More

    ಸಿಗಂದೂರು ಸೇತುವೆಗೆ ರೋಪ್ ವೇ

    ಶಿವಮೊಗ್ಗ : ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿರುವ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಈಗ ಮಹತ್ವದ ಘಟ್ಟ ತಲುಪಿದೆ. ರೋಪ್‌ವೇ ಅಳವಡಿಕೆಗೆ ಚಾಲನೆ ದೊರೆತಿದೆ. 2018ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ ಆರು ವರ್ಷಗಳ ಬಳಿಕ ಈ ಕಾಮಗಾರಿ ಪ್ರಮುಖ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.

    423.15 ಕೋಟಿ ರೂ. ಮೊತ್ತದ ಈ ಕಾಮಗಾರಿಯನ್ನು 2019ರ ಜುಲೈನಲ್ಲಿ ಆರಂಭಿಸಲಾಗಿತ್ತು. ಈ ವರ್ಷ ನವೆಂಬರ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿ ನಿಗದಿಪಡಿಸಲಾಗಿದೆ. ಇದುವರೆಗೆ ಶೇ.68 ಕಾಮಗಾರಿ ಮುಕ್ತಾಯವಾಗಿದೆ.
    ಮೂರು ವರ್ಷಗಳ ಹಿಂದೆ ಶರಾವತಿ ಹಿನ್ನೀರು ಹೆಚ್ಚಿದ್ದ ಪರಿಣಾಮ ಕಾಮಗಾರಿ ಮುಂದುವರಿಸಲು ಕಷ್ಟವಾಗಿತ್ತು. ಆದರೆ ಈ ಬಾರಿ ಹಿನ್ನೀರು ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವುದರಿಂದ ಏಪ್ರಿಲ್‌ನಲ್ಲೇ ಕಾಮಗಾರಿಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಹಿನ್ನೀರು ಭಾಗದಲ್ಲಿ ಇನ್ನು ಮೂರು ಮೀಟರ್ ನೀರು ಕಡಿಮೆಯಾದರೆ ಲಾಂಚ್ ಸಂಚಾರ ಸ್ಥಗಿತಗೊಳ್ಳಲಿದೆ. ಇದರಿಂದ ಕಾಮಗಾರಿಯ ಸಾಮಗ್ರಿಗಳನ್ನು ಸ್ಥಳಕ್ಕೆ ಕೊಂಡೊಯ್ಯಲಾಗುವುದಿಲ್ಲ. ಹೀಗಾಗಿ ಯೋಜನೆ ಕೈಗೆತ್ತಿಕೊಂಡಿರುವ ಕಂಪನಿಗೆ ಮತ್ತೊಂದು ಸವಾಲು ಎದುರಾಗಿದೆ.
    ಚೌಡೇಶ್ವರಿ ದೇವಿಗೆ ಪೂಜೆ: ಮುಂದೆ ಯಾವುದೇ ವಿಘ್ನಗಳು ಎದುರಾಗದಂತೆ ಅಧಿಕಾರಿಗಳು ದೇವರ ಮೊರೆ ಹೋಗಿದ್ದಾರೆ. ಯೋಜನೆ ಕೈಗೆತ್ತಿಕೊಂಡಿರುವ ದಿಲೀಪ್ ಬಿಲ್ಡ್‌ಕಾನ್ ಕಂಪನಿಯ ಪ್ರಾಜೆಕ್ಟ್ ಮಾನೇಜರ್ ಪೂರ್ಣಚಂದ್ರ ಸತ್ಯನಾರಾಯಣ್, ಕಾರ್ಯ ನಿರ್ವಾಹಕ ಇಂಜಿನಿಯರ್ ದಿವಾಕರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಿಂಗಪ್ಪ, ಉಸ್ತುವಾರಿ ಇಂಜಿನಿಯರ್ ಪೀರ್‌ಪಾಶಾ, ಸುನೀಲ್ ಅವರನ್ನೊಳಗೊಂಡ ತಂಡ ರೋಪ್‌ವೇ ಅಳವಡಿಕೆ ಕಾಮಗಾರಿಗೂ ಮುನ್ನ ಬುಧವಾರ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿತು. ಅದಕ್ಕೂ ಮುನ್ನ ಈ ತಂಡ ಸಿಗಂದೂರಿಗೆ ತೆರಳಿ ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿತ್ತು.
    ಏಕಿಷ್ಟು ಮಹತ್ವ?:ಸಿಗಂದೂರು ಸೇತುವೆ 2,125 ಮೀಟರ್ ಉದ್ದವಿದೆ. ಇದರಲ್ಲಿ ಸಂಚರಿಸುವ ವಾಹನಗಳ ಶೇ.70 ಭಾರವನ್ನು ಕೇಬಲ್‌ಗಳು ಹೊರಲಿವೆ. ಹೀಗಾಗಿ ರೋಪ್‌ವೇ ನಿರ್ಮಾಣ ಕಾಮಗಾರಿ ಈ ಯೋಜನೆಯ ಪ್ರಮುಖ ಭಾಗವಾಗಿದೆ. ರೋಪ್‌ವೇ ಅಳವಡಿಕೆಯಿಂದ ಸೇತುವೆ ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯವಾಗಲಿದೆ. ಪ್ರತಿ ಕೇಬಲ್ ಅಳವಡಿಕೆಗೆ 2-3 ದಿನಗಳ ಅವಶ್ಯಕತೆಯಿದೆ. ಒಟ್ಟು 24 ಕೇಬಲ್‌ಗಳನ್ನು ಅಳವಡಿಸಬೇಕಿದೆ ಎಂದು ಉಸ್ತುವಾರಿ ಇಂಜಿನಿಯರ್ ಪೀರ್‌ಪಾಶಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಪೈಲ್ ಕ್ಯಾಪ್ ಅಳವಡಿಕೆ ವಿಳಂಬ:ಕಾಮಗಾರಿ ಶೇ.25ಕ್ಕೂ ಹೆಚ್ಚು ಪೂರ್ಣಗೊಂಡಿದ್ದ ಸಂದರ್ಭದಲ್ಲಿ 2021ರಲ್ಲಿ ಸೇತುವೆ ನಿರ್ಮಾಣಕ್ಕೆ ಕಂಬಗಳನ್ನು ಅಳವಡಿಸುವ ಮುನ್ನ ಪೈಲ್ ಕ್ಯಾಪ್ ಅಳವಡಿಕೆ ಮಾಡಬೇಕಿತ್ತು. ಈ ಪೈಲ್ ಕ್ಯಾಪ್‌ಗಳು ಇಡೀ ಕಾಮಗಾರಿಯ ಬುನಾದಿಯಾಗಿದ್ದವು. ಇಡೀ ಸೇತುವೆ ನಿರ್ಮಾಣಕ್ಕೆ ಒಟ್ಟು 14 ಪೈಲ್ ಕ್ಯಾಪ್‌ಗಳನ್ನು ಅಳವಡಿಸಲು ಯೋಜನೆ ಸಿದ್ಧವಾಗಿತ್ತು. ಹಿನ್ನೀರಿನ ಎರಡೂ ತುದಿಯಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಡೆಗಳಲ್ಲಿ ಐದು ಪೈಲ್ ಕ್ಯಾಪ್‌ಗಳನ್ನು ನಿರ್ಮಿಸಲಾಗಿತ್ತು. ಹಿನ್ನೀರಿನ ಮಧ್ಯ ಭಾಗದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿದ್ದ ಕಾರಣ ಪೈಲ್ ಕ್ಯಾಪ್‌ಗಳನ್ನು ಅಳವಡಿಸುವುದು ವಿಳಂಬವಾಗಿತ್ತು. 9 ಪೈಲ್ ಕ್ಯಾಪ್‌ಗಳ ನಿರ್ಮಾಣ ಮಾಡದೇ ಕಾಮಗಾರಿಯನ್ನು ಮುಂದುವರಿಸುವುದು ಅಸಾಧ್ಯವಾಗಿತ್ತು. ಇದೇ ಕಾರಣದಿಂದ ಕಾಮಗಾರಿ ತಡವಾಯಿತು.
    ಈಗಲೂ ಪ್ರತಿಕೂಲ ಸ್ಥಿತಿ:ಮೂರು ವರ್ಷದಂತೆ ಈಗಲೂ ಪ್ರತಿಕೂಲ ಸ್ಥಿತಿ ನಿರ್ಮಾಣವಾಗಿದೆ. ಈಗ ಹಿನ್ನೀರು ಪ್ರಮಾಣ ಕುಸಿಯುತ್ತಿರುವುದರಿಂದ ಲಾಂಚ್ ಸಂಚಾರಕ್ಕೆ ಬ್ರೇಕ್ ಬೀಳುವ ಅಪಾಯವಿದೆ. ಏಪ್ರಿಲ್ ಅಂತ್ಯಕ್ಕೆ ಲಾಂಚ್ ಮಾರ್ಗದಲ್ಲಿ ಹಿನ್ನೀರು ಸಂಪೂರ್ಣ ಕಡಿಮೆಯಾಗುವ ಅಂದಾಜಿದೆ. ನೀರಿನ ಪ್ರಮಾಣದಲ್ಲಿ ಕುಸಿತ ಕಂಡರೆ ಮತ್ತೆ ಲಾಂಚ್ ಸಂಚಾರ ಆರಂಭವಾಗುವುದು ಜೂನ್ ಅಂತ್ಯಕ್ಕೆ ಅಲ್ಲಿಯವರೆಗೆ ಸೇತುವೆ ಕಾಮಗಾರಿಗೂ ಹಿನ್ನಡೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts