

RG Kar Student: ಕಳೆದ ವರ್ಷ ಯುವ ವೈದ್ಯೆಯ ಭೀಕರ ಹತ್ಯೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸುದ್ದಿಯಾಗಿದ್ದ ಕೋಲ್ಕತದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಕಾಲೇಜಿನಲ್ಲಿ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಆಗಿದ್ದ ಅನಿಂದಿತಾ ಸೊರೆನ್, ಶುಕ್ರವಾರ (ಸೆ.12) ರಾತ್ರಿ ಹಠಾತ್ ಅಸ್ವಸ್ಥಗೊಂಡು, ನಿಗೂಢವಾಗಿ ಸಾವನ್ನಪ್ಪಿದ ಘಟನೆ ಸದ್ಯ ಆಕೆಯ ಹೆತ್ತವರನ್ನು ಕಂಗಾಲಾಗಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಗೆಳೆಯ ಮಾಲ್ಡಾ ವೈದ್ಯಕೀಯ ಕಾಲೇಜಿನಲ್ಲಿ ಜೂನಿಯರ್ ವೈದ್ಯ ಉಜ್ವಲ್ ಸೊರೆನ್ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಪ್ರಕಾರ, ದಕ್ಷಿಣ ದಿನಜ್‌ಪುರ ಜಿಲ್ಲೆಯ ನಿವಾಸಿ ಅನಿಂದಿತಾ, ಪ್ರಿಯಕರ ಎಂದು ಹೇಳಲ್ಪಟ್ಟ ಉಜ್ವಲ್ನನ್ನು ಭೇಟಿಯಾಗಲು ತೆರಳಿದ್ದಳು. ಈ ವೇಳೆ ಹಠಾತ್ ಕುಸಿದುಬಿದ್ದ ಯುವತಿ, ಹೆಚ್ಚಿನ ಚಿಕಿತ್ಸೆಗಾಗಿ ಮಾಲ್ಡಾದ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಳು. ಆದರೆ, ಅವಳ ಸ್ಥಿತಿ ತೀರ ಹದಗೆಟ್ಟಿತು. ತಕ್ಷಣವೇ, ಕೋಲ್ಕತ್ತಾ ಆಸ್ಪತ್ರೆಗೆ ಸ್ಥಳಾಂತರಿಸುವಾಗ ಮಾರ್ಗ ಮಧ್ಯೆ ಅನಿಂದಿತಾ ಸಾವನ್ನಪ್ಪಿದ್ದಾಳೆ.
ಮಗಳ ದುರಂತ ಅಂತ್ಯಕ್ಕೆ ಕಂಬನಿ ಮಿಡಿದ ಅನಿಂದಿತಾ ತಾಯಿ ತಾಯಿ ಅಲ್ಪನಾ ತುಡು, ಉಜ್ವಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 'ಪಿಟಿಐ' ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಉಜ್ವಲ್ ತಮ್ಮ ಮಗಳಿಗೆ ವಿಷ ಉಣಿಸಿ, ಕೊಲೆಗೈದಿದ್ದಾನೆ. ಅವಳನ್ನು ಮಾಲ್ಡಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಅಲ್ಲಿ ಪುತ್ರಿಗೆ ಸೂಕ್ತವಾದ ಚಿಕಿತ್ಸೆ ಸಿಗಲಿಲ್ಲ ಎಂದು ಅನಿಂದಿತಾ ತಾಯಿ ಗಂಭೀರವಾಗಿ ಆರೋಪಿಸಿದ್ದಾರೆ.
"ಪುತ್ರಿಯ ಬಾಯಿಂದ ನೊರೆ ಬರುತ್ತಿದೆ ಎಂದು ನಮಗೆ ತಿಳಿಸಿದರು. ಹೆಚ್ಚಿನ ಹಾಗೂ ತುರ್ತು ಚಿಕಿತ್ಸೆಗೆಂದು ಆಕೆಯನ್ನು ಕೋಲ್ಕತ್ತಾಗೆ ಕರೆದೊಯ್ಯುವಾಗ, ಸುಜಾಪುರದ ಬಳಿ ಮೃತಪಟ್ಟಳು. ಮಗಳ ಸಾವಿನಿಂದ ತುಂಬಲಾರದ ನಷ್ಟವಾಗಿದೆ. ಈ ಪ್ರಕರಣದಲ್ಲಿ ನಮಗೆ ನ್ಯಾಯ ಮತ್ತು ಸಂಪೂರ್ಣ ತನಿಖೆ ಬೇಕು" ಎಂದು ಒತ್ತಾಯಿಸಿದ್ದಾರೆ.
ಮೃತ ಅನಿಂದಿತಾ ಮತ್ತು ಉಜ್ವಲ್ ಸುಮಾರು ಒಂದು ವರ್ಷದಿಂದ ಸಂಬಂಧದಲ್ಲಿದ್ದರು. ಮತ್ತು ದೇವಾಲಯದಲ್ಲಿ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದರು. ಆದರೆ, ಉಜ್ವಲ್ಗೆ ಈ ಮದುವೆ ಸಂಬಂಧದಲ್ಲಿ ಮುಂದುವರಿಯಲು ಇಷ್ಟವಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸರು ಉಜ್ವಲ್ನನ್ನು ಮಾಲ್ಡಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ತನಿಖಾಧಿಕಾರಿಗಳು ವಿಚಾರಣೆಗಾಗಿ ಏಳು ದಿನಗಳ ಕಸ್ಟಡಿಗೆ ಕೋರಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ಗಳು ಸೇರಿದಂತೆ ಸೆಕ್ಷನ್ 69, 89, 123, 103(1), ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯ ಸಾವಿಗೆ ಕಾರಣ ಏನು ಎಂಬುದು ಶವಪರೀಕ್ಷೆಯ ವರದಿ ನಂತರ ಸ್ಪಷ್ಟವಾಗಿ ತಿಳಿಯಲಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).