

ವಿಜಯವಾಣಿ ಸುದ್ದಿಜಾಲ ಹೆಬ್ರಿ
ರಾಷ್ಟ್ರೀಯ ಹ್ದೆದಾರಿ 169ಎ ಇದರ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಹಿರಿಯಡಕದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಆವರಣ ಗೋಡೆ ಹಾಗೂ ಕಟ್ಟಡಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಪ್ರಸ್ತುತ ಈ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ 1,300ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಿರಂತರ ಮಳೆಯೂ ಸುರಿಯುತ್ತಿದ್ದು, ಶಾಲೆಯ ಗೋಡೆ ಅಥವಾ ಕಟ್ಟಡದ ಕುಸಿದು ಜೀವಾಪಾಯ ಆಗುವ ಭೀತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕಾಡುತ್ತಿದೆ.
ಮಲ್ಪೆ-ತೀರ್ಥಹಳ್ಳಿ ರಾಷ್ಟ್ರಿಯ ಹೆದ್ದಾರಿ 169ಎ ಇದರ ಪರ್ಕಳದಿಂದ ಹೆಬ್ರಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಅಕ್ಟೋಬರ್‌ನಲ್ಲಿ ಆರಂಭಗೊಂಡಿದೆ. ಕಾಮಗಾರಿ ಭರದಿಂದ ಸಾಗಿದ್ದು, ಹಿರಿಯಡಕ-ಹೆಬ್ರಿ ರಸ್ತೆ ಪಕ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಂಭಾಗದಲ್ಲಿಯೂ ಸುಮಾರು 8 ಅಡಿಗಳಷ್ಟು ನೆಲ ಅಗೆದು ರಸ್ತೆ ಅಗಲ ಮಾಡಲಾಗಿದೆ. ಇದರಿಂದಾಗಿ ರಸ್ತೆಗೂ ಶಾಲೆಯ ಕಟ್ಟಡಕ್ಕೂ ಕೇವಲ 2 ಮೀಟರ್ ಮಾತ್ರ ಖಾಲಿ ಜಾಗವಿದೆ. ಶಾಲೆಯ ಮುಖ್ಯ ದ್ವಾರದ ರಸ್ತೆಯನ್ನೂ ಅಗೆದು ಹಾಕಿದ್ದರಿಂದ ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಕಳೆದ ಜನವರಿ ತಿಂಗಳಲ್ಲಿ ಶಾಲೆಯ ಬಳಿ ರಸ್ತೆ ಅಗಲೀಕರಣ ಮಾಡಲು ನೆಲ ಅಗೆಯುವಾಗ ಶಾಲೆಯ ಪ್ರಾಂಶುಪಾಲರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ರಾಷ್ಟ್ರೀಯ ಹೆದ್ದಾರಿ ವಿಭಾಗ, ಶೃಂಗೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾಧಿಕಾರಿ, ಜಿಪಂ ಸಿಇಒ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್, ಪ.ಪೂ. ಇಲಾಖೆಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಹೀಗೆ ಸಂಬಂಧಿತ ಎಲ್ಲ ಅಧಿಕಾರಿಗಳಿಗೂ ಮನವಿ ಸಲ್ಲಿಸಿತ್ತು. ಬಳಿಕ ಮಾರ್ಚ್ ತಿಂಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೂ ಶಾಲೆಗೆ ಆಗುತ್ತಿರುವ ಸಮಸ್ಯೆ ಕುರಿತು ಮನವಿ ಸಲ್ಲಿಸಲಾಗಿದೆ.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಹಾಲಿ ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು ಶಾಲೆಗೆ ತೊಂದರೆ ಆಗುತ್ತಿರುವ ಕುರಿತು ಸಂಬಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಪ್ರಯೋಜನವಾಗಲಿಲ್ಲ. ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವ ಸಂತೆಕಟ್ಟೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕಾಂಕ್ರೀಟ್ ಆವರಣ ಗೋಡೆ ಇದ್ದರೂ ಹೆದ್ದಾರಿಯ ಸರ್ವಿಸ್ ರಸ್ತೆಯ ಮಣ್ಣು ಕುಸಿದು ಅವಾಂತರ ಸೃಷ್ಟಿಸಿತ್ತು. ಅದೇರೀತಿ ಇಲ್ಲಿಯೂ ನೆಲ ಅಗೆದಿರುವ ಕಡೆ ತಡೆಗೋಡೆ ವ್ಯವಸ್ಥೆ ಇಲ್ಲದ್ದರಿಂದ ಪದವಿಪೂರ್ವ ಕಾಲೇಜ್ ಕಟ್ಟಡದ ಅಡಿಪಾಯ ಹಾಗೂ ಕಟ್ಟಡಕ್ಕೆ ಹಾನಿ ಉಂಟಾಗುವ ಭೀತಿ ಉಂಟಾಗಿದೆ. ಆದರೂ ಸಂಬಂಧಿತ ಅಧಿಕಾರಿಗಳು ಇದುವರೆಗೂ ಸಮಸ್ಯೆ ಬಗೆಹರಿಸಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.
ಮಳೆಗಾಲಕ್ಕೂ ಮೊದಲು ಶಾಲೆಗೆ ಮೆಟ್ಟಿಲು ಹಾಗೂ ತಡೆಗೋಡೆ ನಿರ್ಮಿಸಿ ಕೊಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದ ಸಂಸ್ಥೆಯವರು ಕಳೆದ ಜನವರಿಯಲ್ಲೇ ಭರವಸೆ ನೀಡಿದ್ದರು. ಆದರೆ, ಇನ್ನೂ ಕ್ರಮ ಕೈಗೊಂಡಿಲ್ಲ. ಇದೀಗ ಪದವಿ ಪೂರ್ವ ತರಗತಿಯ ಕೊಠಡಿಯು ರಸ್ತೆಗೆ ಸಮೀಪವೇ ಇದ್ದು, ವಿದ್ಯಾರ್ಥಿಗಳಲ್ಲೂ ಭಯ ಉಂಟಾಗಿದೆ.-ಬಿ.ಎಲ್. ವಿಶ್ವಾಸಉಪಾಧ್ಯಕ್ಷ, ಶಾಲಾ ಅಭಿವೃದ್ಧಿ ಸಮಿತಿ
ಈ ವಿಷಯಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಇಂಜಿನಿಯರ್‌ಗಳೊಂದಿಗೆ ಮಾತುಕತೆ ನಡೆಸಿದ್ದು, ಶಾಲೆಯ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಮಳೆ ಕಡಿಮೆಯಾದ ಕೂಡಲೇ ತಡೆಗೋಡೆ ನಿರ್ಮಿಸುವಂತೆ, ಶಾಲಾ ಕಟ್ಟಡ ಕುಸಿತಕ್ಕೊಳಗಾಗದಂತೆ ಮರಳಿನ ಬ್ಯಾಗ್ ಅಳವಡಿಸಲು ಸೂಚಿಸಿದ್ದೇನೆ.-ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ನಿಲ್ಲಿಸಲಾಗಿದೆ. ಶಾಲೆಯ ಮುಂಭಾಗದಲ್ಲಿ ತಡೆಗೋಡೆ ನಿರ್ಮಿಸುವ ಯೋಜನೆ ಇದೆ.-ಮಂಜುನಾಥ ನಾಯಕ್ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ