More

    ಭೋಗಾಯನ ಕೆರೆಯಲ್ಲಿ ಜಲ ಸಮೃದ್ಧಿ

    ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

    ಕಡಬ ತಾಲೂಕಿನ ಐತಿಹಾಸಿಕ ಬಳ್ಪ ಗ್ರಾಮದಲ್ಲಿ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಭೋಗಾಯನ ಕೆರೆ ಕಾಯಕಲ್ಪದ ಹಾದಿಯಲ್ಲಿ ಸಾಗುತ್ತಿದೆ. ಬಳ್ಪ ಗ್ರಾಮಕ್ಕೆ ಕಿರೀಟ ಪ್ರಾಯವಾಗಿರುವ ಈ ಪ್ರಾಚೀನ ಚಾರಿತ್ರಿಕ ಕೆರೆಯಲ್ಲಿ ವರ್ಷದ 365 ದಿನವೂ ಜಲ ಸಮೃದ್ಧಿಯಿರುತ್ತದೆ. ತನ್ನ ಒಡಲಾಳದಲ್ಲಿ ಭರಪೂರ ನೀರನ್ನು ತುಂಬಿಕೊಂಡು ನೀರಿನ ಕಣಜವೆನಿಸಿದೆ. ಬಿರು ಬೇಸಿಗೆಯ ಈ ಅವಧಿಯಲ್ಲೂ ಐತಿಹಾಸಿಕ ತಟಾಕದಲ್ಲಿ ನೀರು ನಳನಳಿಸುತ್ತಿದೆ.

    ನೇರ ಬಳಕೆ ಶೂನ್ಯ

    ಆರೇಳು ದಶಕಗಳ ಹಿಂದೆ ಗದ್ದೆ ಬೇಸಾಯಕ್ಕೆ ಕೆರೆಯ ನೀರನ್ನು ಉಪಯೋಗಿಸುತ್ತಿದ್ದರು. ಈಗ ಗದ್ದೆಗಳೆಲ್ಲ ಮಾಯವಾಗಿ ಅಡಕೆ ತೋಟಗಳಾಗಿವೆ. ಕೃಷಿಕರು ಬೋರ್‌ವೆಲ್ ಮೊರೆ ಹೋಗಿದ್ದಾರೆ. ಹೀಗಾಗಿ ಭೋಗಾಯನ ಕೆರೆಯ ನೀರು ನೇರವಾಗಿ ಬಳಕೆ ಮಾಡುವುದು ನಿಂತೇ ಹೋಗಿದೆ. ಭವಿಷ್ಯದಲ್ಲಿ ಆದರೆ ಅಗತ್ಯ ಬಿದ್ದಾಗಲೆಲ್ಲ ಮೋಟಾರು ಪಂಪ್ ಮೂಲಕ ಟ್ಯಾಂಕಿಗೆ ನೀರು ತುಂಬಿಸಿ ಬಳ್ಪ ಗ್ರಾಮದ ಕೃಷಿ ಕಾರ್ಯಕ್ಕೆ ಈ ಕೆರೆಯ ನೀರು ಬಳಸಬಹುದಾಗಿದೆ. ಅದೇ ರೀತಿ ಕೆರೆ ಶುದ್ಧವಾಗಿಟ್ಟುಕೊಂಡಲ್ಲಿ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಮೂಲವಾಗಿಯೂ ಬಳಸಬಹುದು ಎಂಬ ಅಭಿಪ್ರಾಯವಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರಿನ ಮೂಲವಾಗಿ ಈ ಕೆರೆಯ ನೀರನ್ನು ಬಳಸಿದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಆದುದರಿಂದ ಈ ಐತಿಹಾಸಿಕ ಕೆರೆಯ ಉಪಯೋಗವನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕಾಗಿರುವುದು ಅತ್ಯಗತ್ಯ.

    ಐತಿಹಾಸಿಕ ಮದಗ

    ಹಳ್ಳಿಯ ಭತ್ತದ ಬೇಸಾಯಕ್ಕೆ ನೀರುಣಿಸುವ ಉದ್ದೇಶದಿಂದ ಭೋಗರಾಯ ಎಂಬ ಅರಸನು ಈ ಕೆರೆ ನಿರ್ಮಿಸಿದ ಕಾರಣ ಭೋಗಾಯನ ಕೆರೆ ಎಂಬ ಹೆಸರು ಬಂತೆಂಬ ಮಾತು ಪ್ರಚಲಿತದಲ್ಲಿದೆ. ಈಗಲೂ ಇದೇ ಹೆಸರಿನಿಂದ ಕರೆಯಲಾಗುತ್ತಿದೆ. ಹಿಂದಿನ ಕಾಲದಲ್ಲಿ ಬಹು ದೂರದವರೆಗೂ ಬೇಸಾಯದ ಗದ್ದೆಗಳು ಇದ್ದವು. ಅವುಗಳಿಗೆ ಈ ಕೆರೆಯಿಂದ ನೀರು ಪೂರೈಸಲಾಗುತ್ತಿತ್ತು. ವಿಜಯನಗರದ ಅರಸರು ತಮ್ಮ ಶಾಸನದಲ್ಲಿ ಈ ಕೆರೆಯ ಉಪಯುಕ್ತತೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ.

    400 ವರ್ಷದ ಇತಿಹಾಸ

    ಬೋಗಾಯನ ಕೆರೆ ಸುಮಾರು 400 ವರ್ಷಗಳ ಇತಿಹಾಸ ಹೊಂದಿದೆ. ಈ ಕೆರೆಯು ವಿಶಾಲವಾಗಿದ್ದು ಗ್ರಾಮದ ಎತ್ತರ ಭಾಗದಲ್ಲಿರುವುದರಿಂದ ಹಿಂದೆ ಕೆರೆಯ ಕೆಳಗಿನ ಭಾಗದ ಭತ್ತದ ಗದ್ದೆಗಳಿಗೆ ನೀರುಣಿಸುವ ಆಶ್ರಯವಾಗಿತ್ತು. ಹಿಂದಿನ ಕಾಲದಲ್ಲಿ ಬಹು ದೂರದವರೆಗೂ ಇದ್ದ ಬೇಸಾಯದ ಗದ್ದೆಗಳಿಗೆ ಈ ಕೆರೆ ನೀರುಣಿಸುತ್ತಿತ್ತು. ಆದುದರಿಂದ ಈ ಪ್ರದೇಶ ಶ್ರೀಮಂತವಾಗಿತ್ತು ಎನ್ನಲಾಗಿದೆ. ಪ್ರಸ್ತುತ ಈ ಕೆರೆ ಒಂದೂವರೆ ಎಕರೆ ವ್ಯಾಪ್ತಿ ಹಾಗೂ 30 ಅಡಿಗಿಂತಲೂ ಆಳವಿದೆ. ಆಗಿನಿಂದ ಈಗಿನ ತನಕವೂ ಬಿರು ಬೇಸಿಗೆಯಲ್ಲಿ ಸಮೃದ್ಧ ನೀರಿನೊಂದಿಗೆ ನಳನಳಿಸುತ್ತಿರುವ ಬೋಗಾಯನಕೆರೆಯನ್ನು ನೋಡುವುದೇ ಸುಂದರ. ಸದ್ಯ ಬಿರು ಬಿಸಿಲಿನ ನಡುವೆಯೂ ಈ ಐತಿಹಾಸಿಕ ಕೆರೆ ಜಲ ಸಮೃದ್ಧಿಯೊಂದಿಗೆ ಮಿನುಗುತ್ತಿದೆ. ಕೆರೆಯ ನೀರಿನಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲವೂ ವೃದ್ಧಿಸಿದೆ.

    ದುರಸ್ತಿ ಬಳಿಕ ಜೀವಕಳೆ

    ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದಿಂದ 12 ಕಿ.ಮೀ. ದೂರದ ಬಳ್ಪ ಪೇಟೆಯ ಪಕ್ಕದಲ್ಲಿ ರಸ್ತೆಗೆ ತಾಗಿಕೊಂಡೇ ಈ ಕೆರೆ ಇದೆ. 1.40 ಎಕರೆ ವಿಸ್ತೀರ್ಣದಲ್ಲಿ ಕೆರೆ ಹರಡಿಕೊಂಡಿದೆ. ಸುತ್ತಲೂ ಪ್ರಶಾಂತ ಅರಣ್ಯ ಪರಿಸರ ಈ ಕೆರೆಯ ಸೌಂದರ್ಯ ಇಮ್ಮಡಿಗೊಳಿಸಿದೆ. 25-30 ವರ್ಷಗಳ ಹಿಂದೆ ಈ ಕೆರೆಯು ಒಂದು ಬದಿಗೆ ತಡೆಗೋಡೆ ನಿರ್ಮಿಸಲಾಗಿತ್ತು. ವರ್ಷಗಳು ಕಳೆದಂತೆ ಕರೆಯಲ್ಲಿ ಹೂಳು ತುಂಬಿ ಕೆರೆಯ ಮೂಲಸತ್ವವೇ ನಾಶವಾಗುವ ಭೀತಿ ಇತ್ತು. ಮಳೆ ನೀರಿನೊಂದಿಗೆ ಬರುವ ಮಣ್ಣು, ಕಸ ತುಂಬಿ ಕೆರೆ ಹೂಳಿನಿಂದಲೇ ಭರ್ತಿಯಾಗುವ ಅಪಾಯವಿತ್ತು. ಇದೇ ಇನ್ನೂ ಒಂದು ದಶಕ ಕಳೆದಿದ್ದರೆ ಕೆರೆಯ ಸ್ವರೂಪವೇ ನಾಶವಾಗುತ್ತಿತ್ತು. ಆದರೆ ಕಳೆದ ವರ್ಷ ಕೆರೆಯ ಹೂಳು ತೆಗೆದು ಸುತ್ತಲೂ ಸುಂದರವಾದ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಕೆರೆಗೆ ಮತ್ತೆ ಕಳೆ ಬಂದಿದೆ.

    ಪ್ರವಾಸೋದ್ಯಮ ಅವಕಾಶ

    ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಅತ್ಯಂತ ಪ್ರಶಾಂತ ಪರಿಸರದಲ್ಲಿ ಭೊಗಾಯನ ಕೆರೆ ಇರುವ ಕಾರಣ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಅವಕಾಶವಿದೆ. ಕೆರೆಯ ಪಕ್ಕದಲ್ಲಿ ಪ್ರವಾಸಿಗರ ಅನುಕೂಲಕ್ಕೆ ಮೂಲಸೌಕರ್ಯ ಕಲ್ಪಿಸಿದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ, ಬರುವ ಯಾತ್ರಾರ್ಥಿಗಳು ಇಲ್ಲಿ ಒಂದಷ್ಟು ಸಮಯ ಕಳೆಯುವಂತೆ ಮಾಡಬಹುದು.

    ಐತಿಹಾಸಿಕ ಬೋಗಾಯನ ಕೆರೆಯು ಸುಂದರ ತಾಣವಾಗಿದೆ. ಈ ಪ್ರಾಚೀನ ಕೆರೆಯು 365 ದಿನವೂ ನೀರನ್ನು ತನ್ನ ಒಡಲಾಳದಲ್ಲಿ ತುಂಬಿಕೊಂಡಿರುತ್ತದೆ. ಈ ಕೆರೆಯಲ್ಲಿನ ನೀರಿನಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಅಲ್ಲದೆ ಈ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಉತ್ತಮ. ಆಧುನಿಕ ತಂತ್ರಜ್ಞಾನ ಬಳಸಿ ನೀರನ್ನ ಶುದ್ಧೀಕರಿಸಿ ಬಳ್ಪ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ಚಿಂತನೆ ಮಾಡಬಹುದು.
    -ನಾಗೇಶ್ ಸಂಪ್ಯಾಡಿ ಬಳ್ಪ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts