ಟೆಸ್ಟ್​ ಕ್ರಿಕೆಟ್​ನಲ್ಲಿ ಜೋ ರೂಟ್ ಮೈಲಿಗಲ್ಲು! ವಿಶ್ವ ದಾಖಲೆ ಮುರಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ | Joe Root

ವಿಜಯವಾಣಿ (16)
Published on

Joe Root: ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್​ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಓರ್ವ ಬೌಲರ್ ವಿರುದ್ಧ 600 ರನ್ ಗಳಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೂಟ್ ಭಾರತದ ಬೌಲರ್ ರವೀಂದ್ರ ಜಡೇಜಾ ವಿರುದ್ಧ ಈ ಸಾಧನೆಗೈದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ತೆಂಡೂಲ್ಕರ್-ಆಂಡರ್ಸನ್ ಟ್ರೋಫಿಯಲ್ಲಿ ಜೋ ಈ ವಿಶ್ವ ದಾಖಲೆ ಬರೆದಿದ್ದು, ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.

ರೂಟ್ ಇದುವರೆಗೆ ಜಡೇಜಾ ಅವರ ಬೌಲಿಂಗ್‌ನಲ್ಲಿ 602 ರನ್ ಗಳಿಸಿದ್ದಾರೆ. ವಿಶ್ವದ ಯಾವುದೇ ಬ್ಯಾಟರ್,​ ಒಬ್ಬ ಬೌಲರ್‌ ಎದುರು ಇಷ್ಟೊಂದು ರನ್ ಬಾರಿಸಿಲ್ಲ. ಈ ಪಟ್ಟಿಯಲ್ಲಿ ರೂಟ್ ಮೊದಲಿಗಿದ್ದರೆ, ಅವರ ನಂತರದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇದ್ದಾರೆ. ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್​ ವಿರುದ್ಧ ಸ್ಮಿತ್ 577 ರನ್ ದಾಖಲಿಸಿದ್ದಾರೆ.

ರೂಟ್ ಮತ್ತು ಸ್ಮಿತ್ ಬಳಿಕ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಇದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅವರ ಬೌಲಿಂಗ್‌ನಲ್ಲಿ ಕೊಹ್ಲಿ 573 ರನ್ ಬಾರಿಸಿದ್ದಾರೆ. ಈ ವಿಶ್ವ ದಾಖಲೆಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರೂಟ್​-ಜಡೇಜಾ ಅವರಿಬ್ಬರ ಪೈಪೋಟಿ ನಿಜಕ್ಕೂ ಸರಣಿಯನ್ನು ಮತ್ತಷ್ಟು ವಿಶೇಷವಾಗಿಸಿತು. ಜಡ್ಡು ಸ್ಪಿನ್‌ಗೆ ಬಾರಿಸಲು ಜೋ ಹೆಣಗಾಡಿದ್ದೂ ಇದೆ. ಅನುಕೂಲಕರವಾದ ಪಿಚ್‌ಗಳಲ್ಲಿ ಜಡೇಜಾ ಬೌಲಿಂಗ್ ಎದುರಿಸುವುದು ರೂಟ್‌ಗೆ ಭಾರೀ ತೊಂದರೆ ಕೊಟ್ಟಿತು ಎಂಬುದರಲ್ಲಿ ಎರಡನೇ ಮಾತಿಲ್ಲ.

ತಮ್ಮ ಕ್ರಿಕೆಟ್ ಕರಿಯರ್​ನಲ್ಲಿ ಜಡೇಜಾ ಒಟ್ಟು 9 ಬಾರಿ ರೂಟ್‌ರನ್ನು ಔಟ್ ಮಾಡಿದ್ದಾರೆ. ಹೀಗಾಗಿ, ಅತಿ ಹೆಚ್ಚು ಬಾರಿ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದ ಬೌಲರ್ ಎಂಬ ದಾಖಲೆಯನ್ನು ಜಡ್ಡು ಹೊಂದಿದ್ದಾರೆ. ಕೊನೆ ಪಂದ್ಯದಲ್ಲಿ ಸಿರಾಜ್​ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಸೇರಿದಂತೆ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಕಬಳಿಸಿದ ಮೊಹಮ್ಮದ್​ ಸಿರಾಜ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net