

ಹಾಸನ: ಸಾವು ಯಾವಾಗ, ಯಾವ ರೂಪದಲ್ಲಿ ಬರುತ್ತೆ ಎಂದು ಊಹಿಸಿಕೊಳ್ಳುವುದೂ ಕಷ್ಟ. ತನ್ನಷ್ಟಕ್ಕೆ ತಾನು ಸ್ನೇಹಿತನೊಂದಿಗೆ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಾಜಿ ಸೈನಿಕರೊಬ್ಬರ ಮೇಲೆರಗಿದ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಈ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಂಡ್ಯ ನಿವಾಸಿ, ನಿವೃತ್ತ ಯೋಧ ಆರ್.ಎಲ್.ಪಟೇಲ್ ಸ್ನೇಹಿತರೊಡನೆ ಸಕಲೇಶಪುರ ಪಟ್ಟಣಕ್ಕೆ ಆಗಮಿಸಿದ್ದರು. ಅಲ್ಲೇ ಸಮೀಪವಿದ್ದ ಅಂಗಡಿಯೊಂದರಲ್ಲಿ ಸೋಮವಾರ ಕಾಫಿಪುಡಿ ಖರೀದಿಸಿ ರಸ್ತೆಬದಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಆ ಮಾರ್ಗದಲ್ಲೇ ಮರದ ಮೇಲೆ ಕುಳಿತ್ತಿದ್ದ ಜವರಾಯ ಅವರ ಪ್ರಾಣವನ್ನೇ ತೆಗೆದಿದ್ದಾನೆ. ಇದನ್ನೂ ಓದಿರಿ VIDEO: ರಸ್ತೆ ಮಧ್ಯೆ ತಾಯಿ-ಮಗಳ ಹತ್ಯೆಗೆ ಯತ್ನ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಸಕಲೇಶಪುರ ಪಟ್ಟಣದ ಶ್ರೀಗಂಧ ಹೋಟೆಲ್ ಮುಂಭಾಗ ಆರ್.ಎಲ್.ಪಟೇಲ್ ಮತ್ತು ಸ್ನೇಹಿತ ಒಟ್ಟಿಗೆ ಬರುತ್ತಿದ್ದಂತೆ ಅವರ ಮೇಲೆ ಮರದ ಕೊಂಬೆ ಮುರಿದು ಬಿದ್ದಿದ್ದು, ಸ್ನೇಹಿತ ಕೂಡಲೇ ಮೇಲೆದ್ದರೂ ಮಾಜಿ ಸೈನಿಕ ಮಾತ್ರ ಎಚ್ಚರಗೊಳ್ಳಲಿಲ್ಲ.
ಗಂಭೀರ ಗಾಯಗೊಂಡು ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಪಟೇಲ್ರನ್ನು ಸ್ಥಳೀಯರು ಆಂಬುಲೆನ್ಸ್ ಮುಖಾಂತರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಿದರಾದರೂ ಬದುಕಲಿಲ್ಲ. ಮೃತರಿಗೆ 35 ವರ್ಷ ವಯಸ್ಸಾಗಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.