More

    ಏಪ್ರಿಲ್​ ‘ಪೂಲ್​’ ಆದ ಇಂದ್ರಾಳಿ ಬ್ರಿಡ್ಜ್​

    ಪ್ರಶಾಂತ ಭಾಗ್ವತ, ಉಡುಪಿ
    ಉಡುಪಿ-ಮಣಿಪಾಲ ಹೆದ್ದಾರಿಯ ಮಧ್ಯಭಾಗದಲ್ಲಿರುವ ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭಕ್ಕೆ ಏಕೋ ಏನೋ ಮುಹೂರ್ತವೇ ಕೂಡಿ ಬರುತ್ತಿಲ್ಲ. ಈ ಹೆದ್ದಾರಿ ನಿರ್ಮಾಣವಾಗಿ 7 ವರ್ಷವೇ ಕಳೆದಿದ್ದು, 15 ಫೀಟ್​ ಉದ್ದದ ಸೇತುವೆ ನಿರ್ಮಾಣಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

    2023ರ ಡಿಸೆಂಬರ್​ ಅಂತ್ಯಕ್ಕೆ 15 ಫೀಟ್​ ಉದ್ದದ ಅಗತ್ಯ ಬ್ರಿಡ್ಜ್​ ಗರ್ಡರ್​ಗಳು ಬರಬೇಕಿತ್ತು. 2024ರ ಜ.24ರ ಸಂಜೆ ಹುಬ್ಬಳ್ಳಿಯಿಂದ ಉಡುಪಿಗೆ 6 ಗರ್ಡರ್​ ಆಗಮಿಸುವ ಮೂಲಕ ಇನ್ನೇನು ಕಾಮಗಾರಿ ಆರಂಭವಾಗಲಿದೆ ಎಂದು ಭಾವಿಸಲಾಗಿತ್ತು. ನಂತರದ ದಿನಗಳಲ್ಲೂ ಮತ್ತಷ್ಟು ಗರ್ಡರ್​ ಬಂದಿದ್ದು, 2 ತಿಂಗಳಾದರೂ ಕಾಮಗಾರಿ ಆರಂಭದ ಚಕಾರವಿಲ್ಲ.

    ರೈಲ್ವೆಯಿಂದ ಎನ್​ಒಸಿ

    ಇಂದ್ರಾಳಿಯಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಲು ಕೊಂಕಣ ರೈಲ್ವೆ ಇಲಾಖೆಯು ಜಿಲ್ಲಾಡಳಿತಕ್ಕೆ ಎನ್​ಒಸಿಯನ್ನೂ ನೀಡಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ೆಬ್ರವರಿ ಅಂತ್ಯಕ್ಕೆ ಕಾಮಗಾರಿ ಆರಂಭಿಸಲಿದ್ದು, ಮಾರ್ಚ್​ ಅಂತ್ಯಕ್ಕೆ ಮೇಲ್ಸೇತುವೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿತ್ತು. ಕಳೆದ ಮಾರ್ಚ್​ ತಿಂಗಳ ಆರಂಭದಲ್ಲಿಯೇ “ಮುಂದಿನ ವಾರ ಕಾಮಗಾರಿ ಆರಂಭ’ ಎಂದು ಹೆದ್ದಾರಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಅದು ಯಾವ ಮುಂದಿನ ವಾರ ಎನ್ನುವುದೇ ಈಗ ಯಕ್ಷಪ್ರಶ್ನೆಯಾಗಿದೆ.

    ಪ್ರತಿದಿನವೂ ಸಣ್ಣ-ಪುಟ್ಟ ಅಪಘಾತ

    ಉಡುಪಿಯಿಂದ ಮಣಿಪಾಲಕ್ಕೆ ಸಾಗುವ ದ್ವಿಪಥ ರಸ್ತೆ ಮಾರ್ಗದಲ್ಲಿ ಎಂಜಿಎಂ ಕಾಲೇಜಿನ ಮುಂಭಾಗದಿಂದ ಎಲ್ಲ ವಾಹನಗಳು ಬಲಭಾಗಕ್ಕೆ ತಿರುಗಿ, ಮಣಿಪಾಲದಿಂದ ಉಡುಪಿ ಕಡೆಗೆ ಸಾಗುವ ರಸ್ತೆಯಲ್ಲೇ ಸಂಚರಿಸುತ್ತಲಿವೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಭಯದಲ್ಲೇ ವಾಹನ ಚಲಾಯಿಸಬೇಕಿದೆ. ಪ್ರತಿದಿನವೂ ಸಣ್ಣ&ಪುಟ್ಟ ಅಪಘಾತ ಮಾಮೂಲು ಎನ್ನುವಂತಾಗಿದೆ. ಇದೀಗ ಶಾಲೆಗಳಿಗೆ ಬೇಸಿಗೆ ರಜಾ ಆರಂಭವಾಗಿರುವುದರಿಂದ ಪಕ್ಕದಲ್ಲೇ ಇರುವ ಇಂದ್ರಾಳಿ ಶಾಲೆಯ ಮಕ್ಕಳಿಗೆ ತೊಂದರೆ ಇಲ್ಲದಾಗಿದೆ. ಪಕ್ಕದಲ್ಲೇ ರೈಲ್ವೆ ನಿಲ್ದಾಣಕ್ಕೆ ತೆರಳುವ ಅಡ್ಡ ರಸ್ತೆ ಹಾಗೂ ಇಲ್ಲಿಯೇ ಬಸ್​ ನಿಲ್ದಾಣ ಇರುವುದರಿಂದ ಎರಡೂ ಕಡೆಯಿಂದ ಬರುವ ಖಾಸಗಿ ಬಸ್​ನವರು ಜನರನ್ನು ಇಳಿಸಲು-ಹತ್ತಿಸಲು ಇಲ್ಲಿಯೇ ಬಸ್​ ನಿಲ್ಲಿಸುತ್ತಿದ್ದು, ಸಂಚಾರ ದುಸ್ತರವಾಗಿದೆ.

    20 ದಿವಸ 20 ದಿವಸ ಎಂದು ಹೇಳುತ್ತಲೇ ವರ್ಷ ಕಳೆದಿದೆ. ಅಧಿಕಾರಿಗಳು ಇನ್ನೂ ಎಷ್ಟು ಸುಳ್ಳು ಹೇಳುತ್ತ ಕಾಲ ಕಳೆಯುತ್ತೀರಿ? ಜನರ ತಾಳ್ಮೆ ಪರೀಸಬೇಡಿ. ಚುನಾವಣೆ ಸಂದರ್ಭದಲ್ಲಿ ಪ್ರತಿಭಟಿಸಿದರೆ ಸಮಾಜಕ್ಕೆ ಬೇರೆ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನೆ ಇದ್ದೇವೆ. ಇಂದ್ರಾಳಿ ರಸ್ತೆಯ ಅವ್ಯವಸ್ಥೆಯನ್ನು ಕೆಲಕಾಲ ನಿಂತು ಪರಿಶೀಲಿಸಿ. ಆಗಲೇ ನಿಮಗೆ ಪ್ರಯಾಣಿಕರ, ಜನರ ಕಷ್ಟ ಏನೆಂದು ಅರ್ಥವಾಗುತ್ತದೆ.

    ನಿತ್ಯಾನಂದ ಒಳಕಾಡು
    ಸಂಚಾಲಕ. ಉಡುಪಿ ಜಿಲ್ಲಾ ನಾಗರಿಕ ಸೇವಾ ಸಮಿತಿ

    ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಹುಬ್ಬಳ್ಳಿಯಿಂದ ಸ್ಟೀಲ್​ ಗರ್ಡರ್​ ಇನ್ನೂ ಆಗಮಿಸುತ್ತಲಿದೆ. ಎನ್​ಎಚ್​ ಅಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳಲ್ಲಿ ಸಮನ್ವಯತೆಯ ಕೊರತೆ ಕಾಣುತ್ತಿದೆ. ಅವರೇ ಕೊಟ್ಟ ಮಾಹಿತಿಯಂತೆ ಮಾರ್ಚ್​ ಅಂತ್ಯಕ್ಕೆ ಸೇತುವೆ ಕಾಮಗಾರಿ ಮುಗಿಯಬೇಕಿತ್ತು. ಸೇತುವೆ ನಿರ್ಮಾಣಕ್ಕೆ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದು. ಹೀಗಾಗಿ ಕಾಮಗಾರಿ ಆರಂಭಕ್ಕೆ ಇನ್ನೂ ವಿಳಂಬ ಮಾಡಿದರೆ ಜಿಲ್ಲಾಧಿಕಾರಿಯಾಗಿ ನಾನೂ ಸಹಿಸಲಾರೆ.

    ಡಾ.ಕೆ. ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts