ಜೈಲಿನಲ್ಲಿ ಡಾನ್ಸ್​ ಮಾಡಿದ್ದರಂತೆ ಈ ಬಾಲಿವುಡ್​ ನಟಿ! ಯಾಕೆ ಗೊತ್ತಾ?

Rhea Chakraborthy (7)
Published on

ಬಾಲಿವುಡ್ ನಟಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ 2020ರಲ್ಲಿ, ಅವರ ಗೆಳತಿ ನಟಿ ರಿಯಾ ವಕ್ರವರ್ತಿಯನ್ನು ಬಂಧಿಸಲಾಗಿತ್ತು. ಅವರನ್ನು ಮುಂಬೈನ ಬೈಕುಲಾ ಜೈಲಿನಲ್ಲಿ ಇಡಲಾಗಿತ್ತು. ಸರಿ ಸುಮಾರು ಆರು ವಾರಗಳ ಜೈಲುವಾಸದ ಬಳಿಕ ಅವರನ್ನು ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ, ಇದುವರೆಗೂ ರಿಯಾ ಬಾಯ್‌ಫ್ರೆಂಡ್​ ಸುಶಾಂತ್ ಕುರಿತಾಗಲಿ, ಜೈಲುವಾಸದ ದಿನಗಳ ಬಗ್ಗೆಯಾಗಲಿ ಮಾತನಾಡಿರಲಿಲ್ಲ. ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಿಯಾ ಮೌನ ಮುರಿದಿದ್ದಾರೆ.

‘ಜೈಲಿನಲ್ಲಿ ನಾವು ಸಂಖ್ಯೆಯಷ್ಟೇ. ಅವರು ಹೇಳಿದಾಗ ತಿನ್ನಬೇಕು, ಏಳಬೇಕು, ಮಲಗಬೇಕು. ನಮಗೆ ಸ್ವಾತಂತ್ರ್ಯವಿರುವುದಿಲ್ಲ. ಎಷ್ಟೋ ನೋವುಂಡ ಹೆಣ್ಣುಮಕ್ಕಳೂ ಖುಷಿಯಾಗಿರುತ್ತಿದ್ದರು. ಅವರನ್ನು ನೋಡಿ ನಾನೂ ಸಾಕಷ್ಟು ಕಲಿತಿದ್ದೇನೆ. ನನಗೆ ಬೇಲ್ ಸಿಕ್ಕ ದಿನ ಡಾನ್ಸ್ ಮಾಡುವೆ ಎಂದು ಹೇಳಿದ್ದೆ. ಅದರಂತೆ ಬೇಲ್ ಸಿಕ್ಕಾಗ ಎಲ್ಲರೂ ಚೆನ್ನಾಗಿ ಕುಣಿದು ಕುಪ್ಪಳಿಸಿದ್ದೆವು. ನೆಲದ ಮೇಲೆ ಉರುಳಾಡುತ್ತಾ ನಾಗಿನ್ ಡಾನ್ಸ್ ಕೂಡ ಮಾಡಿದ್ದೆವು’ ಎಂದು ಹೇಳಿಕೊಂಡಿದ್ದಾರೆ ರಿಯಾ.

ಜತೆಗೆ ಸುಶಾಂತ್ ಅಕಾಲಿಕ ಮರಣದ ಬಗ್ಗೆ ‘ನನ್ನು ಮಾಟಗಾತಿ ಎಂದರು. ನಾನು ಸುಶಾಂತ್‌ನನ್ನು ಕಂಟ್ರೋಲ್ ಮಾಡುತ್ತಿದ್ದೆ ಎಂದರು. ಒಂದು ಸಣ್ಣ ಪಟ್ಟಣದಿಂದ ಬಂದು, ತಾನಾಗಿಯೇ ಬಾಲಿವುಡ್‌ನಲ್ಲಿ ನೆಲೆಯೂರಿದ ಆತನನ್ನು ನಾನು ಕಂಟ್ರೋಲ್ ಮಾಡಲು ಹೇಗೆ ಸಾಧ್ಯ? ಆತನಿಗೆ ಮಾನಸಿಕ ಸಮಸ್ಯೆ ಇತ್ತು’ ಎಂದು ರಿಯಾ ಹೇಳಿದ್ದು, ಸದ್ಯ ಜಾಲತಾಣದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net