

ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಬಗೆದಷ್ಟು ಆಳಕ್ಕಿಳಿಯುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಬೆಳವಣಿಗೆಗಲಾಗುತ್ತಿದ್ದು, ಹೊಸ ಮುಖಗಳ ಎಂಟ್ರಿಯೂ ಆಗುತ್ತಿದೆ. ಇಷ್ಟು ದಿನ ಇಲ್ಲದ ರಾಗಿಣಿ ಮಾಜಿ ಪ್ರಿಯಕರ ಶಿವಪ್ರಕಾಶ್ ಹೆಸರು ನಿನ್ನೆಯಷ್ಟೇ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಇದೀಗ ಇದೇ ಜಾಲ ಬಾಲಿವುಡ್ ಜತೆಗೂ ಸಂಪರ್ಕದಲ್ಲಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಹೌದು, ಬಾಲಿವುಡ್ನಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಇದೀಗ ಡ್ರಗ್ ಮಾಫಿಯಾದ ಕರಾಳ ಮುಖವನ್ನು ಅನಾವರಣ ಮಾಡಿದೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಡ್ರಗ್ ಜಾಲದಲ್ಲಿ ಸಿಲುಕಿದ್ದಾರೆ. ಇದೀಗ ಬಾಲಿವುಡ್ನ ಕೆಲ ಸೆಲೆಬ್ರಿಟಿಗಳಿಗೆ ಡ್ರಗ್ ರವಾನೆ ಮಾಡುತ್ತಿದ್ದ ತಂಡವೇ, ಸಂಪಕರ್ದಲ್ಲಿದೆ ಎಂಬ ಮಾತುಗಳು ಎನ್ಸಿಬಿ ತಂಡದಿಂದ ಕೇಳಿಬಂದಿದ್ದು, ಎರಡೂ ಪ್ರಕರಣಗಳನ್ನು ಹೋಲಿಕೆ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.
ರಿಯಾ ಮತ್ತು ಸಹೋದರ ಶೋವಿಕ್ಗೆ ಡ್ರಗ್ ನೀಡುತ್ತಿದ್ದ, ತಂಡವೇ ಸ್ಯಾಂಡಲ್ವುಡ್ಗೂ ಡ್ರಗ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಹಾಗಾದರೆ ರಾಗಿಣಿಯೂ ಈ ರಿಯಾ ಜತೆ ನಂಟು ಹೊಂದಿದ್ದರೇ ಎಂಬುದಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಸದ್ಯದ ಪ್ರಕರಣದ ಹಾದಿಯನ್ನು ನೋಡಿದರೆ ರಾಗಿಣಿಗೆ ರಿಯಾ ಜತೆ ಪರೋಕ್ಷವಾಗಿ ನಂಟಿತ್ತು ಎಂಬ ಸುದ್ದಿ ಹರಿದಾಡುತ್ತಿದೆ.
ಈಗಾಗಲೇ ರಾಗಿಣಿಯನ್ನು ಬಂಧಿಸಿರುವ ಎನ್ಸಿಬಿ ತಂಡ, ತನಿಖೆ ಮುಂದುವರಿಸಿದೆ. (ಏಜೆನ್ಸೀಸ್)