ಕುಮಾರಧಾರ ನದಿಯಲ್ಲಿ ಮೊಸಳೆ ಮೃತ ದೇಹ ಪತ್ತೆ

PTR_13 APR_8
Published on

ಪುತ್ತೂರು: ಪಂಜ - ಕಡಬ ಸಂಪರ್ಕ ರಸ್ತೆಯ ಪುಳಿಕುಕ್ಕು ಕುಮಾರಧಾರ ನದಿಗೆ ನಿರ್ಮಿಸಿದ ಸೇತುವೆಯ ಬಳಿಯಲ್ಲಿ ಮೊಸಳೆಯ ಮೃತ ದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಹೂತು ಹಾಕಿದ್ದಾರೆ.

ಮೊಸಳೆಯ ಮೃತ ತೇಲುತ್ತಿರುವ ಬಗ್ಗೆ ಶುಕ್ರವಾರ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಗುರುವಾರ ಮೃತ ಪಟ್ಟಿರುವ ಸಾಧ್ಯತೆಯಿದೆ. ಮೃತ ಮೊಸಳೆ ಸುಮಾರು ೨ ವರ್ಷದ ಮರಿಯಾಗಿದ್ದು, ನೀರಿನ ಹರಿವು ಕಡಿಮೆಯಾಗಿ ಸೂರ್ಯದ ಶಾಖ ತಡೆಯಲಾಗದೆ ಮೃತ ಪಟ್ಟಿರುವ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ.

ನೀರು ಕಲುಷಿತವಾಗಿ ಮೃತ ಪಟ್ಟಿರಬಹುದೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನಾಕೂರು ಗಯ ಇಲ್ಲಿಗೆ ಸಮೀಪದಲ್ಲಿದ್ದು, ಅಲ್ಲಿ ದೇವರ ಮೀನು ಎಂದೇ ಹೆಸರುವಾಗಿಯಾದ ಮಹಷಿರ್ ಜಾತಿ ಮೀನುಗಳಿದೆ. ಇದರ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.

ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ, ಮೊಸಳೆಯ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ನಿಖರತೆಯ ಬಗ್ಗೆ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದಾರೆ. ಮೃತ ದೇಹವನ್ನು ಮಣ್ಣಿನಲ್ಲಿ ಹೂಳುವ ಮೂಲಕ ಅಂತ್ಯಕ್ರಿಯೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net