ನಿಯಮ ಉಲ್ಲಂಘಿಸಿದ್ರೆ 7 ಲಕ್ಷ ರೂ. ದಂಡ! ಜೈಲು ಶಿಕ್ಷೆ; IND vs PAK ಪಂದ್ಯಕ್ಕೆ ಭಾರೀ ಭದ್ರತೆ, ಖಾಕಿ ಖಡಕ್​ ಎಚ್ಚರ

Untitled design (4)
Published on

IND vs PAK: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಆರಂಭಗೊಂಡಿದ್ದು, ಸ್ಟೇಡಿಯಂನಲ್ಲಿ ಭಾರೀ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳು ಸೇರಿದ್ದಾರೆ. ವೈರಿ ರಾಷ್ಟ್ರಗಳ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿರುವುದು ಸದ್ಯ ದುಬೈ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟಿದೆ.

ಭಾರತ ತಂಡ ಪಾಕಿಸ್ತಾನದೊಂದಿಗೆ ಏಷ್ಯಾಕಪ್​ ಪಂದ್ಯವನ್ನು ಆಡಬಾರದು. ಈ ಪಂದ್ಯ ರದ್ದುಪಡಿಸಬೇಕು ಎಂದು ಹಲವರು ಜಾಲತಾಣಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಮೀರಿ, ಪಿಐಎಲ್​ ಅರ್ಜಿಗಳು ಸುಪ್ರೀಂಕೋರ್ಟ್​ ಮೆಟ್ಟಿಲೇರಿ, ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಅನುಮತಿ ನೀಡಬಾರದು ಎಂದು ಕೋರಿ ಸಲ್ಲಿಕೆಯಾಗಿತ್ತು. ಆದರೆ, ಈ ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಲಯ, ಮ್ಯಾಚ್​ಗೆ ಗ್ರೀನ್​ ಸಿಗ್ನಲ್​ ನೀಡಿತು. ಈ ಬೆನ್ನಲ್ಲೇ ವಿರೋಧಗಳ ಇನ್ನಷ್ಟು ತೀವ್ರಗೊಂಡಿದೆ.

ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ

ರಾಜಕೀಯ ಉದ್ವಿಗ್ನತೆ ಮತ್ತು ಬಹಿಷ್ಕಾರದ ಕರೆಗಳಿಂದ ಕೂಡಿರುವ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯವನ್ನು ತೀರ ಸೂಕ್ಷ್ಮವಾಗಿ ಪರಿಗಣಿಸಿರುವ ದುಬೈ ಪೊಲೀಸರು, ಸ್ಟೇಡಿಯಂ ಸುತ್ತಮುತ್ತ ಭಾರಿ ಭದ್ರತಾ ನಿಯಮಗಳನ್ನು ಜಾರಿಗೊಳಿಸಿದ್ದಾರೆ. 'ಎನ್​ಡಿಟಿವಿ' ವರದಿ ಪ್ರಕಾರ, ಪಂದ್ಯ ವೀಕ್ಷಿಸುವವರು ನಿಯಮವನ್ನು ಉಲ್ಲಂಘಿಸಿದರೆ, 1 ಲಕ್ಷ ರೂ.ನಿಂದ 7 ಲಕ್ಷ ರೂ.ವರೆಗೆ ದಂಡ ಹಾಕಬಹುದು ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ಗಡಿಪಾರು ಅಥವಾ ಜೈಲು ಶಿಕ್ಷೆಗೆ ಒಳಗಾಗುತ್ತಾರೆ ಎಂದು ತಿಳಿಸಿದೆ.

ಯಾವುದಕ್ಕೆಲ್ಲ ಅನುಮತಿ ಇಲ್ಲ

ಭದ್ರತಾ ನಿಯಮಗಳ ಪ್ರಕಾರ, ಸ್ಟೇಡಿಯಂಗೆ ಭೇಟಿ ಕೊಡುವ ಕ್ರಿಕೆಟ್​ ಪ್ರೇಮಿಗಳು, ಧ್ವಜಗಳು, ಬ್ಯಾನರ್‌ಗಳು, ಕೊಡೆ, ಕ್ಯಾಮೆರಾಗಳು, ಸೆಲ್ಫಿ ಸ್ಟಿಕ್‌ಗಳು, ಬಿಸಿಯಿರುವ ವಸ್ತುಗಳು ಮತ್ತು ಚೂಪಾದ ವಸ್ತುಗಳನ್ನು ತರುವಂತಿಲ್ಲ. ಇಂತಹ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇವುಗಳಲ್ಲಿ ಯಾವುದನ್ನಾದರೂ ನಿಯಮ ಮೀರಿ ಕೊಂಡೊಯ್ದರೆ, 1 ಲಕ್ಷ ರೂ.ನಿಂದ 7 ಲಕ್ಷ ರೂ. ರವರೆಗೆ ದಂಡ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net