ಜೀರ್ಣೋದ್ಧಾರ ಕಾಮಗಾರಿಗೆ 91ಲಕ್ಷ ರೂ.ಕೊರತೆ : ಪುರುಷೋತ್ತಮ ರಾವ್ ಸ್ಪಷ್ಟನೆ

venur
ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
Published on

ಬೆಳ್ತಂಗಡಿ: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಹಣಕಾಸಿನ ಕೊರತೆಯಾಗಿದೆ ಹೊರತು ಬ್ರಹ್ಮಕಲಶೋತ್ಸವಕ್ಕೆ ದಾನಿಗಳು ಸಹಕಾರ ನೀಡಿದ್ದು, ಯಾವುದೇ ಹಣದ ಸಮಸ್ಯೆ ಆಗಿರಲಿಲ್ಲ ಎಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2014ರಿಂದ ಬ್ರಹ್ಮಕಲಶೋತ್ಸವ ತನಕ ಕೈಗೊಂಡಿದ್ದ ಕಾಮಗಾರಿಗಳಿಗೆ 6.65 ಕೋಟಿ ರೂ.ಗಳಷ್ಟು ದೇಣಿಗೆ ಸಂಗ್ರಹವಾಗಿದೆ.ವಿವಿಧ ಕಾಮಗಾರಿಗಳಿಗೆ ಒಟ್ಟು 7.56 ಕೋಟಿ ರೂ. ಖರ್ಚು ಆಗಿದ್ದು 91 ಲಕ್ಷ ರೂ.ಕೊರತೆ ಆಗಿದೆ. ಇದರಲ್ಲಿ ಶಿಲ್ಪಿಗಳಿಗೆ, ತಾಮ್ರದ ಕೆಲಸ, ಮರದ ಕೆಲಸ, ನೀರಾವರಿ ಡಕ್ಟ್, ಸ್ಲಾಬ್ ಇತ್ಯಾದಿ ಕಾಮಗಾರಿ ಮಾಡಿದವರಿಗೆ ಪಾವತಿಗೆ ಬಾಕಿ ಇದೆ, ಭಕ್ತರ ಮತ್ತು ಶಾಸಕ ಹರೀಶ್ ಪೂಂಜ ಅವರ ಸಹಕಾರದಿಂದ ಸಾಲದಿಂದ ಮುಕ್ತರಾಗಲು ಪ್ರಯತ್ನ ನಡೆಯುತ್ತಿದೆ ಎಂದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ, ಸಂಗ್ರಹ ಆದ ಮೊತ್ತವನ್ನು ಬ್ಯಾಂಕ್ ಸಾಲಕ್ಕೆ ಕಂತು ಪಾವತಿಸಲು ಮಾರ್ಚ್ ಕೊನೆಗೆ ಕಚೇರಿಯಿಂದ ಚೆಕ್ ಪುಸ್ತಕ ಪಡೆಯಲು ಹೋದಾಗ ಆಡಳಿತಾಧಿಕಾರಿ ಚೆಕ್ ಪುಸ್ತಕ ನೀಡಲು ನಿರಾಕರಿಸಿದ್ದು, ಇದರಿಂದ ಕಂತು ಬಾಕಿ ಉಳಿದಿದೆ. ಮುಂದೆ ಹೆಚ್ಚುವರಿ ಬಡ್ಡಿಯನ್ನು ಭರಿಸ ಬೇಕಾಗುತ್ತದೆ ಎಂದರು.

ಬ್ರಹ್ಮಕಲಶೋತ್ಸವದ ಸಭೆ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕ ಉಮೇಶ್ ಮಾತನಾಡಿ, ಬ್ರಹ್ಮಕಲಶೋತ್ಸವದ ವಿದ್ಯುತ್ ದೀಪ ಅಲಂಕಾರ ಮತ್ತು 9 ದಿನಗಳ ಮನೋರಂಜನೆ, ಯಕ್ಷಗಾನ ಕಾರ್ಯಕ್ರಮಗಳು ದಾನಿಗಳ ಸಹಕಾರದಿಂದಲೇ ನಡೆದಿದೆ. ಇದರಿಂದ ಯಾವುದೇ ನಷ್ಟ ಆಗಿಲ್ಲ ಎಂದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಪ್ರಶಾಂತ್ ಹೆಗ್ಡೆ, ಸತೀಶ್ ಕೇರಿಯಾರ್, ಅಣ್ಣು ಮೂಲ್ಯ, ಕಾರ್ತಿಕ್, ಚಂಪಾ, ಯಶೋಧ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಅಧಿಕಾರಾವಧಿ 4-11-2023ಕ್ಕೆ ಮುಕ್ತಾಯವಾಗಿದ್ದು ಆಡಳಿತಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಆರ್ಥಿಕ ಕೊರತೆ ನೀಗಿಸುವ ಬಗ್ಗೆ ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತರ ಸಭೆಯನ್ನು 2023ರ ನವೆಂಬರ್ 25 ರಂದು ಸಮಿತಿ ಅಧ್ಯಕ್ಷ ತಿಮ್ಮಣ್ಣರಸ ಡಾ.ಪದ್ಮ ಪ್ರಸಾದ ಅಜಿಲರ ಮತ್ತು ಪದಾಧಿಕಾರಿಗಳ ಸಮ್ಮುಖ ನಡೆಸಿ ಮನೆ ಮನೆ ಭೇಟಿಯ ಮೂಲಕ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಎಂಟು ಗ್ರಾಮಗಳ ಸುಮಾರು 500 ಮನೆಗಳಿಗೆ ಭೇಟಿ ಮಾಡಿ 9 ಲಕ್ಷ ರೂ. ಖಾತೆಗೆ ಜಮೆ ಆಗಿದೆ.

ಪುರುಷೋತ್ತಮ ರಾವ್, ವೇಣೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net