

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನರ ನಡುವೆ ಕ್ಷುಲಕ ಕಾರಣಗಳಿಗೆ (Silly Reason) ಗಲಾಟೆಗಳಾಗುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆಗಳಾಗುತ್ತಿವೆ. ಇದೀಗ ಪಿಜ್ಜಾ (Pizza) ಹಂಚಿಕೆ ವೇಳೆ ನಡೆದ ಗಲಾಟೆಯಲ್ಲಿ ಕುಟುಂಬ ಸದಸ್ಯರ ನಡುವೆ ಗುಂಡಿನ ಕಾಳಗ ನಡೆದಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (NewDelhi) ನಡೆದಿದೆ.
ಅಕ್ಟೋಬರ್ 16ರ ರಾತ್ರಿ 11:30ರ ಸುಮಾರಿಗೆ ದೆಹಲಿಯ ಸೀಲಂಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ (Arrest). ಉಳಿದ ಆರೋಪಿಗಳು ತಲೆಮಾರಿಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿದ್ಧಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer), ಸೀಲಂಪುರ ನಿವಾಸಿಗಳಾದ ಜೀಶಾನ್ ಕುಟುಂಬದವರು ಬುಧವಾರ (ಅಕ್ಟೋಬರ್ 16) ರಾತ್ರಿ ಆನ್ಲೈನ್ನಲ್ಲಿ ಪಿಜ್ಜಾ (Pizza) ಆರ್ಡರ್ ಮಾಡಿ ತರಿಸಿಕೊಂಡಿದ್ದಾರೆ. ಪಾರ್ಸಲ್ ಬಂದ ಬಳಿಕ ಕುಟುಂಬದವರಿಗೆ ಹಂಚಲಾಗುತ್ತಿದ್ದ ಸಮಯದಲ್ಲಿ ಇಬ್ಬರು ಸಹೋದರರ ಪತ್ನಿಯರ ನಡುವೆ ಜಗಳ ಶುರುವಾಗಿದೆ. ಜೀಶಾನ್ (Zeeshan) ಹಾಗೂ ಅವರ ಸಹೋದರನ ಪತ್ನಿಯ ನಡುವೆ ಪಿಜ್ಜಾ (Pizza) ವಿಚಾರವಾಗಿ ಜಗಳ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಜೀಶಾನ್ ಅವರ ಪತ್ನಿ ತನ್ನ ಸಹೋದರರಿಗೆ ಕರೆ ಮಾಡಿ ಮನೆಯ ಬಳಿ ಬರುವಂತೆ ಹೇಳಿದ್ದಾರೆ.
ಸಹೋದರಿಗೆ ಕರೆಗೆ ಒಗ್ಗೊಟ್ಟು ನಾಲ್ವರು ಸಹೋದರರು ತಮ್ಮ ಸ್ನೇಹಿತರೊಂದಿಗೆ ಮನೆಯ ಬಳಿ ಬಂದಿದ್ದು, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಲುಪಿದೆ. ಈ ವೇಳೆ ಓರ್ವ ಜೀಶಾನ್ ಅವರ ಸಹೋದರನ ಪತ್ನಿಯ ಮೇಲೆ ಗುಂಡನ್ನು ಹಾರಿಸಿದ್ದು, ಗುಂಡು ಆಕೆಯ ಹೊಟ್ಟೆಗೆ ತಗುಲಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ. ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.