ಹೊಸ ಸಂಸತ್​ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್​ಜೆಡಿ: ಇದು ದೇಶದ್ರೋಹವೆಂದ ಬಿಜೆಪಿ

RJD vs BJP
Published on

ನವದೆಹಲಿ: ಈಗಾಗಲೇ ವಿವಾದದ ಸುಳಿಯಲ್ಲಿರುವ ಸಿಲುಕಿರುವ ನೂತನ ಸಂಸತ್​ ಭವನವನ್ನು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ)ವು ಶವಪೆಟ್ಟಿಗೆ ಹೋಲಿಸುವ ಮೂಲಕ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಆರ್​ಜೆಡಿ ಹೇಳಿಕೆ ದೇಶದ್ರೋಹದ ಹೇಳಿಕೆ ಎಂದು ಬಿಜೆಪಿ ಹೇಳಿದೆ.

ಇಂದು ನೂತನ ಸಂಸತ್​ ಉದ್ಘಾಟನೆ ನಡುವೆ ಆರ್​ಜೆಡಿ ಟ್ವೀಟ್​ ಮಾಡಿದೆ. ಒಂದು ಕಡೆ ಶವಪೆಟ್ಟಿಗೆಯ ಫೋಟೋ ಮತ್ತು ಇನ್ನೊಂದು ಕಡೆ ಹೊಸ ಸಂಸತ್​ ಫೋಟೋ ಹಾಕಿ ಟ್ವೀಟ್​ ಮಾಡಿರುವ ಆರ್​ಜೆಡಿ ಏನಿದು? ಎಂದು ಅಡಿಬರಹ ನೀಡಿದೆ. ಈ ಮೂಲಕ ಹೊಸ ಸಂಸತ್​ ಭವನವನ್ನು ಶವಪೆಟ್ಟಿಗೆ (ಕಾಫಿನ್​)ಗೆ ಹೋಲಿಸಿದೆ.

ಈ ಬಗ್ಗೆ ಆರ್‌ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಅವರು ಪ್ರತಿಕ್ರಿಯಿಸಿ, ನಮ್ಮ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುವುದನ್ನು ಪ್ರತಿನಿಧಿಸುತ್ತದೆ. ಇದನ್ನು ದೇಶ ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇಗುಲವಾಗಿದೆ ಮತ್ತು ಇದು ಚರ್ಚೆಗಳ ಸ್ಥಳವಾಗಿದೆ ಎಂದಿದ್ದಾರೆ.

ಆರ್​ಜೆಡಿ ಟ್ವೀಟ್​ಗೆ ಬಿಜೆಪಿ ತಿರುಗೇಟು ನೀಡಿದ್ದು, ಹೊಸ ಸಂಸತ್ ಕಟ್ಟಡದ ವಿನ್ಯಾಸವನ್ನು ಶವಪೆಟ್ಟಿಗೆಯೊಂದಿಗೆ ಹೋಲಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಹೇಳಿದೆ.

2024 ರಲ್ಲಿ ದೇಶದ ಜನರು ನಿಮ್ಮನ್ನು ಈ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ ಬಿಜೆಪಿ ವಕ್ತಾರ ಗೌರವ್​ ಭಾಟಿಯಾ ಆರ್​ಜೆಡಿಗೆ ತಿರುಗೇಟು ನೀಡಿದ್ದಾರೆ.

ಐತಿಹಾಸಿಕ ಹೊಸ ಸಂಸತ್​ ಭವನವನ್ನು ಇಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ರಾಜದಂಡ ಸೆಂಗೋಲ್​ ಅನ್ನು ಲೋಕಸಭಾ ಸ್ಪೀಕರ್​ ಸ್ಥಾನದ ಪಕ್ಕದಲ್ಲಿ ಅಳವಡಿಸಿದರು. ವಿಪಕ್ಷಗಳ ಬಹಿಷ್ಕಾರದ ನಡುವೆಯೂ ಹೊಸ ಸಂಸತ್​ ಭವನ ಉದ್ಘಾಟನೆಯಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಅವರನ್ನು ಅವಮಾನಿಸಲಾಗಿದೆ ಎಂದು ವಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net