮತಗಟ್ಟೆ ಬೋಳಂತೂರು ಸರ್ಕಾರಿ ಶಾಲೆ, ಸಖಿ ಮತಗಟ್ಟೆಗಳಾದ ಕಡಂಬು ಸರ್ಕಾರಿ ಶಾಲೆ, ಬಡಗಕಜೆಕಾರು ಮಾಡಪಲ್ಕೆ ಸರ್ಕಾರಿ ಶಾಲೆ, ನರಿಕೊಂಬು ಬೋಳಂತೂರು ಸರ್ಕಾರಿ ಶಾಲೆ, ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲಾ ವಿಭಾಗ, ಸಿದ್ದಕಟ್ಟೆ ಸೇಂಟ್ ಪ್ಯಾಟ್ರಿಕ್ ಅನುದಾನಿತ ಹಿ.ಪ್ರಾ.ಶಾಲೆ, ಯುವಜನ ನಿರ್ವಹಣೆಯ ಮತಗಟ್ಟೆ ಲೊರೆಟ್ಟೊ ಅನುದಾನಿತ ಶಾಲೆ, ಧ್ಯೇಯ ಆಧಾರಿತ ಮತಗಟ್ಟೆ ಮೂರ್ಜೆ ಸರ್ಕಾರಿ ಶಾಲೆಯ ಮತಗಟ್ಟೆಗಳು ಬಣ್ಣದ ಚಿತ್ತಾರಗಳಿಂದ ಮತದಾರರನ್ನು ಆಕರ್ಷಿಸುತ್ತಿತ್ತು. ಕೆಲವು ಮತಗಟ್ಟೆಗಳ ಪ್ರವೇಶ ದ್ವಾರವನ್ನು ಬಾಳೆ ಗಿಡಗಳಿಂದ ಅಲಂಕರಿಸಲಾಗಿತ್ತು. ಕೆಲವೆಡೆ ಬೆಲ್ಲ, ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts