More

    ಕುಡ್ಲದಲ್ಲಿ ಮೋದಿ ರೋಡ್ ಶೋ, ಸಂಜೆ 7.45ಕ್ಕೆ ರ‌್ಯಾಲಿ ಆರಂಭ, ಬಿಗಿ ಭದ್ರತೆ


    ಮಂಗಳೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.14ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಲಕ್ಷಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಅಗತ್ಯ ಭದ್ರತಾ ಕ್ರಮ ಕೈಗೊಂಡಿದೆ.


    ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಸಾಗಿ ಬರುವ ಪ್ರಧಾನಿ ಲೇಡಿಹಿಲ್ ಶ್ರೀ ನಾರಾಯಣಗುರು ವೃತ್ತಕ್ಕೆ ಸಂಜೆ ನಿಗದಿತ ಸಮಯಕ್ಕಿಂತ 1.15 ಗಂಟೆ ವಿಳಂಬವಾಗಿ 7.45ಕ್ಕೆ ತಲುಪುವರು. ಶ್ರೀ ನಾರಾಯಣಗುರು ಪ್ರತಿಮೆಗೆ ಹಾರಾರ್ಪಣೆಗೈದು ರ‌್ಯಾಲಿ ಆರಂಭಿಸುವರು. ಲಾಲ್‌ಭಾಗ್, ಬಳ್ಳಾಲ್‌ಬಾಗ್, ಪಿವಿಎಸ್ ವೃತ್ತದ ಮೂಲಕ ನವಭಾರತ ವೃತ್ತದಲ್ಲಿ ರಾತ್ರಿ 8.45ಕ್ಕೆ ರ‌್ಯಾಲಿ ಸಮಾಪನಗೊಳ್ಳಲಿದೆ.


    ಬಿಜೆಪಿ ಧ್ವಜ, ಪತಾಕೆ ಅಲಂಕಾರ
    ರ‌್ಯಾಲಿ ಸಾಗುವ 2 ಕಿ.ಮೀ. ರಸ್ತೆಯುದ್ದಕ್ಕೂ ಬಿಜೆಪಿ ಧ್ವಜ, ಕೇಸರಿ ಪತಾಕೆಗಳಿಂದ ಅಲಂಕಾರ ಮಾಡಲಾಗಿದೆ. ರ‌್ಯಾಲಿ ಹಾದು ಹೋಗುವ ಏಳೆಂಟು ಕಡೆಗಳಲ್ಲಿ ತುಸು ಎತ್ತರದ ವೇದಿಕೆಗಳಲ್ಲಿ ಕರಾವಳಿಯ ಯಕ್ಷಗಾನ, ಕಂಬಳ, ಹುಲಿವೇಷ, ಭರತನಾಟ್ಯ ಮೊದಲಾದ ಕಲಾ ಸೊಗಡನ್ನು ಪ್ರಧಾನಿಗೆ ಪರಿಚಯಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಆಯ್ದ ಸ್ಥಳಗಳಲ್ಲಿ ಪಕ್ಷದ ನಾಯಕರು ರೋಡ್ ಶೋ ವೀಕ್ಷಣೆ ಮಾಡುವರು. ರಸ್ತೆಯ ಇಕ್ಕೆಲಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ನಿಂತು ವೀಕ್ಷಿಸಲಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.


    5 ಸಾವಿರ ಕೆ.ಜಿ. ಪುಷ್ಪ ವೃಷ್ಠಿ
    ಮೋದಿ ಅವರು ರ‌್ಯಾಲಿ ಮೂಲಕ ಸಾಗುವ ಸಂದರ್ಭ 5 ಸಾವಿರ ಕೆ.ಜಿ. ಪುಷ್ಪ ವೃಷ್ಠಿ ಮಾಡಲು ಉದ್ದೇಶಿಸಲಾಗಿದೆ. ಎಸ್‌ಪಿಜಿ ಪರಿಶೀಲನೆ ಬಳಿಕ ಈ ಪುಷ್ಪ ವೃಷ್ಠಿ ಮಾಡಲು ಅನುಮತಿ ಸಿಗಲಿದೆ. ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ರ‌್ಯಾಲಿ ವೀಕ್ಷಣೆಗೆ ಬರುವವರು ಸಂಜೆ 5 ಗಂಟೆ ಒಳಗೆ ಬಂದರೆ ತಪಾಸಣೆ ಪ್ರಕ್ರಿಯೆ ನಡೆಸಲು ಸಹಕಾರಿಯಾಗಲಿದೆ. ರಸ್ತೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆಯೂ ಆಗುವುದಿಲ್ಲ. ಕಪ್ಪು ಅಂಗಿ ಧರಿಸಿದವರಿಗೆ ಒಳಗೆ ಪ್ರವೇಶ ಇರುವುದಿಲ್ಲ. ಬ್ಯಾಗ್ ಮತ್ತಿತರ ವಸ್ತುಗಳನ್ನು ರ‌್ಯಾಲಿ ನಡೆಯುವ ಸ್ಥಳಕ್ಕೆ ತರಲು ಅವಕಾಶ ಇರುವುದಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಇರಲಿದೆ.


    ಶುಚಿಯಾದ ರಸ್ತೆ
    ರ‌್ಯಾಲಿ ಸಾಗುವ ರಸ್ತೆಯನ್ನು ಶುಚಿಗೊಳಿಸಲಾಗಿದೆ. ಎಲ್ಲಾ ಹಂಪ್ಸ್‌ಗಳನ್ನು ತೆರವು ಮಾಡಲಾಗಿದೆ. ಎದ್ದು ಹೋಗಿ ರಸ್ತೆ ಬದಿಯಲ್ಲಿದ್ದ ಇಂಟರ್‌ಲಾಕ್, ಕಲ್ಲು ಯಾವುದೇ ವಸ್ತುಗಳು ಇರದಂತೆ ಶುಚಿಗೊಳಿಸಲಾಗಿದೆ. ರಸ್ತೆ ಬದಿಯ ಗೋಡೆಗಳು, ಚರಂಡಿ, ಅಂಗಡಿಗಳ ನಾಮಫಲಕ ಸೇರಿದಂತೆ ಎಲ್ಲವನ್ನೂ ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಾರೆ. ರಸ್ತೆ ಬದಿಯ ಅಂಗಡಿ ಮಾಲೀಕರ ಹೆಸರು, ಫೋನ್ ನಂಬರ್ ಸಹಿತ ಆಧಾರ್ ಕಾರ್ಡ್ ಸಂಗ್ರಹಿಸಿದ್ದಾರೆ. ಎಸ್‌ಪಿಜಿ ಜತೆಗೆ ಬಾಂಬ್ ಪತ್ತೆದಳ, ಶ್ವಾನದಳ ಸಹಿತ ಸ್ಥಳೀಯ ಪೊಲೀಸರು ಭದ್ರತಾ ಹೊಣೆ ಹೊತ್ತಿದ್ದಾರೆ. ನಗರದ ಹೋಟೆಲ್, ಲಾಡ್ಜ್‌ಗಳ ತಪಾಸಣೆ ನಡೆಸುತ್ತಿದ್ದಾರೆ. ಲಾಡ್ಜ್‌ಗಳಲ್ಲಿ ಬಂದು ತಂಗುವವರ ಹಿನ್ನೆಲೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರೈಲ್ವೆ ನಿಲ್ದಾಣದಲ್ಲೂ ತಪಾಸಣೆ ಬಿಗುಗೊಳಿಸಲಾಗಿದೆ. ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts