ಬೆಂಗಳೂರು: ಭಾರತ-ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ (Test Series) ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium) ಆತಿಥ್ಯ ವಹಿಸಿದ್ದು, ಮೊದಲ ದಿನದಾಟ ಮಳೆಯಿಂದಾಗಿ ಸಂಪೂರ್ಣ ರದ್ದಾಗಿತ್ತು. ಎರಡನೇ ದಿನ ಆರಂಭವಾದ ಪಂದ್ಯದಲ್ಲಿ ಪ್ರವಾಸಿ ತಂಡವು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಆತಿಥೇಯರಿಗೆ ಭರ್ಜರಿ ಶಾಕ್ ನೀಡಿದ್ದಾರೆ. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಡುವೆಯೇ ಟೀಮ್ ಇಂಡಿಯಾಗೆ (Team India) ಇದೀಗ ಗಾಯದ ಸಮಸ್ಯೆ ಎದುರಾಗಿದ್ದು, ತಂಡವನ್ನು ಮತ್ತಷ್ಟು ಚಿಂತೆಗೆ ದೂಡಿದೆ.
ನ್ಯೂಜಿಲೆಂಡ್‌ನ (NewZealand) ಮೊದಲ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ರವೀಂದ್ರ ಜಡೇಜಾ (Ravindra Jadeja) ಬೌಲ್ ಮಾಡಿದ ಚೆಂಡು ಸ್ಪಿನ್ ಆಗಿ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರ ಮೊಣಕಾಲಿಗೆ ಬಡಿದಿದ್ದು, ಕೂಡಲೇ ಅವರು ಮೈದಾನದಿಂದ ಹೊರ ನಡೆದಿದ್ದಾರೆ. ಧ್ರುವ್ ಜುರೆಲ್ (Dhruv Jurel) ಅವರು ಆ ನಂತರ ವಿಕೆಟ್ ಕೀಪಿಂಗ್ ಹೊತ್ತುಕೊಂಡಿದ್ದು, ದಿನದಾಟದ ಅಂತ್ಯದವರೆಗೆ ವಿಕೆಟ್ ಕೀಪಿಂಗ್ ಮಾಡಿದರು.
ಇದನ್ನೂ ಓದಿ: ನಾನು ಹೇಳಿದ ಆ ಒಂದು ಕೆಲಸ ಮಾಡಿದ್ರೆ ಬಿಟ್ಟುಬಿಡ್ತೇನೆ; ಸಲ್ಮಾನ್ ಖಾನ್ಗೆ ಓಪನ್ ಆಫರ್ ಕೊಟ್ಟ Lawrence Bishnoi
ದಿನದಾಟದ ಬಳಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮ (Rohit Sharma), ದುರಾದೃಷ್ಟವಶಾತ್ ಚೆಂಡು ನೇರವಾಗಿ ಶಸ್ತ್ರಚಿಕಿತ್ಸೆ ಆಗಿದ್ದ ಮೊಣಕಾಲಿನ ಚಿಪ್ಪಿಗೆ ಬಡಿದಿದೆ. ಹಾಗಾಗಿ, ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಡ್ರೆಸಿಂಗ್ ರೂಮಿಗೆ ಕಳಿಸಲಾಯಿತು. ಚೆಂಡು ಬಿದ್ದ ಜಾಗಕ್ಕೆ ಶಸ್ತ್ರಚಿಕಿತ್ಸೆ ಆಗಿರುವುದರಿಂದ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಆ ನಿರ್ಧಾರ ಕೈಗೊಂಡೆವು. ಇಂದು ರಾತ್ರಿ ಅವರು ಚೇತರಿಸಿಕೊಳ್ಳಬಹುದು ಮತ್ತು ನಾವು ಅವರನ್ನು ನಾಳೆ ಮೈದಾನದಲ್ಲಿ ನೋಡುವ ನಿರೀಕ್ಷೆ ಇದೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Team India Captain Rohit Sharma) ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 25ನೇ ಟೆಸ್ಟ್ ಪಂದ್ಯ ಇದಾಗಿದ್ದು, ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರು. ಭಾರತ 31.2 ಓವರ್‌ಗಳಲ್ಲಿ 46 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ (Team India) ಐವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆದರು. ನ್ಯೂಜಿಲೆಂಡ್ (NewZealand) ಪರ ಮ್ಯಾಟ್ ಹೆನ್ರಿ ಐದು (15/5) ಮತ್ತು ವಿಲಿಯಂ ಒ ರೂರ್ಕಿ (22/4) ನಾಲ್ಕು ವಿಕೆಟ್ ಸಾಧನೆ ಮಾಡಿದರು. ಇನ್ನೂ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಮುನ್ನಡೆ ಪಡೆದಿರುವ ನ್ಯೂಜಿಲೆಂಡ್ ಗೆಲುವಿನತ್ತ ದಾಪುಗಾಲಿರಿಸಿದೆ.