

ಬಂಟ್ವಾಳ: ಸಿದ್ಧ ವಿಧಾನಶಾಸ್ತ್ರ ಇಲ್ಲದೆ ರಾಜಮಣಿ ರಾಮಕುಂಜ ಅವರು ಸಂಶೋಧನಾ ಕೃತಿ ಬರೆದಿರುವುದು ಪುಸ್ತಕದ ಹೆಚ್ಚುಗಾರಿಕೆ. ಪುಸ್ತಕದ ಬಾಹ್ಯ ವ್ಯಕಿತ್ವದಷ್ಟೇ ಸುಂದರವಾಗಿ ಅಂತರಂಗವೂ ಮೂಡಿಬಂದಿದೆ. ಅವರಲ್ಲಿ ಇತಿಹಾಸ ಪ್ರಜ್ಞೆ ಇದೆ. ಅವರೊಬ್ಬ ಇತಿಹಾಸಕಾರ ಎಂದು ಮೂಡುಬಿದಿರೆ ಧವಳ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು.
ಸರಿದಂತರ ಪ್ರಕಾಶನ ಮೊಡಂಕಾಪು, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಜಂಟಿ ಆಶ್ರಯದಲ್ಲಿ, ಬಿ.ಸಿ.ರೋಡ್ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ, ನಿವೃತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ ಅವರ ಸಂಶೋಧನಾ ಗ್ರಂಥ ಬಂಟ್ವಾಳದ ಸಾಂಸ್ಕೃತಿಕ ಪರಿಸರ ಕೃತಿ ಇತ್ತೀಚೆಗೆ ಅನಾವರಣಗೊಳಿಸಿ ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ, ವಿದ್ವತ್ತು ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ಬರುವಂತದ್ದು. ರಾಜಮಣಿ ರಾಮಕುಂಜ ಈ ಕಾರ್ಯದಲ್ಲಿ ಸಾಫಲ್ಯ ಕಂಡಿದ್ದಾರೆ ಎಂದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು. ಕೃತಿ ರಚನೆಕಾರ ರಾಜಮಣಿ ರಾಮಕುಂಜ ಸ್ವಾಗತಿಸಿದರು. ಮಧುರಾ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.