ಬಿಜೆಪಿಗೆ ಜಿಲ್ಲೆಯಲ್ಲಿ ಶಾಂತಿ ಬೇಡವೇ ? ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನೆ

images
Published on

ಮಂಗಳೂರು: ಬೋಳಿಯಾರು ನಲ್ಲಿ ನಡೆದಿರುವ ಅಹಿತಕರ ಘಟನೆ ಬಿಜೆಪಿ ಪೂರ್ವನಿಯೋಜಿತ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಇಂತಹ ಘಟನೆಗಳನ್ನು ಸೃಷ್ಟಿಸುತ್ತಿದ್ದು, ಅವರಿಗೆ ಜಿಲ್ಲೆಯ ಶಾಂತಿ ಬೇಡವೇ? ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.


ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೋತ್ಸವ ಆಚರಿಸಲು ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ ಧಾರ್ಮಿಕ ಕೇಂದ್ರದ ಬಳಿ ಪದೇಪದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಳಿಕ ಅಹಿತಕರ ಘಟನೆ ಆರಂಭ ಪಡೆದಿದೆ ಎಂದು ಆರೋಪಿಸಿದರು.
ಬ್ರಾೃಂಡ್ ಮಂಗಳೂರು ಪ್ರಯತ್ನಕ್ಕೆ ಯಾರೂ ಸಮಸ್ಯೆ ಒಡ್ಡಬಾರದು. ಬೊಳಿಯಾರು ಘಟನೆಗೆ ಸಂಬಂಧಪಟ್ಟಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎನ್ನುವುದು ಕಾಂಗ್ರೆಸ್ ಉದ್ದೇಶವಾಗಿದೆ. ಬಿಜೆಪಿಯವರು ಮೊದಲು ಪ್ರಚೋದನಕಾರಿ ಹೇಳಿಕೆಗಳನ್ನು ನಿಲ್ಲಿಸಿ ಸಮರ್ಪಕ ತನಿಖೆಗೆ ಸಹಕರಿಸಲಿ ಎಂದು ಅವರು ಒತ್ತಾಯಿಸಿದರು.


ರಾಜೀನಾಮೆ ಸ್ವೀಕರಿಸಿಲ್ಲ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಪ್ರಸ್ತಾವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರಾದ ಹರೀಶ್ ಕುಮಾರ್ 2023ರ ವಿಧಾನಸಭಾ ಚುನಾವಣೆಗೆ ಮುನ್ನವೇ ಕೆಪಿಸಿಸಿ ಅಧ್ಯಕ್ಷರಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದನ್ನು ಹೈಕಮಾಂಡ್ ಅದನ್ನು ಸ್ವೀಕರಿಸಿಲ್ಲ ಎಂದು ಮಂಜುನಾಥ ಭಂಡಾರಿ ಹೇಳಿದರು.


ಹರೀಶ್ ಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಸಮಾಧಾನಪಡಿಸಿ ವಿಧಾನಸಭಾ ಚುನಾವಣೆತನಕ ಮುಂದುವರಿಯುವಂತೆ ಸೂಚಿಸಿದ್ದರು. ಲೋಕಸಭಾ ಚುನಾವಣೆ ಸಂದರ್ಭ ಕೂಡ ಹೈಕಮಾಂಡ್ ನಿರ್ದೇಶನ ಪ್ರಕಾರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನವನ್ನು ಅವರು ಹಿಂಪಡೆದಿದ್ದರು ಎಂದವರು ತಿಳಿಸಿದರು.


ಶಾಸಕ ಪೂಂಜಾ ಕ್ಷಮಾಯಾಚನೆಗೆ ಆಗ್ರಹ
ಪ್ರಾರ್ಥನಾ ಮಂದಿರಗಳಲ್ಲಿ ಶಸಾಸಗಳಿವೆ ಎಂದು ಆರೋಪ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಅದನ್ನು ಸಾಬೀತುಪಡಿಸಬೇಕು ಅಥವಾ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಾಹುಲ್ ಹಮೀದ್ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್ ಅವರು ಮಾತನಾಡಿ, ಬೊಳಿಯಾರು ಘಟನೆ ಹಿಂದಿರುವ ಬಿಜೆಪಿ ತಂತ್ರಗಾರಿಕೆ ಜನಸಾಮಾನ್ಯರಿಗೆ ಕೂಡ ಅರ್ಥವಾಗುತ್ತದೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಮತಾ ಗಟ್ಟಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಬೋದಯ ಆಳ್ವ, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಾಹುಲ್ ಹಮೀದ್, ಸೇವಾದಳ ಅಧ್ಯಕ್ಷ ಜೋಕಿಂ ಡಿಸೋಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net