ಗಣೇಶ್ ಮಾವಂಜಿ ಸುಳ್ಯ
ಆ ಶಾಲೆಯ ಮೈದಾನದ ಒಂದು ಮೂಲೆಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತಿತ್ತು. ಆದರೆ ಇದೀಗ ಅದೇ ಜಾಗದಲ್ಲಿ ತೆನೆಹೊತ್ತ ಭತ್ತದ ಪೈರುಗಳು ಬೆಳೆದು ನಳನಳಿಸುತ್ತಿವೆ. ಅಕ್ಕಿ ಎಲ್ಲಿಂದ ಬರುತ್ತದೆ ಎಂಬುದನ್ನು ಆ ಶಾಲೆಯ ಮಕ್ಕಳು ಸ್ವತಃ ತಾವೇ ಕಂಡುಕೊಂಡು ಭತ್ತದ ಕಟಾವು, ತೆನೆಯಿಂದ ಭತ್ತ ಬೇರ್ಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಇದು ನಡೆದದ್ದು ನಗರದ ಸ್ನೇಹ ಶಾಲೆಯಲ್ಲಿ. ಸದಾ ಒಂದಿಲ್ಲೊಂದು ಹೊಸ ಪ್ರಯೋಗದಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳ ಮನದಲ್ಲಿ ವೈಜ್ಞಾನಿಕ ಪರಿಕಲ್ಪನೆ, ಹಳೇ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ತಿಳಿಸಿಕೊಡುವ ಈ ಶಾಲೆಯಲ್ಲಿ ಈ ಬಾರಿ ಭತ್ತದ ಬೆಳೆ ಬೆಳೆಯುವ ಪ್ರಾತ್ಯಕ್ಷಿಕೆ ಮಕ್ಕಳಿಗೆ ತಿಳಿಸಿಕೊಡಲಾಯಿತು.
ಮಕ್ಕಳ ಬೌದ್ಧಿಕಮಟ್ಟ ಹಾಗೂ ಪ್ರಾಯೋಗಿಕ ಪರಿಕಲ್ಪನೆ ಹೆಚ್ಚಿಸಲು ಈ ವಿನೂತನ ಪ್ರಯೋಗಕ್ಕೆ ಮೊದಲಾಗಿ ಅಡಿ ಇಟ್ಟವರು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ. ಪತ್ನಿ, ಸಂಸ್ಥೆಯ ಮುಖ್ಯಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಹಕಾರ ನೀಡಿದ ಪರಿಣಾಮ ನೀರು ನಿಲ್ಲುವ ಗದ್ದೆಯಲ್ಲಿ ಭತ್ತದ ಪೈರು ತೆನೆ ಹೊತ್ತು ನಳನಳಿಸುವಂತಾಯಿತು.
ಜುಲೈ 10ರಂದು ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಗದ್ದೆ ಹದ ಮಾಡಿ ಪೈರು ನಾಟಿ ಮಾಡಲಾಗಿತ್ತು. ಇದೀಗ 110 ದಿನಗಳು ಕಳೆದು ಒಂದು ಗದ್ದೆಯ ಪೈರನ್ನು ಕಟಾವು ಮಾಡಲಾಗಿದೆ. ಮತ್ತೊಂದು ಗದ್ದೆಯ ಪೈರು ದೀಪಾವಳಿಯ ಬಳಿಕ ಕಟಾವು ಮಾಡಲಾಗುತ್ತದೆ.
ಹಾಲಿಟ್ಟು ತೆನೆಪೂಜೆ
ಮೊದಲ ಗದ್ದೆಯ ಕಟಾವು ಮಾಡುವ ಮುನ್ನ ದಾಮ್ಲೆ ದಂಪತಿ ನೇತೃತ್ವದಲ್ಲಿ ಹಾಲನ್ನಿಟ್ಟು ತೆನೆಪೂಜೆ ಮಾಡಲಾಯಿತು. ಬಳಿಕ ಕೊಯ್ದ ಪೈರನ್ನು ಸೂಡಿ ಕಟ್ಟಿ ಬಳಿಕ ಪಡಿಮಂಚದಲ್ಲಿ ಪೈರನ್ನು ಹೊಡೆದು ಭತ್ತ ಬೇರ್ಪಡಿಸಲಾಯಿತು. ಈ ಕಾಯಕದಲ್ಲಿ ಸಂಸ್ಥೆಯ ಮಕ್ಕಳ ಜತೆಗೆ ಶಿಕ್ಷಕ, ಶಿಕ್ಷಕಿಯರೂ ಜತೆಯಾದ ಪರಿಣಾಮ ಅಕ್ಕಿ ಹುಟ್ಟುವ ಸೌಂದರ್ಯವನ್ನು ಎಲ್ಲರೂ ಅರಿಯುವಂತಾಯಿತು. ಆಲೆಟ್ಟಿ ಗುಂಡ್ಯದ ಕೃಷಿಕ ನಿತ್ಯಾನಂದ ಮತ್ತು ಪತ್ನಿ ಪ್ರತಿಮಾ ಕಟಾವಿನ ಕೆಲಸಕ್ಕೆ ಮಾರ್ಗದರ್ಶನ ನೀಡಿದರು.
ಪ್ರಾಯೋಗಿಕ ಮಾಹಿತಿ ನೀಡಿದ ಹೆಮ್ಮೆ
ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಭತ್ತ ಪ್ರಧಾನ ಕೃಷಿಯಾಗಿದ್ದರೂ ಇದೀಗ ಅದು ನಶಿಸಿ ಹೋಗಿದೆ. ಮಕ್ಕಳಿಗೆ ಅಕ್ಕಿ ಹೇಗೆ, ಎಲ್ಲಿಂದ ಉತ್ಪನ್ನ ಆಗುತ್ತದೆ ಎಂಬ ಅರಿವೇ ಇರುವುದಿಲ್ಲ. ಅದಕ್ಕಾಗಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಿ ಮಕ್ಕಳನ್ನು ಕೃಷಿಯಲ್ಲಿ ತೊಡಗಿಸುವಂತೆ ಮಾಡುವಲ್ಲಿ ಸಫಲರಾಗಿದ್ದೇವೆ. ಯೋಚನೆ, ಯೋಜನೆಯಾಗಿ ಬದಲಾಗಿ ಇದೀಗ ನಮ್ಮ ಮಕ್ಕಳಿಗೆ ಭತ್ತ ಹಾಗೂ ಅಕ್ಕಿ ಉತ್ಪಾದನೆ ಮಾಡುವ ಬಗೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟ ಬಗ್ಗೆ ನಮಗೆ ಹೆಮ್ಮೆ ಇದೆ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ.
ಸಿದ್ಧ ವಿಧಾನಶಾಸ್ತ್ರ ಇಲ್ಲದ ಹೆಚ್ಚುಗಾರಿಕೆ : ಡಾ.ಪುಂಡಿಕಾಯಿ ಗಣಪಯ್ಯ ಭಟ್ ವಿಶ್ಲೇಷಣೆ