More

    ಹಳತಿಗಿಂತ ಹೊಸದು ಕಿರಿದು: ಕೋಟಿಗದ್ದೆ ಸೇತುವೆ ಅವಾಂತರ ಕಾಮಗಾರಿ ಕಳಪೆ ಆರೋಪ ಪ್ರತಿಭಟನೆಯ ಎಚ್ಚರಿಕೆ

    ಶಶಿ, ಈಶ್ವರಮಂಗಲ

    ಈಶ್ವರಮಂಗಲದಿಂದ ಪಂಚೋಡಿ, ಕರ್ನೂರು ಮೂಲಕವಾಗಿ ಗಾಳಿಮುಖಕ್ಕೆ ಸಂಪರ್ಕ ಕಲ್ಪಿಸುವ ಗಡಿ ಪ್ರದೇಶ ವ್ಯಾಪ್ತಿಯಲ್ಲಿರುವ ಅಂತರ್ ರಾಜ್ಯ ಸಂಪರ್ಕ ರಸ್ತೆಯ ಕರ್ನೂರು ಸಮೀಪದ ಕೋಟಿಗದ್ದೆ ಎಂಬಲ್ಲಿರುವ ಕಿರು ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಆದರೆ ಕಾಮಗಾರಿ ಕಳಪೆಯಾಗಿ ನಿರ್ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಷ್ಟು ಮಾತ್ರವಲ್ಲ ಹಿಂದೆ ಇದ್ದ ಸೇತುವೆಗಿಂತ ಸಣ್ಣ ಸೇತುವೆಯನ್ನು ಹೊಸದಾಗಿ ನಿರ್ಮಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸರ್ಕಾರಿ ಶಾಲಾ ಸಮೀಪದ ಕೋಟಿಗದ್ದೆ ಎಂಬಲ್ಲಿರುವ ಓಬೀರಾಯನ ಕಾಲದ ಕಿರುಸೇತುವೆಯ ಅಡಿಭಾಗದಲ್ಲಿ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದು ಮಳೆಗಾಲದಲ್ಲಿ ಸರಳುಗಳು ಕಿತ್ತು ಹೋಗಿ ನೀರುಪಾಲಾಗುತ್ತಿದ್ದವು. ತೀರಾ ಶಿಥಿಲಾವಸ್ಥೆಯಲ್ಲಿರುವ ಸೇತುವೆ ಕುಸಿದು ಅನಾಹುತ ಸಂಭವಿಸಬಹುದಾದ ಮತ್ತು ಸೇತುವೆ ಕುಸಿದರೆ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೂರ‌್ನಾಲ್ಕು ತಿಂಗಳ ಹಿಂದೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ದ.ಕ.ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶಾಸಕ ಅಶೋಕ್‌ಕುಮಾರ್ ರೈ, ಪುತ್ತೂರು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

    ಮನವಿಗೆ ಸ್ಪಂದಿಸಿದ ಜನಪ್ರತಿನಿಧಿಗಳ ಮತ್ತು ಮೇಲಧಿಕಾರಿಗಳ ಸೂಚನೆಯ ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಶಿಥಿಲಾವಸ್ಥೆಯಲ್ಲಿರುವ ಸೇತುವೆ ಸಂಚಾರಕ್ಕೆ ಅಯೋಗ್ಯವಾಗಿದೆ ಎಂಬ ವರದಿ ನೀಡಿದ್ದರು. ಬಳಿಕದ ಹೊಸ ಸೇತುವೆ ನಿರ್ಮಾಣಕ್ಕೆ 40 ಲಕ್ಷ ರೂ.ಸರ್ಕಾರದಿಂದ ಬಿಡುಗಡೆಯಾಗಿತ್ತು. ಸದ್ಯ ಕಾಮಗಾರಿ ನಡೆಯುತ್ತಿದೆ. ಹೊಸ ಸೇತುವೆ ಕಾಮಗಾರಿ ಆರಂಭಗೊಂಡಿದ್ದ ವೇಳೆ ಗ್ರಾಮಸ್ಥರು, ಬಹು ವರ್ಷದ ಬೇಡಿಕೆಯೊಂದು ಈಡೇರಿದೆ ಎಂದು ಖುಷಿ ಪಟ್ಟಿದ್ದರು. ಆದರೆ ಈ ನಡುವೆ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಸ್ಥಳೀಯರಿಂದ ತಡೆ..!

    ಕಾಮಗಾರಿ ಪೂರ್ಣ ಕಳಪೆಯಾಗಿರುವುದು ಮಾತ್ರವಲ್ಲದೆ ಹಿಂದಿನ ಎಂಟೂವರೆ ಮೀಟರ್ ಅಗಲದ ಸೇತುವೆಗಿಂತ ಕಿರಿದಾಗಿ (7 ಮೀಟರ್ ಅಗಲ) ಹಾಗೂ 3 ಅಡಿಯಷ್ಟು ತಗ್ಗಿಸಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಶನಿವಾರ ಸೇತುವೆ ನಿರ್ಮಾಣ ಸ್ಥಳಕ್ಕೆ ತೆರಳಿ ಕಾಮಗಾರಿಗೆ ತಾತ್ಕಾಲಿಕವಾಗಿ ತಡೆಯೊಡ್ಡಿದ್ದಾರೆ. ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಬಂದು ಸರಿಯಾದ ಮಾಹಿತಿ ನೀಡುವ ತನಕ ಕಾಮಗಾರಿ ನಿರ್ವಹಿಸದಂತೆ ಕಾಮಗಾರಿ ಕಾರ್ಮಿಕರಿಗೆ ಸ್ಥಳೀಯರು ಎಚ್ಚರಿಸಿದ್ದಾರೆ.

    ಪ್ರತಿಭಟನೆಯ ಎಚ್ಚರಿಕೆ

    40 ಲಕ್ಷ ರೂ.ವೆಚ್ಚದ ಸೇತುವೆಯನ್ನು ಗುತ್ತಿಗೆದಾರರು ಬರೀ 15 ಲಕ್ಷ ರೂ.ನಲ್ಲಿ ಮುಗಿಸುವ ತರಾತುರಿಯಲ್ಲಿದ್ದಾರೆ. ಕಾಮಗಾರಿ ಕಳಪೆಯಾಗಿದೆ. ಈ ವಿಚಾರವನ್ನು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ತಿಳಿಸಿದ್ದರೂ ಅವರು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಸೇತುವೆಯ ಕ್ರಿಯಾಯೋಜನೆಯ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಶಾಸಕರು ಮತ್ತು ಪುತ್ತೂರಿನ ಸಹಾಯಕ ಕಮೀಷನರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ, ಸರಿಯಾದ ರೀತಿಯಲ್ಲಿ ಕಾಮಗಾರಿ ನಿರ್ವಹಿಸುವಂತೆ ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

    ಬಲಿಷ್ಠವಾದ ಪಿಲ್ಲರ್ ಅಳವಡಿಸದೆ, ಕೇವಲ ಎರಡು ಬದಿ ಭೀಮ್ ಅಳವಡಿಸಿ ಸೇತುವೆ ನಿರ್ಮಾಣ ಕಾಮಗಾರಿ ನಿರ್ವಹಿಸಲಾಗಿದೆ. ಈ ಹಿಂದೆ ಇದ್ದ ಹಳೇ ಸೇತುವೆ ಎಂಟೂವರೆ ಮೀಟರ್ ಅಗಲವಿತ್ತು. ಆದರೆ ಹೊಸ ಸೇತುವೆಯನ್ನು 7ಮೀಟರ್ ಅಗಲ ಮಾಡಿ ಮತ್ತಷ್ಟು ಕಿರಿದಾಗಿಸಲಾಗಿದೆ. ಕಾಮಗಾರಿ ತೀರಾ ಕಳಪೆ ಮಟ್ಟದಿಂದ ಕೂಡಿದೆ. ಸಂಬಂಧಪಟ್ಟ ಎಂಜಿನಿಯರ್‌ಗೆ ಈ ವಿಚಾರವನ್ನು ತಿಳಿಸಿದ್ದರೂ ಅವರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಸಂಬಂಧಪಟ್ಟವರು ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ಸ್ಪಂದನೆ ಸಿಗದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ.
    -ಅಮರ್‌ನಾಥ ಆಳ್ವ, ಕರ್ನೂರು, ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ


    40 ಲಕ್ಷ ರೂ.ಕಾಮಗಾರಿಯಲ್ಲಿ ಈಗ ಬರೀ 10 ಲಕ್ಷ ರೂ.ನಷ್ಟು ಕೆಲಸ ಮಾತ್ರ ಆಗಿದ್ದು, ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ.ಹಳೇ ಸೇತುವೆಗಿಂತ 3 ಅಡಿಯಷ್ಟು ತಗ್ಗಿಸಲಾಗಿದೆ. ಅಗಲವನ್ನು 7 ಮೀಟರಿಗೆ ಕಿರಿದುಗೊಳಿಸಲಾಗಿದೆ. ಕಾಮಗಾರಿ ಕಳಪೆಯಾಗಿದೆ ಎಂಬ ಅಪಸ್ವರ ವ್ಯಕ್ತವಾದ ಬಳಿಕ ಸಂಬಂಧಪಟ್ಟ ಗುತ್ತಿಗೆದಾರರಾಗಲಿ, ಎಂಜಿನಿಯರ್ ಆಗಲಿ ಸ್ಥಳಕ್ಕೆ ಬಂದಿಲ್ಲ. ಹಾಗಾಗಿ ಕಾಮಗಾರಿ ಮುಂದುವರಿಸುವುದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ.
    -ಖಾದರ್ ಕರ್ನೂರು, ಗ್ರಾ.ಪಂ. ಮಾಜಿ ಸದಸ್ಯ

    ಕೋಟಿಗದ್ದೆಯ ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿದ್ದ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಶಾಸಕ ಅಶೋಕ್‌ಕುಮಾರ್ ರೈ 40 ಲಕ್ಷ ರೂ.ಅನುದಾನ ಒದಗಿಸಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಸೇತುವೆ ನಿರ್ಮಾಣ ಕಾರ್ಯ ಲೋಕೋಪಯೋಗಿ ಇಲಾಖೆಯ ಮೂಲಕ ನಡೆಯುತ್ತಿದೆ. ಕಾಮಗಾರಿ ಕಳಪೆ ಎಂಬ ಅಪಸ್ವರ ವ್ಯಕವಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತಕ್ರಮ ಕೈಗೊಳ್ಳಬೇಕು.
    -ಶ್ರೀರಾಮ್ ಪಕ್ಕಳ, ಕರ್ನೂರುಗುತ್ತು, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಸದಸ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts