

Bank Account: ಬ್ಯಾಂಕ್ ಗ್ರಾಹಕರಿಗೆ ಇಂತಹ ವಿಷಯಗಳು ತಿಳಿದಿರಬೇಕು. ಡಿಜಿಟಲ್ ಯುಗದಲ್ಲಿರುವ ನಾವು, ಕುಳಿತ ಜಾಗದಿಂದಲೇ ಬ್ಯಾಂಕ್ಗೆ ಸಂಬಂಧಿಸಿದ ವಹಿವಾಟು, ವಿವರಗಳನ್ನು ಆಯಾ ಬ್ಯಾಂಕಿನ ಅಧಿಕೃತ ಆ್ಯಪ್ನಲ್ಲಿ ಪರಿಶೀಲಿಸಿ, ಮಾಹಿತಿ ಪಡೆಯಬಹುದಾಗಿದೆ. ತೀರ ಅಗತ್ಯಬಿತ್ತು ಎಂದಾದರೆ ಮಾತ್ರ ನೇರವಾಗಿ ಬ್ಯಾಂಕ್ಗೆ ತೆರಳಿ ಸರಿಪಡಿಸಿಕೊಳ್ಳುತ್ತೇವೆ ಅಥವಾ ಹೆಚ್ಚಿನ ಮಾಹಿತಿ ಕಲೆಹಾಕುತ್ತೇವೆ.
ಈಗ ಬ್ಯಾಂಕ್ ನಿಯಮಗಳು ಇನ್ನಷ್ಟು ಬಲವಾಗಿವೆ ಹಾಗೂ ಬದಲಾಗಿವೆ. ಇತ್ತೀಚಿನ ದಿನಗಳಲ್ಲಿ, ಬ್ಯಾಂಕ್ ಖಾತೆ ಹೊಂದಿರುವುದು ತೀರ ಸಾಮಾನ್ಯವಾಗಿದೆ. ಬ್ಯಾಂಕ್ ಖಾತೆ ಇಲ್ಲದ ವ್ಯಕ್ತಿಗಳೇ ಬಹಳ ಕಡಿಮೆ. ಕಾರಣ, ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರು ತಮ್ಮ ಹೆಸರಿನಲ್ಲೊಂದು ಖಾತೆ ಹೊಂದಿದ್ದಾರೆ. ಬ್ಯಾಂಕ್ ಖಾತೆ ಮಾಡಿಸುವುದು ಮಾತ್ರವಲ್ಲ, ಆ ಖಾತೆಯಲ್ಲಿ ನಾಮಿನಿ ಕೂಡ ಇರಬೇಕು ಎಂಬುದು ಬಹುಮುಖ್ಯ. ಆದರೆ, ತುಂಬ ಜನರಿಗೆ ಈ ನಾಮಿನಿ ವಿಚಾರದ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ.
ಒಬ್ಬ ವ್ಯಕ್ತಿಯು ಬ್ಯಾಂಕ್ ಖಾತೆಯನ್ನು ತೆರೆದಾಗ, ನಾಮಿನಿಯ ಹೆಸರನ್ನು ಅದೇ ಸಮಯದಲ್ಲಿ ಒದಗಿಸಬೇಕು. ಇದು ನೀಡಲಾದ ಅರ್ಜಿಯಲ್ಲಿರುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಬೇಕಷ್ಟೇ. ನಾಮಿನಿ ಯಾಕೆಂದರೆ, ಖಾತೆದಾರನ ಸಾವಿನ ಬಳಿಕ ಆ ಖಾತೆಯಲ್ಲಿರುವ ಹಣ ನಾಮಿನಿ ವ್ಯಕ್ತಿಗೆ ಸೇರುತ್ತದೆ. ಖಾತೆ ತೆರೆಯುವ ಸಮಯದಲ್ಲಿ ಖಾತೆದಾರನು ನಾಮಿನಿಯನ್ನು ಆಯ್ಕೆ ಮಾಡುವುದು ಮುಖ್ಯ. ಅಕಸ್ಮಾತ್, ಅಪರೂಪದ ಪ್ರಕರಣದಲ್ಲಿ ಖಾತೆದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟರೆ ಖಾತೆಯಲ್ಲಿರುವ ಹಣಕ್ಕೆ ಯಾರು ಅರ್ಹರು? ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಉತ್ತರವೂ ಇದೆ.
ನಾಮಿನಿ ಮತ್ತು ಖಾತೆದಾರ ಇಬ್ಬರೂ ಸತ್ತರೆ, ಕಾನೂನುಬದ್ಧ ಉತ್ತರಾಧಿಕಾರಿ ಖಾತೆಯಲ್ಲಿರುವ ಹಣಕ್ಕೆ ಅರ್ಹರಾಗಿರುತ್ತಾರೆ. ಈ ಕಾನೂನುಬದ್ಧ ಉತ್ತರಾಧಿಕಾರಿ, ಖಾತೆದಾರರ ಕುಟುಂಬದ ಸದಸ್ಯರಾಗಿರಬೇಕು. ಗಂಡ, ಹೆಂಡತಿ, ಪೋಷಕರು, ಮಕ್ಕಳು ಅಥವಾ ಒಡಹುಟ್ಟಿದವರು ಯಾರು ಬೇಕಾದರೂ ಆಗಿರಬಹುದು. ಖಾತೆದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟರೆ, ಸಂಬಂಧಪಟ್ಟ ಕುಟುಂಬ ಸದಸ್ಯರು ಈ ಬಗ್ಗೆ ಆಯಾ ಬ್ಯಾಂಕಿಗೆ ಮಾಹಿತಿ ನೀಡಬೇಕು. ಅಲ್ಲದೆ, ಮರಣ ಪ್ರಮಾಣಪತ್ರವನ್ನು ಲಗತ್ತಿಸಬೇಕು. ಕುಟುಂಬ ಸದಸ್ಯರ ಗುರುತು ಸ್ಪಷ್ಟವಾದ ಬಳಿಕವೇ ಮೃತನ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
ಹೆಚ್ಚಿನ ಸಂದರ್ಭಗಳಲ್ಲಿ, ಬ್ಯಾಂಕ್ ಕುಟುಂಬದ ಸದಸ್ಯರಿಂದ ಕಾನೂನುಬದ್ಧ ಉತ್ತರಾಧಿಕಾರಿಯ ಪ್ರಮಾಣಪತ್ರವನ್ನು ಸಹ ಕೇಳಬಹುದು. ಅದೇ ಸಮಯದಲ್ಲಿ, ಖಾತೆಯಲ್ಲಿ ಬಹಳಷ್ಟು ಹಣವಿದ್ದರೆ, ನ್ಯಾಯಾಲಯದಿಂದ ಪಡೆದ ಉತ್ತರಾಧಿಕಾರ ಪ್ರಮಾಣಪತ್ರವನ್ನು ಬ್ಯಾಂಕಿಗೆ ಸಲ್ಲಿಸಬೇಕು. ಭಾರತೀಯ ಉತ್ತರಾಧಿಕಾರ ಕಾಯ್ದೆಯ ಪ್ರಕಾರ, ಬ್ಯಾಂಕ್ ಈ ಹಣವನ್ನು ಕುಟುಂಬ ಸದಸ್ಯರಿಗೆ ಮಾತ್ರ ಒದಗಿಸುತ್ತದೆ. ಖಾತೆದಾರರಿಗೆ ಆಸ್ತಿಯಿದ್ದರೆ, ಆ ಆಸ್ತಿಯ ಪ್ರಕಾರ ಬ್ಯಾಂಕ್ ಆಯಾ ಕುಟುಂಬ ಸದಸ್ಯರಿಗೆ ಹಣವನ್ನು ಒದಗಿಸುತ್ತದೆ,(ಏಜೆನ್ಸೀಸ್).