More

    ಕಡಲಮಕ್ಕಳ ಮೊಗದಲ್ಲಿ ಮಂದಹಾಸ: ಸಾಂಪ್ರದಾಯಿಕ ಮೀನುಗಾರಿಕೆ ಆರಂಭ

    ಮಂಗಳೂರು: ಪ್ರತಿಕೂಲ ಹವಾಮಾನದಿಂದ ಸುಮಾರು ಒಂದು ತಿಂಗಳು ತಡವಾಗಿ ನಾಡದೋಣಿ ಮೀನುಗಾರಿಕೆ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ಶನಿವಾರ ಹೆಚ್ಚಿನ ದೋಣಿಗಳು ಕಡಲಿಗಿಳಿದಿವೆ.

    ಜುಲೈ 31ರವರೆಗೆ ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿದೆ. ಸಾಮಾನ್ಯವಾಗಿ ಮೇ ತಿಂಗಳ ನಂತರ ತೂಾನ್ ಬಂದು ಸ್ವಲ್ಪ ದಿನಗಳು ಬಿಟ್ಟು ಜುಲೈ 15ರ ವೇಳೆಗೆ ನಾಡದೋಣಿ ಮೀನುಗಾರರು ಕಡಲಿಗೆ ಇಳಿಯುತ್ತಾರೆ. ಆದರೆ ಈ ವರ್ಷ ತಡವಾಗಿ ಮಳೆ, ಪ್ರತಿಕೂಲ ಹವಾಮಾನ ಕಾರಣದಿಂದ ತಡವಾಗಿದ್ದು, ಸಾಂಪ್ರದಾಯಿಕ ಮೀನುಗಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ವಾರ್ಷಿಕ ಮೀನುಗಾರಿಕೆ ರಜೆಯ ಸಂದರ್ಭ ನಾಡದೋಣಿಯ ಮೀನುಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ದರ ದೊರೆಯುತ್ತದೆ. ಹವಾಮಾನ ಅನುಕೂಲಕರವಾಗಿದ್ದರೆ ಇನ್ನು ಸುಮಾರು ಒಂದು ತಿಂಗಳ ಕಾಲ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ವ್ಯಾಪಾರ ಚುರುಕುಗೊಳ್ಳುತ್ತದೆ.

    ಮೀನುಗಾರಿಕೆ ಇಲಾಖೆಯಿಂದ ಅನುಮತಿ ಪಡೆದ 155 ನಾಡದೋಣಿಗಳು ಮೂರು ದಿನಗಳಿಂದ ನವಮಂಗಳೂರು ಬಂದರು ಮೂಲಕ ಕಡಲಿನಲ್ಲಿ ಮೀನುಗಾರಿಕೆ ನಡೆಸುತ್ತಿವೆ. ಈ ದೋಣಿಗಳಲ್ಲಿ ಒಟ್ಟು ಸುಮಾರು 1500 ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿ ಜಂಟಿ ನಿರ್ದೇಶಕ ಹರೀಶ್ ಕುಮಾರ್ ತಿಳಿಸಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಮಂಗಳೂರು ಅಳಿವೆ ಬಾಗಿಲಿನಲ್ಲಿ ಕಡಲ ಅಲೆಗಳ ಅಬ್ಬರ ಜೋರಾಗಿ ಇರುವ ಸಂದರ್ಭ ನಾಡದೋಣಿಗಳಿಗೆ ಎನ್‌ಎಂಪಿಎ ಮೂಲಕ ಕಡಲು ಪ್ರವೇಶಿಸಲು ಅವಕಾಶ ಒದಗಿಸಲಾಗುತ್ತಿದೆ.

    ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್ ಸಮೀಪದ ಮಡಿ ಮತ್ತು ಗುಜ್ಜಾಡಿ ಗ್ರಾಮದ ಬೆಣ್ಗೆರೆ ಎಂಬಲ್ಲಿ ನಾಡದೋಣಿ ಮೀನುಗಾರಿಕೆ ಉತ್ತಮವಾಗಿ ನಡೆಯುತ್ತಿದೆ. ಮಳೆಗಾಲದ ಮೀನುಗಾರಿಕೆಗೆ ಲೈಟ್‌ಹೌಸ್ ಬಳಿಯ ಮಡಿ ತುಂಬ ಫೇಮಸ್. ಇಲ್ಲಿ ನೂರಾರು ಸಂಖ್ಯೆಯಲ್ಲಿ ದೋಣಿಗಳು ಲಂಗರು ಹಾಕುತ್ತವೆ. ಇಲ್ಲಿ ಹರಾಜಿನ ಪ್ರಕ್ರಿಯೆ ಮೂಲಕ ವ್ಯಾಪಾರಸ್ಥರು ಮೀನು ಖರೀದಿಸಿ ರಾಜ್ಯದ ಇತರ ಜಿಲ್ಲೆ ಹಾಗೂ ಹೊರರಾಜ್ಯಕ್ಕೂ ಸಾಗಿಸುತ್ತಾರೆ.

    ‘ಪ್ರತಿವರ್ಷ ಹವಾಮಾನ ವೈಪರೀತ್ಯದಿಂದ ನಾಡದೋಣಿ ಮೀನುಗಾರಿಕೆ ತಡವಾಗಿ ಆರಂಭವಾಗುತ್ತಿದ್ದು, ನಾಡದೋಣಿ ಮೀನುಗಾರಿಕೆಗೆ ಕೆಲವೇ ಕೆಲವು ದಿನ ಮಾತ್ರ ಸಿಗುತ್ತಿವೆ. ಈ ಬಾರಿ ಸ್ವಲ್ಪ ಬೇಗ ಪ್ರಾರಂಭವಾಗಿದೆ. ಆದರೆ ನಿರೀಕ್ಷಿಸಿದಷ್ಟು ಮತ್ಸೃ ಸಂಪತ್ತು ದೊರಕುತ್ತಿಲ್ಲ. ನಾಡದೋಣಿ ಮೀನುಗಾರಿಕೆ ನಡೆಯುವ ಗಂಗೊಳ್ಳಿಯ ಮಡಿ ಮತ್ತು ಗುಜ್ಜಾಡಿಯ ಬೆಣ್ಗೆರೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ’ ಎಂದು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು ತಿಳಿಸಿದ್ದಾರೆ.

    ಫ್ರೆಶ್ ಮೀನಿಗೆ ಭಾರಿ ಬೇಡಿಕೆ

    ಪ್ರಸಕ್ತ ಹೊರರಾಜ್ಯಗಳಿಂದ ಮೀನುಗಳು ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ತಾಜಾ ಮೀನಿನ ಕೊರತೆ ಇದೆ. ಹಾಗಾಗಿ ನಾಡದೋಣಿಗಳ ಮೂಲಕ ಹಿಡಿಯುವ ಮೀನುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ವೈಟ್ ಚಟ್ಲಿ, ಕೆಂಪು ಚಟ್ಲಿ, ಜಾರಿ, ಬಂಗುಡೆ, ಪಾಂಪ್ಲೆಟ್, ಬೂತಾಯಿ ಮೀನಿನ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಾರೆ. ಈ ಬಾರಿ ಬೂತಾಯಿ ಮತ್ತು ಬಂಗುಡೆ ಮೀನುಗಳ ಒಳ್ಳೆಯ ಇಳುವರಿ ಇದೆ. ಶನಿವಾರ ಮಂಗಳೂರು ಮಾರುಕಟ್ಟೆಯಲ್ಲಿ ಒಂದು ಬೂತಾಯಿಗೆ 18 ರೂ., ಒಂದು ಬಂಗುಡೆಗೆ 20 ರೂ. ಇತ್ತು. ಗಂಗೊಳ್ಳಿಯಲ್ಲಿ ಸಣ್ಣ ಚಟ್ಲಿ(ತೆಮ್ಲಿ) ಕೆ.ಜಿ.ಗೆ 160 ರೂ.ಗಳಿದ್ದರೆ, ಬಂಗುಡೆ ಬುಟ್ಟಿಗೆ ಸುಮಾರು 1,800 ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

    ಕನಸಾದ ಲೈಫ್ ಜಾಕೆಟ್

    ಮಳೆಗಾಲದಲ್ಲಿ ಕಡಲು ಬಹಳಷ್ಟು ಪ್ರಕ್ಷುಬ್ಧಗೊಂಡಿರುತ್ತದೆ, ಅಲೆಗಳ ತೀವ್ರತೆ ಅಧಿಕವಾಗಿರುತ್ತದೆ. ಜೀವ ಭಯದಲ್ಲಿಯೇ ಹೊಟ್ಟೆಪಾಡಿಗಾಗಿ ಮೀನುಗಾರರು ಕಡಲಿಗೆ ಇಳಿಯುತ್ತಾರೆ. ಮೀನುಗಾರರ ರಕ್ಷಣೆಗಾಗಿ ಮೀನುಗಾರರಿಗೆ ಲೈಫ್ ಜಾಕೆಟ್ ನೀಡಬೇಕೆನ್ನುವುದು ಬಹು ವರ್ಷಗಳ ಬೇಡಿಕೆ. ಈ ಬೇಡಿಕೆಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ.

    ಒಂದು ತಿಂಗಳು ತಡವಾಗಿ ನಾಡದೋಣಿ ಮೀನುಗಾರಿಕೆ ಆರಂಭವಾಗಿರುವುದರಿಂದ ನಮಗೆ ನಷ್ಟವಾಗಿದೆ. ಜುಲೈ 1ರಿಂದ 9ರ ತನಕ ಕರಾವಳಿಯಲ್ಲಿ ರೆಡ್ ಅಲರ್ಟ್ ಇತ್ತು. 10ರ ಬಳಿಕ ಮೀನುಗಾರಿಕೆ ಆರಂಭವಾಗಿದೆ. ಸಾಮಾನ್ಯವಾಗಿ ನಾಡದೋಣಿ ಮೀನುಗಾರರಿಗೆ ಸ್ವಲ್ಪ ಒಳ್ಳೆಯ ಆದಾಯ ತಂದುಕೊಡುವ ಸಿಗಡಿ ಈ ಬಾರಿ ಇಲ್ಲ. ಕಳೆದ 2- 3 ದಿನಗಳಲ್ಲಿ ಬೂತಾಯಿ, ಬಂಗುಡೆ ಸ್ವಲ್ಪ ಒಳ್ಳೆಯ ಸಲು ಇದೆ.
    – ವಾಸುದೇವ ಬಿ.ಕರ್ಕೇರ, ಅಧ್ಯಕ್ಷರು, ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ, ನವಮಂಗಳೂರು ವಲಯ
    …………
    ಸಮುದ್ರ ವಾತಾವರಣ ನಾಡದೋಣಿ ಮೀನುಗಾರಿಕೆಗೆ ಪೂರಕವಾಗಿದೆ. ಹೀಗಾಗಿ ಕಳೆದ ಐದಾರು ದಿನಗಳಿಂದ 800ಕ್ಕೂ ಅಧಿಕ ದೋಣಿಗಳಲ್ಲಿ ಮೀನುಗಾರಿಕೆ ನಡೆಯುತ್ತಿದ್ದು, ಬೂತಾಯಿ, ಬಂಗುಡೆ ಹಾಗೂ ಎಟ್ಟಿ ಮೀನುಗಳು ಲಭಿಸುತ್ತಿವೆ.
    – ಕೃಷ್ಣ ಸುವರ್ಣ, ಮಾಜಿ ಅಧ್ಯಕ್ಷರು, ಮಲ್ಪೆ ಮೀನುಗಾರಿಕಾ ಸಂಘ
    …………
    ಒಂದು ತಿಂಗಳು ತಡವಾಗಿ ನಾಡದೋಣಿ ಮೀನುಗಾರಿಕೆ ಪ್ರಾರಂಭವಾಗಿದ್ದು, ಮೀನುಗಾರರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹವಾಮಾನ ವೈಪರೀತ್ಯದಿಂದ ಕಡಲಿಗಿಳಿಯಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ನಾಡದೋಣಿ ಮೀನುಗಾರಿಕೆ ಆಶಾದಾಯಕವಾಗಿರಲಿದೆ ಎಂಬ ವಿಶ್ವಾಸ ಇದೆ.
    – ಯಶವಂತ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts