ಏನಿದು ಲಂಡನ್​ ಬೃಹತ್​ ಪ್ರತಿಭಟನೆ? ಯಾರೀ ಟಾಮಿ ರಾಬಿನ್​ಸನ್? ಇಲ್ಲಿದೆ ಮಾಹಿತಿ | UK Protest

Untitled design (3)
Published on

UK Protest: ವಲಸೆ ವಿರೋಧಿಸಿ ಲಂಡನ್‌ನಲ್ಲಿ ಬೃಹತ್​ ಸಂಖ್ಯೆಯಲ್ಲಿ ಬೀದಿಗಿಳಿರುವ ಪ್ರತಿಭಟನಾಕಾರರು, ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ವಲಸಿಗ ವಿರೋಧಿ "ಯುನೈಟ್ ದಿ ಕಿಂಗ್‌ಡಮ್" ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಬಲವಾದ ರಾಷ್ಟ್ರೀಯತಾವಾದಿ ಮತ್ತು ವಲಸೆ ವಿರೋಧಿ ಸಿದ್ಧಾಂತವನ್ನು ಹೊಂದಿರುವ ರಾಜಕೀಯ ಚಳುವಳಿ ಇದಾಗಿದ್ದು, ಆಕ್ರೋಶಭರಿತ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ಇಂಗ್ಲೆಂಡ್​ನ ನಮಗೆ ವಾಪಾಸ್​ ಕೊಡಿ

ಅನೇಕ ಜನರು ರೈಲು ಮತ್ತು ಬಸ್ ಮೂಲಕ ಲಂಡನ್‌ಗೆ ಆಗಮಿಸಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಆದಾಗ್ಯೂ, ರ‍್ಯಾಲಿಯಲ್ಲಿ ಮಾಡಿದ ಭಾಷಣಗಳಲ್ಲಿ ಜನಾಂಗೀಯ ಪಿತೂರಿ ಸಿದ್ಧಾಂತಗಳು ಮತ್ತು ಮುಸ್ಲಿಂ ವಿರೋಧಿ ಹೇಳಿಕೆಗಳು ಕೇಳಿಬಂದಿವೆ ಎಂದು 'ಗಾರ್ಡಿಯನ್' ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಪ್ರತಿಭಟನಾಕಾರರು ಕೆಲವು ಅಧಿಕಾರಿಗಳನ್ನು ಥಳಿಸಿದ್ದಾರೆ ಎಂದು ಖಾಕಿ ಮೂಲಗಳು ತಿಳಿಸಿವೆ. "ಯುನೈಟ್ ದಿ ಕಿಂಗ್‌ಡಮ್" ರ‍್ಯಾಲಿಗೆ 1,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು, ಆದರೆ, ಕೆಲವರು ಖಾಕಿ ಪಡೆ ಮೇಲೆಯೇ ಹಲ್ಲೆ ನಡೆಸಿದೆ.

ರ‍್ಯಾಲಿಯಲ್ಲಿ ಭಾಗವಹಿಸುವ ಜನರ ಸಂಖ್ಯೆ 1,10,000ರಿಂದ 1,50,000ರ ನಡುವೆ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಯುಕೆ ಸರ್ಕಾರವನ್ನು ವಿಡಿಯೊ ಮೂಲಕ ಟೀಕಿಸಿದ್ದಾರೆ. "ಬ್ರಿಟಿಷರಾಗಿರುವುದರಲ್ಲಿ ಒಂದು ಸೌಂದರ್ಯ, ಹೆಮ್ಮೆ, ಸವಲತ್ತು ಇದೆ. ಆದರೆ, ನಾನು ಇಲ್ಲಿ ನೋಡುವುದು ಬ್ರಿಟನ್‌ನ ನಾಶ. ಅದು ಮಂದಗತಿಯಲ್ಲಿ ಪ್ರಾರಂಭವಾಯಿತು. ಆದರೀಗ, ಅದು ವೇಗಗೊಳ್ಳುತ್ತಿದೆ. ಅನಿಯಂತ್ರಿತ ವಲಸೆಯಿಂದಾಗಿ ಈ ಪರಿಸ್ಥಿತಿ ಉಂಟಾಗುತ್ತಿದೆ" ಎಂದು ಮಸ್ಕ್​ ಹೇಳಿದರು.

ಯಾರೀ ರಾಬಿನ್ಸನ್​?

ರಾಬಿನ್ಸನ್ (42) ಒಬ್ಬ ಬ್ರಿಟಿಷ್ ರಾಜಕಾರಣಿ. ತಮ್ಮ ಹುಟ್ಟಿನಿಂದಲೇ ಇಂಗ್ಲಿಷ್ ಡಿಫೆನ್ಸ್ ಲೀಗ್‌ನ ಸ್ಥಾಪಕರು ಮತ್ತು ಬ್ರಿಟನ್‌ನ ಅತ್ಯಂತ ಪ್ರಮುಖ ಬಲಪಂಥೀಯ ವ್ಯಕ್ತಿಗಳಲ್ಲಿ ಒಬ್ಬರು. ರಾಬಿನ್ಸನ್ ಬ್ರಿಟಿಷ್ ರಾಜಕೀಯದಲ್ಲಿ ಸಂಚಲನ ಹುಟ್ಟುಹಾಕಿರುವ ವ್ಯಕ್ತಿ. ಇಂಗ್ಲಿಷ್ ಡಿಫೆನ್ಸ್ ಲೀಗ್‌ನ ಸ್ಥಾಪಕರೆಂದು ಪ್ರಸಿದ್ಧರಾಗಿದ್ದಾರೆ ಮತ್ತು ವಲಸೆ ವಿರೋಧಿ ಹಾಗೂ ಇಸ್ಲಾಂ ವಿರೋಧಿ ಸಂಘಟನೆಗಳೊಂದಿಗೆ ಕೆಲಸ ಮಾಡಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ, ಸಿರಿಯನ್ ನಿರಾಶ್ರಿತರನ್ನು ಲೈಂಗಿಕ ಅಪರಾಧಿ ಎಂದು ಸುಳ್ಳು ಆರೋಪ ಮಾಡಿದ್ದ ಕಾರಣಕ್ಕೆ ರಾಬಿನ್ಸನ್‌ಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇಂತಹ ತಪ್ಪು ಮತ್ತೆ ಮರುಕಳಿಸಬಾರದು ಎಂಬ ಆದೇಶದ ಮೇರೆಗೆ ಈ ವರ್ಷದ ಆರಂಭದಲ್ಲಿ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net