ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಉಡುಗೊರೆ ; ನಟ ದರ್ಶನ್​ಗೆ ಧ್ರುವ ಮೂರು ಪ್ರಶ್ನೆಗಳು!

Dhruva (4)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಧ್ರುವ ಸರ್ಜಾ ಶುಕ್ರವಾರ (ಅ. 6) 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಣ್ಣ ಚಿರು ಅಕಾಲಿಕ ಮರಣದಿಂದ ಕಳೆದ ಮೂರು ವರ್ಷಗಳಿಂದ ಧ್ರುವ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಚಿರು ಅಭಿನಯದ ‘ರಾಜಮಾರ್ತಾಂಡ’ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅದೇ ಸಂಭ್ರಮದಲ್ಲಿ ಧ್ರುವ ಅಭಿಮಾನಿಗಳ ಜತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ‘ಮೂರು ವರ್ಷಗಳಿಂದ ಯಾಕೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಅಂತ ಎಲ್ಲರಿಗೂ ಗೊತ್ತಿದೆ. ಈ ಬಾರಿ ಅಣ್ಣನ ಸಿನಿಮಾ ‘ರಾಜಮಾರ್ತಾಂಡ’ ರಿಲೀಸ್ ಆಗಿದೆ. ಮನೆಯವರೆಲ್ಲರೂ ತುಂಬ ದಿನಗಳ ಬಳಿಕ ಥಿಯೇಟರ್‌ಗಳಲ್ಲಿ ಅಣ್ಣನ ಸಿನಿಮಾ ನೋಡುತ್ತಿದ್ದೇವೆ. ಅದೇ ಖುಷಿ. ಜತೆಗೆ ಇಷ್ಟೊಂದು ಅಭಿಮಾನಿಗಳು ಬಂದು ವಿಶ್ ಮಾಡುತ್ತಿರುವುದನ್ನು ನೋಡಿದರೆ ನಾನೊಬ್ಬ ಅದೃಷ್ಟವಂತ ಅಂತನ್ನಿಸುತ್ತಿದೆ’ ಎಂದು ಧ್ರುವ ಸಂತಸ ಹಂಚಿಕೊಂಡಿದ್ದಾರೆ.

ಮೂರು ಚಿತ್ರಗಳು ಘೋಷಣೆ
ಧ್ರುವ ಸರ್ಜಾ ಈಗಾಗಲೇ ಪ್ರೇಮ್ ನಿರ್ದೇಶನದಲ್ಲಿ ‘ಕೆಡಿ’ ಹಾಗೂ ಎ.ಪಿ. ಅರ್ಜುನ್ ನಿರ್ದೇಶನದಲ್ಲಿ ‘ಮಾರ್ಟಿನ್’ ಸಿನಿಮಾಗಳಲ್ಲಿ ನಟಿಸುತ್ತಿರುವುದು ಗೊತ್ತಿದೆ. ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಮೂಡಿಬರುತ್ತಿದ್ದು, ನಾಯಕನ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಜತೆಗೆ ಎ.ಪಿ. ಅರ್ಜುನ್ ನಿರ್ಮಾಣದಲ್ಲಿ ಒಂದು ಚಿತ್ರ, ‘ಮಾರ್ಟಿನ್’ ನಿರ್ಮಾಪಕ ಉದಯ್ ಮೆಹ್ತಾ ಅವರ ‘ರೈನೋ’ ಹಾಗೂ ‘ಪೊಗರು’ ನಿರ್ಮಾಪಕ ಬಿ.ಕೆ. ಗಂಗಾಧರ್ ಕೂಡ ಹೊಸ ಸಿನಿಮಾ ಘೋಷಿಸಿದ್ದಾರೆ.

ದರ್ಶನ್‌ಗೆ ಮೂರು ಪ್ರಶ್ನೆಗಳು!
ದರ್ಶನ್ ಮತ್ತು ಧ್ರುವ ನಡವೆ ಬಿರುಕು ಮೂಡಿದೆಯಾ? ಧ್ರುವ ಮಾತುಗಳು ಇಂತಹ ಪ್ರಶ್ನೆಗೆ ಕಾರಣವಾಗಿದೆ. ‘ದರ್ಶನ್ ಸರ್ ಸೀನಿಯರ್ ನಟ. ಅವರು ನಮ್ಮ ಮುಂದೆ ಇರಲಿ, ಇಲ್ಲದಿರಲಿ ಮರ್ಯಾದೆ ಕೊಟ್ಟೇ ಕೊಡುತ್ತೇವೆ. ನಮ್ಮ ಚಿತ್ರಕ್ಕೆ ಅವರು ಡಬ್ಬಿಂಗ್ ಮಾಡಿಕೊಟ್ಟಿರುವುದನ್ನು ಯಾವತ್ತೂ ಮರೆಯುವುದಿಲ್ಲ. ಆದರೆ, ಅವರ ಬಳಿ ಕೆಲವು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೇನೆ. ಅದಕ್ಕೆ ಸ್ಪಷ್ಟತೆ ಸಿಗದೆ ಮನಸ್ಸಿನಲ್ಲೊಂದು, ಹೊರಗೊಂದು ಹೇಳಿಕೊಂಡು ನಾಟಕ ಮಾಡುವ ಅವಶ್ಯಕತೆ ನನಗಿಲ್ಲ. ನನಗೂ ಸ್ವಾಭಿಮಾನವಿದೆ. ಕೆಲವರು ನಮ್ಮ ನಡುವೆಯೇ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ಈ ಕೆಲಸ ಮಾಡಬೇಡಿ ಎಂದು ಹೇಳಲು ಇಷ್ಟಪಡುತ್ತೇನೆ’ ಎಂದು ಖಾರವಾಗಿ ನುಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net