ರಾಜ್ಯದ ಬಡ ವಿದ್ಯಾರ್ಥಿನಿಗೆ 'ಸೆಂಚುರಿ ಸ್ಟಾರ್' ನೆರವು; ರಿಷಭ್ ಪಂತ್​ ಸಹಾಯಕ್ಕೆ ಕುಟುಂಬ ಆಭಾರಿ | Rishabh Pant

ವಿಜಯವಾಣಿ (18)
Published on

Rishabh Pant: ಟೀಮ್ ಇಂಡಿಯಾದ ಟೆಸ್ಟ್​ ತಂಡದ ಉಪನಾಯಕ ಹಾಗೂ ಸ್ಟಾರ್​ ಆಟಗಾರ ರಿಷಭ್ ಪಂತ್​, ವೃತ್ತಿಯಲ್ಲಿ ಮಾತ್ರ ಸ್ಟಾರ್​ ಆಗದೆ ಮತ್ತೊಬ್ಬರ ಜೀವನದಲ್ಲೂ ಸ್ಟಾರ್ ಆಗಿ ಮಿಂಚಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಮಬಲಗೊಳಿಸುವ ಮೂಲಕ ಕೊನೆ ಪಂದ್ಯ ಗೆದ್ದ ಟೀಮ್ ಇಂಡಿಯಾ ಪರ ಪಂತ್​ ಅತ್ಯುತ್ತಮ ಪ್ರದರ್ಶನ ನೀಡಿದರು. ದೇಶಕ್ಕಾಗಿ ಆಡುತ್ತಿರುವ ರಿಷಭ್, ತಮ್ಮ ಆಟದ ವೈಖರಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಸ್ತುತ, ಇಂಜುರಿಯಿಂದ ವಿಶ್ರಾಂತಿಯಲ್ಲಿರುವ ಪಂತ್​, ಕರ್ನಾಟಕದ ಬಾಗಲಕೋಟೆಯ ಬಡ ವಿದ್ಯಾರ್ಥಿಯ ಓದಿಗೆ ಸಹಾಯಹಸ್ತ ನೀಡಿರುವುದು ಸದ್ಯ ಹಲವರ ಮೆಚ್ಚುಗೆಗೆ ಕಾರಣವಾಗಿದೆ.

ಬಾಗಲಕೋಟೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರ್​ ಎಂಬ ಬಡ ವಿದ್ಯಾರ್ಥಿನಿಗೆ ರಿಷಭ್ ಪಂತ್​ ನೆರವು ನೀಡಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇ.83ರಷ್ಟು ಫಲಿತಾಂಶ ಪಡೆದ ಜ್ಯೋತಿ, ಬಿಸಿಎ ಪದವಿ ಪಡೆಯುವ ಹಂಬಲ ಹೊಂದಿದ್ದಳು. ಆದರೆ, ಕಾಲೇಜು ಪ್ರವೇಶ ಪಡೆಯಲು ಹಣದ ಕೊರತೆ ಎದುರಾದ ಹಿನ್ನಲೆ ಇದು ಆಸೆಯಾಗಿಯೇ ಉಳಿದಿತ್ತು. ಜ್ಯೋತಿಗೆ 40 ಸಾವಿರ ರೂ. ಪ್ರವೇಶದ ಶುಲ್ಕದ ಅಗತ್ಯವಿತ್ತು. ಕಡೆಗೂ ಈ ಹಣವನ್ನು ಪಂತ್​ ಕೊಟ್ಟಿರುವುದು ಅವರ ಕುಟುಂಬಸ್ಥರಲ್ಲಿ ಅತೀವ ಸಂತಸ ಮೂಡಿಸಿದೆ.

ಜಮಖಂಡಿ ತಾಲೂಕಿನ ಬಿಎಲ್​ಡಿಇ ಕಾಲೇಜಿನಲ್ಲಿ ಬಿಸಿಎ ಪದವಿ ಪ್ರವೇಶ ಪಡೆಯಲು ಜ್ಯೋತಿಗೆ 40 ಸಾವಿರ ರೂ. ಬೇಕಿತ್ತು. ಕಡು ಬಡವರಾದ ಕಾರಣ, ಈ ಹಣ ಹೊಂದಿಸುವುದು ಕುಟುಂಬಕ್ಕೆ ಕಷ್ಟಸಾಧ್ಯವಾಗಿತ್ತು. ವಿದ್ಯಾರ್ಥಿನಿ ಬಗ್ಗೆ ಮಾಹಿತಿ ಪಡೆದ ಗ್ರಾಮದ ಗುತ್ತಿಗೆದಾರ ಅನಿಲ್ ಹುಣಶಿಕಟ್ಟಿ, ಪಂತ್​ರ ಆಪ್ತ ಸ್ನೇಹಿತರಾದ ಅಕ್ಷಯ ನಾಯಕ್​ ಎಂಬುವರನ್ನು ಸಂಪರ್ಕಿಸಿ, ಪರಿಸ್ಥಿತಿ ವಿವರಿಸಿದ್ದರು. ಅಕ್ಷಯ್ ಮಾತಿನ ಮೇರೆಗೆ ಪಂತ್ ಕೂಡಲೇ 40,000 ರೂ. ಕೊಟ್ಟು, ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ.

ಯುವತಿ ಯಾವ ಊರಿನವಳು? ಏನು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ? ಎಂಬ ಮಾಹಿತಿಯನ್ನು ಹೆಚ್ಚು ಪರಿಶೀಲಿಸದೆ ತನ್ನ ಸ್ನೇಹಿತನ ಮಾತು ಕೇಳಿ, ಕಷ್ಟ ಎಂದವರಿಗೆ ಮಿಡಿದಿದ್ದು ಇದೀಗ ಹಲವರ ಮೆಚ್ಚುಗೆಗೆ ಕಾರಣವಾಗಿದೆ. ಕ್ರಿಕೆಟಿಗನ ಸಹಾಯವನ್ನು ಜ್ಯೋತಿ ಕುಟುಂಬಸ್ಥರು ಕೊಂಡಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ, "ರಿಷಭ್ ಪಂತ್​ ಅವರ ಸಹಾಯವನ್ನು ನಾನು ಮರೆಯುವಂತಿಲ್ಲ. ಚೆನ್ನಾಗಿ ಓದಿ, ಒಳ್ಳೆಯ ಅಂಕಗಳನ್ನು ಪಡೆಯುತ್ತೇನೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ತಿಳಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net